ಕೊರೋನಾ ವೈರಸ್: 1000ಕ್ಕೂ ಅಧಿಕ ಮಂದಿ ಬಲಿ

Update: 2020-02-11 03:06 GMT

ಬೀಜಿಂಗ್/ ಜಿನೀವಾ: ಕೊರೋನಾ ವೈರಸ್ ಸಾಂಕ್ರಾಮಿಕ ಚೀನಾದಲ್ಲಿ 1000ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ. ಈ ಮಾರಕ ರೋಗ ಚೀನಾದಿಂದ ಹೊರಗೆ ಹರಡಿದರೆ ಕಾಳ್ಗಿಚ್ಚಿನಂತೆ ವ್ಯಾಪಿಸಲಿದ್ದು, ಇದರ ನಿಯಂತ್ರಣ ಕೈತಪ್ಪದಂತೆ ಮನುಕುಲ ಎಚ್ಚರ ವಹಿಸಬೇಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ.

ಸಾಂಕ್ರಾಮಿಕದ ಕೇಂದ್ರ ಬಿಂದು ಹ್ಯುಬೀ ಪ್ರಾಂತ್ಯದಲ್ಲಿ ಸೋಮವಾರ ಮತ್ತೆ 103 ಮಂದಿ ಮೃತಪಟ್ಟಿದ್ದಾರೆ. ರವಿವಾರ 91 ಮಂದಿ ಮೃತರಾಗಿದ್ದರು.

ವೈರಸ್ ಸೋಂಕು ಕಾಣಿಸಿಕೊಂಡ ಬಳಿಕ ಗರಿಷ್ಠ ಸಂಖ್ಯೆಯ ಸಾವಿನ ಪ್ರಮಾಣ ಸೋಮವಾರ ದಾಖಲಾಗಿದೆ. ಆದರೆ ಹೊಸ ಪ್ರಕರಣಗಳ ಸಂಖ್ಯೆ (2097) ರವಿವಾರದ ಸಂಖ್ಯೆ (2618)ಕ್ಕೆ ಹೋಲಿಸಿದರೆ ಕಡಿಮೆ. ಹೊಸ ಪ್ರಕರಣಗಳು ಇಳಿಕೆಯಾಗಿರುವುದು ಇದೇ ಮೊದಲಲ್ಲ. ಫೆ.7ರಂದು 2841 ಪ್ರಕರಣಗಳು ಬೆಳಕಿಗೆ ಬಂದಿದ್ದರೆ, ಮರು ದಿನ ಈ ಸಂಖ್ಯೆ 2147ಕ್ಕೆ ಇಳಿದಿತ್ತು.

ಚೀನಾದಲ್ಲಿ ಒಟ್ಟು 42 ಸಾವಿರಕ್ಕೂ ಅಧಿಕ ಪ್ರಕರಣಗಳು ದೃಢಪಟ್ಟಿದ್ದು, ಉಳಿದಂತೆ 24 ದೇಶಗಳಲ್ಲಿ 319 ಪ್ರಕರಣಗಳು ಬೆಳಕಿಗೆ ಬಂದಿವೆ. 3700 ಮಂದಿ ಸಾಗರಯಾನಿಗಳನ್ನು ಹೊಂದಿದ್ದ ಡೈಮಂಡ್ ಪ್ರಿನ್ಸೆಸ್ ಹಡಗನ್ನು ಜಪಾಣ್‌ನ ಯೊಕೊಹಮ ಬಂದರಿನಲ್ಲಿ ನಿರ್ಬಂಧಿಸಲಾಗಿದ್ದು, ಇದರಲ್ಲಿ 65 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಹಡಗಿನಲ್ಲಿ ಒಟ್ಟು 135 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಂತಾಗಿದೆ.

ಕೊರೋನಾ ವೈರಸ್ ತಪಾಸಣೆ ಹಾಗೂ ಚಿಕಿತ್ಸಾ ವಿಧಾನ ಕಂಡುಹಿಡಿಯಲು ವಿಜ್ಞಾನಿಗಳ ಸಮೂಹ ಶ್ರಮಿಸುತ್ತಿದ್ದು, ಜಾಗತಿಕವಾಗಿ 168 ಪ್ರಯೋಗಾಲಯಗಳು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News