ಸರ್ಕಾರ ಧರ್ಮದ ಆಧಾರದಲ್ಲಿ ಪಕ್ಷಪಾತ ಮಾಡಬಾರದು : ಬಿಜೆಪಿಗೆ ಮಿತ್ರಪಕ್ಷ ತಾಕೀತು

Update: 2020-02-14 05:13 GMT

ಅಮೃತಸರ: ಮುಸ್ಲಿಮರ ವಿರುದ್ಧ ತಾರತಮ್ಯದ ಕ್ರಮ ಎಂದು ಆಪಾದಿಸಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ, "ಸರ್ಕಾರ ಧರ್ಮದ ಆಧಾರದಲ್ಲಿ ