ಗಾರ್ಗಿ ಕಾಲೇಜು ಪ್ರಕರಣದಲ್ಲಿ ಹೊರಗಿನವರ ಕೈವಾಡ: ಕೇಂದ್ರ ಸಚಿವ ಪೋಖ್ರಿಯಾಲ್

Update: 2020-02-10 15:41 GMT

ಹೊಸದಿಲ್ಲಿ,ಫೆ.10: ಕಳೆದ ವಾರ ದಿಲ್ಲಿಯ ಸರ್ವಮಹಿಳಾ ಗಾರ್ಗಿ ಕಾಲೇಜಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಹಲ್ಲೆಗಳ ಹಿಂದೆ ಹೊರಗಿನವರ ಕೈವಾಡವಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ ಪೋಖ್ರಿಯಾಲ್ ಅವರು ಸೋಮವಾರ ಹೇಳಿದರು.

ಕಾಲೇಜ್ ಕ್ಯಾಂಪಸ್‌ಗೆ ನುಗ್ಗಿದ್ದ ಪಾನಮತ್ತರ ಗುಂಪು ತಮ್ಮ ಮೇಲೆ ಲೈಂಗಿಕ ಹಲ್ಲೆಗಳನ್ನು ನಡೆಸಿತ್ತು ಮತ್ತು ಭದ್ರತಾ ಸಿಬ್ಬಂದಿ ನಿಷ್ಕ್ರಿಯರಾಗಿದ್ದರು ಎಂದು ಹಲವಾರು ವಿದ್ಯಾರ್ಥಿನಿಯರು ದೂರಿದ್ದಾರೆ.

ಲೋಕಸಭೆಯಲ್ಲಿ ಪ್ರಶ್ನೆ ವೇಳೆಯಲ್ಲಿ ಕಾಂಗ್ರೆಸ್ ಸಂಸದ ಗೌರವ ಗೊಗೊಯಿ ಅವರ ಪ್ರಶ್ನೆಗೆ ಉತ್ತರಿಸಿದ ಪೋಖ್ರಿಯಾಲ್,ಘಟನೆಯಲ್ಲಿ ಭಾಗಿಯಾಗಿದ್ದವರು ವಿದ್ಯಾರ್ಥಿಗಳಾಗಿರಲಿಲ್ಲ,ಹೊರಗಿನವರಾಗಿದ್ದರು. ಇದೊಂದು ಕೆಟ್ಟ ಘಟನೆ. ಈ ಬಗ್ಗೆ ಕ್ರಮವನ್ನು ಕೈಗೊಳ್ಳುವಂತೆ ಕಾಲೇಜು ಆಡಳಿತಕ್ಕೆ ಸೂಚಿಸಲಾಗಿದೆ ಎಂದರು.

ತನ್ಮಧ್ಯೆ ಗಾರ್ಗಿ ಕಾಲೇಜಿನ ನೂರಕ್ಕೂ ಅಧಿಕ ವಿದ್ಯಾರ್ಥಿನಿಯರು ಸೋಮವಾರ ಸಂಸ್ಥೆಯ ಪ್ರವೇಶದ್ವಾರದ ಹೊರಗೆ ಪ್ರತಿಭಟನೆಯನ್ನು ನಡೆಸಿದರು.

ಕಾಲೇಜು ಅಧಿಕಾರಿಗಳು ಸಲ್ಲಿಸಿರುವ ದೂರಿನ ಮೇರೆಗೆ ಸೋಮವಾರ ಹೌಜ್ ಖಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದಕ್ಕೂ ಮುನ್ನ ಸ್ವಯಂಪ್ರೇರಿತ ತನಿಖೆಯನ್ನು ಆರಂಭಿಸಿದ್ದ ಪೊಲೀಸರು ಸಿಸಿಟಿವಿ ತುಣುಕುಗಳನ್ನು ಪರಿಶೀಲಿಸಿದ್ದರು. ಹೆಚ್ಚುವರಿ ಡಿಸಿಪಿ (ದಕ್ಷಿಣ) ಗೀತಾಂಜಲಿ ಖಂಡೇಲವಾಲ್ ಅವರು ತನಿಖೆಯ ಉಸ್ತುವಾರಿಯನ್ನು ವಹಿಸಿದ್ದಾರೆ.

ಗುರುವಾರ ಸಂಜೆ ಗಾರ್ಗಿ ಕಾಲೇಜಿನಲ್ಲಿ ವಾರ್ಷಿಕೋತ್ಸವ ನಡೆಯುತ್ತಿದ್ದಾಗ ಬಲವಂತದಿಂದ ಒಳನುಗ್ಗಿದ ದುಷ್ಕರ್ಮಿಗಳು ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ ದಾಂಧಲೆಯನ್ನು ನಡೆಸಿದ್ದರು.

ಎನ್‌ಸಿಡಬ್ಲ್ಯು ತಂಡದ ಭೇಟಿ

ಗಾರ್ಗಿ ಕಾಲೇಜಿನಲ್ಲಿ ನಡೆದ ಘಟನೆಯನ್ನು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲು )ವು ಗಂಭೀರವಾಗಿ ಪರಿಗಣಿಸಿದೆ. ಸೋಮವಾರ ವಿದ್ಯಾರ್ಥಿನಿಯರ ಪ್ರತಿಭಟನೆಯ ನಡುವೆಯೇ ಆಯೋಗದ ತಂಡವೊಂದು ಕಾಲೇಜಿಗೆ ಭೇಟಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News