ಶಾಹೀನ್‌ಬಾಗ್ ಪರವಾಗಿ ನಿಂತ ದಿಲ್ಲಿ ಮತದಾರರು

Update: 2020-02-13 05:07 GMT

ದಿಲ್ಲಿ ಚುನಾವಣೆಯಲ್ಲಿ ಶಾಹೀನ್ ಬಾಗ್ ಪ್ರಮುಖ ವಿಷಯವಾಗಿತ್ತು. ಇಂದು ಸಿಎಎ ವಿರುದ್ಧದ ಪ್ರತಿಭಟನೆಯ ನೇತೃತ್ವವನ್ನು ‘ಶಾಹೀನ್‌ಬಾಗ್’ ಪರೋಕ್ಷವಾಗಿ ಹೊತ್ತುಕೊಂಡಿದೆ. ಭಾರತ ‘ಶಾಹೀನ್‌ಬಾಗ್’ನಲ್ಲಿ ಒಂದಾಗಿದೆ. ಕೇಜ್ರಿವಾಲ್ ಪಕ್ಷ ತನ್ನ ಅಭಿವೃದ್ಧಿ ಕಾರ್ಯಗಳನ್ನು ತೋರಿಸಿ ಮತ ಯಾಚಿಸಿದರೆ, ಬಿಜೆಪಿ ‘ಶಾಹೀನ್ ಬಾಗ್ ಪ್ರತಿಭಟನೆ’ಯನ್ನು ತೋರಿಸಿ ಮತ ಯಾಚಿಸಿತ್ತು. ಅಮಿತ್ ಶಾ ಒಂದು ಹೆಜ್ಜೆ ಮುಂದೆ ಹೋಗಿ ‘‘ಇವಿಎಂನ ಪ್ರತಿ ಗುಂಡಿಯೂ ಶಾಹೀನ್ ಬಾಗ್ ವಿರುದ್ಧ ನೀಡುವ ತೀರ್ಪು’ ಎಂಬ ಹೇಳಿಕೆಯನ್ನು ಸಾರ್ವಜನಿಕ ಸಮಾವೇಶದಲ್ಲಿ ನೀಡಿದ್ದರು. ಶಾಹೀನ್‌ಬಾಗ್ ವಿರುದ್ಧ ಮತ ಚಲಾಯಿಸಬೇಕೆಂಬ ಕರೆಯ ಅರ್ಥವೇ, ಸಿಎಎ ಪರವಾಗಿರುವವರ ವಿರುದ್ಧ ಮತ ಚಲಾಯಿಸಿ ಎಂದಾಗಿದೆ. ಅಂದರೆ, ದಿಲ್ಲಿಯ ಚುನಾವಣೆಯಲ್ಲಿ ಬಿಜೆಪಿಯು ಸಿಎಎ ಪರವಾಗಿರುವವರು ಮತ್ತು ಸಿಎಎ ವಿರುದ್ಧವಾಗಿರುವವರು ಎಂದು ವಿಂಗಡಿಸಿತ್ತು. ಬಿಜೆಪಿಗೆ ಮತ ನೀಡುವುದೆಂದರೆ, ಸಿಎಎ ಕಾಯ್ದೆಯ ಪರವಾಗಿ ಮತ ನೀಡುವುದು ಎನ್ನುವುದನ್ನು ಬಿಜೆಪಿ ನೇರವಾಗಿಯೇ ಘೋಷಿಸಿತ್ತು. ಅಷ್ಟೇ ಅಲ್ಲ, ಶಾಹೀನ್‌ಬಾಗ್‌ನಲ್ಲಿರುವ ಪ್ರತಿಭಟನಾಕಾರರನ್ನು ಬಿಜೆಪಿಯ ನಾಯಕರು ಭಯೋತ್ಪಾದಕರೆಂದು ಕರೆದಿದ್ದರು. ಶಾಹೀನ್‌ಬಾಗ್‌ನಲ್ಲಿ ‘ಜಿಹಾದಿ’ಗಳಿದ್ದಾರೆ ಎಂದು ಆರೋಪ ಮಾಡಿದ್ದರು. ದಿಲ್ಲಿಯ ಫಲಿತಾಂಶ ಈ ನಿಟ್ಟಿನಲ್ಲಿ ದೇಶಕ್ಕೆ ಸ್ಪಷ್ಟವಾದ ಸಂದೇಶವೊಂದನ್ನು ನೀಡಿದೆ. ಶಾಹೀನ್‌ಬಾಗ್‌ನ ಕುರಿತಂತೆ ಬಿಜೆಪಿ ಯಾವ ಆರೋಪಗಳನ್ನು ಮಾಡಿತ್ತೋ ಅದನ್ನು