ಸೆನೆಟ್‌ನಲ್ಲಿ ಬಿದ್ದು ಹೋದ ಟ್ರಂಪ್ ವಿರುದ್ಧದ ವಾಗ್ದಂಡನೆ

Update: 2020-02-06 17:11 GMT

ವಾಶಿಂಗ್ಟನ್, ಫೆ. 6: ಅಧಿಕಾರ ದುರುಪಯೋಗ ಮತ್ತು ಸಂಸತ್ತು ಕಾಂಗ್ರೆಸ್‌ನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಪ್ರತಿಪಕ್ಷ ಮಂಡಿಸಿರುವ ವಾಗ್ದಂಡನೆ ಸೆನೆಟ್‌ನಲ್ಲಿ ಬುಧವಾರ ಬಿದ್ದು ಹೋಗಿದೆ. ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಪ್ರಾಬಲ್ಯವಿರುವ ಸೆನೆಟ್‌ನಲ್ಲಿ ಸಂಸದರು ವಾಗ್ದಂಡನೆ ನಿರ್ಣಯದ ವಿರುದ್ಧವಾಗಿ ಮತ ಚಲಾಯಿಸಿದರು.

ಟ್ರಂಪ್ ವಾಗ್ದಂಡನೆ ವಿಚಾರಣೆ ಎದುರಿಸಿದ ಅಮೆರಿಕದ ಮೂರನೇ ಅಧ್ಯಕ್ಷರಾಗಿದ್ದಾರೆ. 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಲಾಭ ಪಡೆಯುವುದಕ್ಕಾಗಿ, ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ವಿರುದ್ಧ ಭ್ರಷ್ಟಾಚಾರ ತನಿಖೆ ನಡೆಸುವಂತೆ ಅವರು ಯುಕ್ರೇನ್ ಸರಕಾರದ ಮೇಲೆ ಒತ್ತಡ ಹೇರಿದ್ದರು ಎಂದು ಆರೋಪಿಸಲಾಗಿದೆ.

ಟ್ರಂಪ್ ವಿರುದ್ಧದ ಆರೋಪಗಳ ಪರವಾಗಿ ಬಲವಾದ ಪುರಾವೆಗಳನ್ನು ಮಂಡಿಸಲಾಯಿತಾದರೂ, ಟ್ರಂಪ್‌ರ ರಿಪಬ್ಲಿಕನ್ ಪಕ್ಷದ ಸಂಸದರು ತಮ್ಮ ನಿಷ್ಠೆಯನ್ನು ಬದಲಿಸಲಿಲ್ಲ ಹಾಗೂ ಅವರು ಟ್ರಂಪ್ ಪರವಾಗಿ ಮತ ಚಲಾಯಿಸಿದರು. ಅಧಿಕಾರ ದುರುಪಯೋಗಕ್ಕೆ ಸಂಬಂಧಿಸಿದ ನಿರ್ಣಯವು 52-48 ಹಾಗೂ ಕಾಂಗ್ರೆಸ್‌ನ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಕ್ಕೆ ಸಂಬಂಧಿಸಿದ ನಿರ್ಣಯವು 53-47 ಮತಗಳಿಂದ ಅಂಗೀಕಾರಗೊಂಡಿತು. ಟ್ರಂಪ್ ವಿರುದ್ಧ ವಾಗ್ದಂಡನೆ ಜಾರಿಗೆ ಬರಲು ಮೂರನೇ ಎರಡು ಬಹುಮತದಿಂದ ನಿರ್ಣಯ ಅಂಗೀಕಾರಗೊಳ್ಳಬೇಕಾಗಿತ್ತು.

ಟ್ರಂಪ್ ವಿರುದ್ಧ ಮಿಟ್ ರಾಮ್ನಿ ಬಂಡಾಯ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ರಿಪಬ್ಲಿಕನ್ ಪಕ್ಷದವರೇ ಆದ ಸೆನೆಟರ್ ಮಿಟ್ ರಾಮ್ನಿ ಬುಧವಾರ ತೀವ್ರವಾಗಿ ಟ್ರಂಪ್‌ರನ್ನು ಟೀಕಿಸಿದ್ದಾರೆ ಹಾಗೂ ವಾಗ್ದಂಡನೆ ನಿರ್ಣಯದಲ್ಲಿ ಟ್ರಂಪ್‌ಗೆ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ.

ರಾಮ್ನಿ, ಟ್ರಂಪ್‌ಗೆ ವಿರುದ್ಧವಾಗಿ ಮತ ಹಾಕಿದ ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಏಕೈಕ ಸಂಸದರಾಗಿದ್ದಾರೆ. ಅಧಿಕಾರ ದುರುಪಯೋಗಕ್ಕೆ ಸಂಬಂಧಿಸಿದ ನಿರ್ಣಯದಲ್ಲಿ ಟ್ರಂಪ್ ‘ದೋಷಿ’ ಎಂಬುದಾಗಿ ಅವರು ಮತ ಚಲಾಯಿಸಿದರೆ, ಕಾಂಗ್ರೆಸ್‌ನ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಕ್ಕೆ ಸಂಬಂಧಿಸಿದ ನಿರ್ಣಯದಲ್ಲಿ ಟ್ರಂಪ್ ‘ದೋಷಿಯಲ್ಲ’ ಎಂಬುದಾಗಿ ಮತ ಚಲಾಯಿಸಿದರು.

ಟ್ರಂಪ್ ಅಮೆರಿಕ ಪ್ರಜಾಪ್ರಭುತ್ವಕ್ಕೆ ಬೆದರಿಕೆ: ನ್ಯಾನ್ಸಿ ಪೆಲೋಸಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದ ವಾಗ್ದಂಡನೆ ನಿರ್ಣಯವನ್ನು ಸೆನೆಟ್ ತಿರಸ್ಕರಿಸಿರುವುದನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್, ಡೆಮಾಕ್ರಟಿಕ್ ಪಕ್ಷದ ನ್ಯಾನ್ಸಿ ಪೆಲೋಸಿ ಖಂಡಿಸಿದ್ದಾರೆ ಹಾಗೂ ಟ್ರಂಪ್ ಅಮೆರಿಕದ ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದ್ದಾರೆ ಎಂದು ಬಣ್ಣಿಸಿದ್ದಾರೆ.

‘‘ಇಂದು ಅಧ್ಯಕ್ಷರು ಮತ್ತು ಸೆನೆಟ್‌ನ ರಿಪಬ್ಲಿಕನ್ ಸಂಸದರು ಅರಾಜಕತೆಯನ್ನು ಸಹಜವಾಗಿಸಿದ್ದಾರೆ ಹಾಗೂ ನಮ್ಮ ಸಂವಿಧಾನದ ಅಧಿಕಾರ ಸಮತೋಲನದ ವ್ಯವಸ್ಥೆಯನ್ನು ತಿರಸ್ಕರಿಸಿದ್ದಾರೆ’’ ಎಂದು ಟ್ರಂಪ್‌ರನ್ನು ಸೆನೆಟ್ ಆರೋಪದಿಂದ ಮುಕ್ತಗೊಳಿಸಿದ ಬಳಿಕ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದರು.

ಈ ಹಿಂದೆ, ಡೆಮಾಕ್ರಟಿಕ್ ಸಂಸದರ ಪ್ರಾಬಲ್ಯವಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಟ್ರಂಪ್ ವಿರುದ್ಧದ ವಾಗ್ದಂಡನೆ ನಿರ್ಣಯವನ್ನು ಅಂಗೀಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News