ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲಿರುವ ವಿದೇಶಿ ಪ್ರತಿನಿಧಿಗಳ ಇನ್ನೊಂದು ತಂಡ

Update: 2020-02-10 15:43 GMT

ಹೊಸದಿಲ್ಲಿ,ಫೆ.10: ಜಮ್ಮು-ಕಾಶ್ಮೀರದಲ್ಲಿ ಸಹಜ ಸ್ಥಿತಿಯನ್ನು ಮರಳಿಸಲು ತೆಗೆದುಕೊಳ್ಳಲಾಗಿರುವ ಕ್ರಮಗಳನ್ನು ಹೊರಜಗತ್ತಿಗೆ ತೋರಿಸುವ ಸರಕಾರದ ಪ್ರಯತ್ನಗಳ ಭಾಗವಾಗಿ ವಿದೇಶಿ ಪ್ರತಿನಿಧಿಗಳ ಎರಡನೇ ತಂಡವು ಈ ವಾರ ಅಲ್ಲಿಗೆ ಭೇಟಿ ನೀಡಲಿದೆ. ತಂಡದಲ್ಲಿ ಐರೋಪ್ಯ ಒಕ್ಕೂಟಕ್ಕೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ತಂಡದ ಎರಡು ದಿನಗಳ ಭೇಟಿ ಬುಧವಾರ ಆರಂಭಗೊಳ್ಳಲಿದೆ. ತಂಡದಲ್ಲಿರುವ 25 ಪ್ರತಿನಿಧಿಗಳ ಪೈಕಿ 10 ಜನರು ಐರೋಪ್ಯ ಒಕ್ಕೂಟಕ್ಕೆ ಸೇರಿದವರಾಗಿದ್ದಾರೆ. ತಂಡವು ಬದ್ಗಾಮ್‌ಗೆ ಭೇಟಿ ನೀಡಲಿದ್ದು,ಸೇನೆಯು ಅದಕ್ಕೆ ವಿವರಗಳನ್ನು ನೀಡಲಿದೆ. ಕಳೆದ ತಿಂಗಳು ಅಮೆರಿಕ ಸೇರಿದಂತೆ 15 ರಾಷ್ಟ್ರಗಳ ಪ್ರತಿನಿಧಿಗಳ ತಂಡವು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಐರೋಪ್ಯ ಒಕ್ಕೂಟವು ಈ ಪ್ರವಾಸವನ್ನು ತಪ್ಪಿಸಿಕೊಂಡಿತ್ತು. ಐರೋಪ್ಯ ಸಂಸತ್‌ನ ಸದಸ್ಯರು ‘ನಿರ್ದೇಶಿತ ಪ್ರವಾಸ’ದಲ್ಲಿ ಆಸಕ್ತಿ ಹೊಂದಿಲ್ಲ ಎಂದು ಮೂಲಗಳು ಆಗ ತಿಳಿಸಿದ್ದವು. ತನ್ನ ಪ್ರತಿನಿಧಿಗಳು ನಂತರ ಕಾಶ್ಮೀರ ಕಣಿವೆಗೆ ಭೇಟಿ ನೀಡುತ್ತಾರೆ ಎಂದು ಐರೋಪ್ಯ ಸಂಸತ್ ತಿಳಿಸಿತ್ತು.

ಸರಕಾರವು ಜಮ್ಮು-ಕಾಶ್ಮೀರಕ್ಕೆ ವಿದೇಶಿ ಪ್ರತಿನಿಧಿಗಳ ಪ್ರವಾಸವನ್ನು ಏರ್ಪಡಿಸಿರುವುದು ಇದು ಎರಡನೇ ಬಾರಿಯಾಗಿದೆ. ಕಳೆದ ತಿಂಗಳು ಕಾಶ್ಮೀರ ಕಣಿವೆಗೆ ಭೇಟಿ ನೀಡಿದ್ದ ತಂಡವು ಸೇನೆಯಿಂದ ಮಾಹಿತಿಗಳನ್ನ ಪಡೆದುಕೊಂಡಿತ್ತು ಮತ್ತು ರಾಜಕೀಯ ನಾಯಕರ ಗುಂಪೊಂದರೊಂದಿಗೆ ಸಂವಾದ ನಡೆಸಿತ್ತು.ಇದಕ್ಕೂ ಮುನ್ಯ ಐರೋಪ್ಯ ಸಂಸತ್ತಿನ ಸದಸ್ಯರ ತಂಡವೊಂದು ಖಾಸಗಿಯಾಗಿ ಕಾಶ್ಮೀರಕ್ಕೆ ಭೇಟಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News