ಪೊಲೀಸರ ವರ್ಗಾವಣೆಗೆ ಜನಪ್ರತಿನಿಧಿಗಳ ಶಿಫಾರಸು ಪತ್ರ ಪರಿಗಣಿಸಲ್ಲ: ಹೈಕೋರ್ಟ್‌ಗೆ ಡಿಜಿ-ಐಜಿಪಿ ಪ್ರಮಾಣ ಪತ್ರ

Update: 2020-02-13 18:09 GMT

ಬೆಂಗಳೂರು, ಫೆ.13: ನಿಯಮ ಬಾಹಿರವಾಗಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಜನಪ್ರತಿನಿಧಿಗಳ ಶಿಫಾರಸು ಪತ್ರಗಳನ್ನು ಪರಿಗಣಿಸುವುದಿಲ್ಲ ಎಂದು ಡಿಜಿ-ಐಜಿಪಿ ಪ್ರವೀಣ್ ಸೂದ್ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಕೆ ಮಾಡಿದ್ದಾರೆ. 

ಶಿಫಾರಸು ಮಾಡಿರುವ ಜನಪ್ರತಿನಿಧಿಗಳ ವಿರುದ್ಧ ತನಿಖೆ ನಡೆಸಲು ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಲು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಪೊಲೀಸ್ ಸಿಬ್ಬಂದಿ ಮಂಡಳಿ ಇಲ್ಲಿಯವರೆಗೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರಮಾಣ ಪತ್ರ ಸಲ್ಲಿಸಲು ನಿರ್ದೇಶಿಸಿದೆ.

ಈ ಕುರಿತು ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ.ಶಶಿಧರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಪ್ರಕರಣವೇನು: ಸುಪ್ರೀಂಕೋರ್ಟ್, ಪ್ರಕಾಶ್ ಸಿಂಗ್ ಮತ್ತು ಕೇಂದ್ರ ಸರಕಾರದ ನಡುವಿನ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಯನ್ನು ಪೊಲೀಸ್ ಸಿಬ್ಬಂದಿ ಮಂಡಳಿಯೇ ನಡೆಸಬೇಕು ಎಂದು 2006ರಲ್ಲಿ ಆದೇಶಿಸಿದೆ. ಹೈಕೋರ್ಟ್ ಸಹ 2017ರಲ್ಲಿ ಈ ಸಂಬಂಧದ ಪಿಐಎಲ್ ವಿಚಾರಣೆ ನಡೆಸಿ, ವರ್ಗಾವಣೆಗಳನ್ನು ನಿಯಮದ ಪ್ರಕಾರವೇ ಮಾಡಬೇಕೆಂದು ಆದೇಶ ನೀಡಿದೆ. ಆದರೂ ಶಾಸಕರು, ಸಂಸದರ ಶಿಫಾರಸಿನ ಮೇರೆಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ನಿಯಮ ಬಾಹಿರವಾಗಿ ಶಿಫಾರಸು ಮಾಡಿದ 24 ಜನಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳಲು 2019ರ ಜ.12ರಂದು ಸ್ಪೀಕರ್‌ಗೆ ದೂರು ನೀಡಲಾಗಿದೆ. ಆ ದೂರಿನ ಅನ್ವಯ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಸ್‌ಐಟಿ ತನಿಖೆಗೆ ನಿರ್ದೇಶಿಸಬೇಕು. ಕೋರ್ಟ್ ಆದೇಶದಂತೆ ವರ್ಗಾವಣೆಗಳನ್ನು ಕಡ್ಡಾಯವಾಗಿ ಪೊಲೀಸ್ ಸಿಬ್ಬಂದಿ ಮಂಡಳಿ ಮೂಲಕವೇ ಮಾಡುವಂತೆ ಸೂಚನೆ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News