ಸುಳ್ಳು ಎಂದು ಘಂಟಾಘೋಷವಾಗಿ ಹೇಳಿದೆ. ಅಷ್ಟೇ ಅಲ್ಲ, ಈ ದೇಶ ಸಿಎಎ ವಿರುದ್ಧವಾಗಿದೆ ಎನ್ನುವುದನ್ನೂ ಸ್ಪಷ್ಟಪಡಿಸಿದೆ. ಶಾಹೀನ್ ಬಾಗ್‌ನ್ನು ಚುನಾವಣೆ ವಸ್ತುವಾಗಿ ಸ್ವತಃ ಅಮಿತ್ ಶಾ ಅವರೇ ಬಿಂಬಿಸಿರುವುದರಿಂದ, ಇದೀಗ ಜನರ ತೀರ್ಪನ್ನು ಅಮಿತ್ ಶಾ ಒಪ್ಪಿಕೊಳ್ಳುತ್ತಾರೆಯೇ ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಒಂದು ವೇಳೆ ಶಾಹೀನ್ ಬಾಗ್ ಪ್ರತಿಭಟನಾಕಾರರು ದೇಶದ್ರೋಹಿಗಳೇ ಆಗಿದ್ದರೆ, ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿ, ಸಿಎಎ ವಿರುದ್ಧದ ಹೋರಾಟಗಾರರನ್ನು ತಿರಸ್ಕರಿಸುತ್ತಿದ್ದರು. ಇದೀಗ ದಿಲ್ಲಿಯ ಜನರು ಶಾಹೀನ್‌ಬಾಗ್ ಜೊತೆಗಿದ್ದಾರೆ ಎನ್ನುವುದು ಸಾಬೀತಾಗಿದೆ. ಈ ಕಾರಣದಿಂದಾಗಿ ಅಮಿತ್ ಶಾ ತಂಡ ಶಾಹೀನ್‌ಬಾಗ್ ಬಗ್ಗೆ ಮಾತ್ರವಲ್ಲ, ಸಿಎಎ ಕಾಯ್ದೆಯ ಕುರಿತಂತೆ ಆತ್ಮವಿಮರ್ಶೆ ಮಾಡಬೇಕಾದಂತಹ ಸಂದರ್ಭ ಬಂದಿದೆ. ಒಂದು ವೇಳೆ ದಿಲ್ಲಿ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದರೆ ಅದು ಶಾಹೀನ್ ಬಾಗ್‌ನ ವಿರುದ್ಧದ ತೀರ್ಪು ಎಂದು ಮೋದಿ ಬಹಿರಂಗವಾಗಿಯೇ ಘೋಷಿಸುತ್ತಿದ್ದರು ಮತ್ತು ಅದನ್ನೇ ಮುಂದಿಟ್ಟುಕೊಂಡು ಶಾಹೀನ್‌ಬಾಗ್‌ನ ಪ್ರತಿಭಟನಾಕಾರರ ವಿರುದ್ಧ ಸೇನೆಯನ್ನು ಬಳಸುತ್ತಿದ್ದರು. ‘ಚುನಾವಣೆಯ ಬಳಿಕ ಶಾಹೀನ್‌ಬಾಗ್ ಇನ್ನೊಂದು ಜಲಿಯನ್‌ವಾಲಾಬಾಗ್ ಆಗುವ ಸಾಧ್ಯತೆ ಇದೆ’ ಎಂಬ ಆತಂಕವನ್ನು ಹಲವರು ವ್ಯಕ್ತಪಡಿಸಿದ್ದರು. ಇದಕ್ಕೆ ಪೂರಕವಾಗಿ ಸುಪ್ರೀಂಕೋರ್ಟ್ ಕೂಡ ಶಾಹೀನ್ ಬಾಗ್ ಪ್ರತಿಭಟನೆಯ ಕುರಿತಂತೆ ತನ್ನ ಕಳವಳವನ್ನು ವ್ಯಕ್ತಪಡಿಸಿತ್ತು. ಸುಪ್ರೀಂಕೋರ್ಟ್ ತೀರ್ಪು ಮತ್ತು ದಿಲ್ಲಿ ಜನಾದೇಶವನ್ನು ಬಳಸಿಕೊಂಡು ಸೇನೆಯನ್ನು ಬಳಸಿ ಶಾಹೀನ್ ಬಾಗ್ ಪ್ರತಿಭಟನಾಕಾರರನ್ನು ಚದುರಿಸುವ ಯೋಜನೆಯೊಂದು ಸರಕಾರದ ಬಳಿಯಿತ್ತು. ಆದರೆ ದಿಲ್ಲಿ ಫಲಿತಾಂಶದಿಂದ ಅಂತಹದೊಂದು ಅಪಾಯದಿಂದ ಶಾಹೀನ್ ಬಾಗ್ ಪಾರಾಗಿದೆ. ಇದೀಗ ಚೆಂಡು ಸರಕಾರದ ಕೈಯಲ್ಲಿದೆ. ಅಸ್ಸಾಂನಲ್ಲಿ ನಡೆದ ಆತುರಾತುರದ ಎನ್‌ಆರ್‌ಸಿಯಿಂದ ಆದ ಪ್ರಮಾದವನ್ನು ತಪ್ಪಿಸುವುದಕ್ಕಾಗಿ ಸಿಎಎ ಕಾಯ್ದೆಯನ್ನು ಜಾರಿಗೊಳಿಸಿತು. ಈ ಮೂಲಕ ಈ ದೇಶದ ಮುಸ್ಲಿಮರ ವಿರುದ್ಧ ಎಲ್ಲ ಧರ್ಮಗಳನ್ನು ಒಟ್ಟಾಗಿ ಎತ್ತಿಕಟ್ಟುವ ದುರುದ್ದೇಶ ಸರಕಾರದ ಬಳಿಯಿತ್ತು. ಆದರೆ ಸಿಎಎ ಕಾಯ್ದೆಯ ವಿರುದ್ಧ ಇಡೀ ದೇಶ ಧರ್ಮಾತೀತವಾಗಿ ಒಂದಾಯಿತು. ಇದು ಮೋದಿ ಸರಕಾರದ ಸಂಚನ್ನು ವಿಫಲಗೊಳಿಸಿತು. ಇಂದು ಶಾಹೀನ್‌ಬಾಗ್‌ನಲ್ಲಿ ಕೇವಲ ಮುಸ್ಲಿಮರಷ್ಟೇ ಧರಣಿ ಕೂತಿರುವುದಲ್ಲ. ಸಿಖ್ ಧರ್ಮೀಯರು ಅವರ ಬೆಂಬಲಕ್ಕೆ ನಿಂತಿದ್ದಾರೆ. ಅವರ ಊಟ, ವಸತಿಗೆ ಆಧಾರವಾಗಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕಲಾಕಾರರು, ಸಾಹಿತಿಗಳು, ಸಂಗೀತ ವಿದ್ವಾಂಸರೂ ಶಾಹೀನ್‌ಬಾಗ್‌ನಲ್ಲಿ ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಮಹಾತ್ಮಾಗಾಂಧೀಜಿ, ಅಂಬೇಡ್ಕರ್, ಭಗತ್ ಸಿಂಗ್, ಅಬುಲ್ ಕಲಾಂ ಆಝಾದ್‌ರಂತಹ ನಾಯಕರ ಚಿತ್ರಗಳು ಶಾಹೀನ್ ಬಾಗ್‌ನಲ್ಲಿ ರಾರಾಜಿಸುತ್ತಿವೆ. ಭಾರತದ ಸರ್ವ ವೈವಿಧ್ಯತೆಗಳ ಸಂಗಮವಾಗಿ ಕಂಗೊಳಿಸುತ್ತಿದೆ ಶಾಹೀನ್ ಬಾಗ್. ಒಂದು ವೇಳೆ, ಇದರ ವಿರುದ್ಧ ಸೇನೆ ಬಳಸುವುದೆಂದರೆ, ಭಾರತದ ಅಸ್ಮಿತೆಯ ಮೇಲೆ ದಾಳಿ ಮಾಡಿದಂತೆ. ದಿಲ್ಲಿ ಫಲಿತಾಂಶವೂ ಇದನ್ನೇ ಹೇಳಿದೆ.

ಅಮಿತ್ ಶಾ ತಮ್ಮ ಹಟದಿಂದ ಹಿಂದೆ ಸರಿಯಲೇ ಬೇಕು. ಶಾಹೀನ್ ಬಾಗ್ ಪ್ರತಿಭಟನಾಕಾರರನ್ನು ಭಾರತೀಯರ ಧ್ವನಿಯೆಂದು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕಾಗಿದೆ. ಜೊತೆಗೆ ಅವರ ಮಾತುಗಳೇನು ಎನ್ನುವುದನ್ನು ಮುಕ್ತ ಮನಸ್ಸಿನಿಂದ ಆಲಿಸಬೇಕು. ಅವರೊಂದಿಗೆ ಮಾತುಕತೆಗೆ ಸಿದ್ಧರಾಗಬೇಕು. ಮುಸ್ಲಿಮರು ಕೂಡ ಈ ದೇಶದ ಅವಿಭಾಜ್ಯ ಅಂಗ. ಅವರ ಆತಂಕಗಳೂ ಭಾರತದ ಆತಂಕಗಳು ಎನ್ನುವುದನ್ನು ಅರಿತು ಅದನ್ನು ಆಲಿಸಿ ರಾಜಧರ್ಮವನ್ನು ಪಾಲಿಸಬೇಕು. ಮುಖ್ಯವಾಗಿ ಧರ್ಮದ ಆಧಾರದಲ್ಲಿ ಸಿಎಎ ಕಾಯ್ದೆ ಜಾರಿಗೊಳಿಸಿರುವುದು ಸಂವಿಧಾನದ ಆಶಯಗಳಿಗೆ ಧಕ್ಕೆ ತಂದಿದೆ. ಸಿಎಎ ಕಾಯ್ದೆ ಜಾರಿಗೊಳಿಸುವುದಾದರೆ ಧರ್ಮದ ಆಧಾರದಲ್ಲಿ ಅದನ್ನು ಜಾರಿಗೊಳಿಸಬಾರದು. ಮುಖ್ಯವಾಗಿ ವಿದೇಶಿಯರಿಗೆ ಪೌರತ್ವ ನೀಡುವ ಕಾನೂನು ಈಗಾಗಲೇ ಜಾರಿಯಲ್ಲಿದೆ. ಹೊಸ ಸಿಎಎಯ ಅಗತ್ಯವಿಲ್ಲ. ಎನ್‌ಆರ್‌ಸಿಯಲ್ಲಿ ಪೌರತ್ವ ಕಳೆದುಕೊಂಡವರು ಯಾರೂ ವಿದೇಶಿಯರಲ್ಲ, ಅವರು ದಾಖಲೆ ನೀಡಲು ವಿಫಲರಾದವರು ಎನ್ನುವ ವಾಸ್ತವವನ್ನು ಒಪ್ಪಿಕೊಳ್ಳಬೇಕು. ಒಂದೋ ಸಿಎಎಯನ್ನು ಹಿಂದೆಗೆಯಬೇಕು ಅಥವಾ ಅಲ್ಲಿ ಧಾರ್ಮಿಕ ವಿಭಜನೆಯನ್ನು ಕೈಬಿಡಬೇಕು. ಹಾಗೆಯೇ ದೇಶದಲ್ಲಿ ಯಾವ ಕಾರಣಕ್ಕೂ ಎನ್‌ಆರ್‌ಸಿ ಜಾರಿಗೊಳ್ಳುವುದಿಲ್ಲ ಎನ್ನುವ ಸ್ಪಷ್ಟ ಭರವಸೆಯನ್ನು ದೇಶಕ್ಕೆ ನೀಡಬೇಕು. ಎನ್‌ಪಿಆರ್‌ನಲ್ಲಿರುವ ಅನಗತ್ಯ ಪ್ರಶ್ನೆಗಳನ್ನು ಸಂಪೂರ್ಣ ಕೈ ಬಿಡಬೇಕು. ಈ ಮೂಲಕ ಸರಕಾರ ಅನಗತ್ಯ ವಿವಾದವೊಂದಕ್ಕೆ ಅಂತ್ಯ ಹಾಡಬೇಕು. ಇಂದು ಸಿಎಎ ಕಾರಣದಿಂದ ದೇಶದಲ್ಲಿ ಉಂಟಾಗಿರುವ ಅರಾಜಕತೆಯಿಂದ ಹೆದರಿ ಉದ್ಯಮಿಗಳು ಬಂಡವಾಳ ಹೂಡಿಕೆಗೆ ಹಿಂದೇಟು ಹಾಕುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಸರಕಾರ ದೇಶದ ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕಾದರೆ, ಮೊದಲು ದೇಶದೊಳಗೆ ಸೌಹಾರ್ದ ವಾತಾವರಣವೊಂದನ್ನು ಸೃಷ್ಟಿಸುವುದು ಅತ್ಯಗತ್ಯವಾಗಿದೆ. ಶಾಹೀನ್ ಬಾಗ್ ಪ್ರತಿಭಟನಾಕಾರರ ಜೊತೆಗೆ ಮಾತುಕತೆ ನಡೆಸುವ ಮೂಲಕವೇ ಆ ದಿಕ್ಕಿಗೆ ತನ್ನ ಮೊದಲ ಹೆಜ್ಜೆಯನ್ನು ಇಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News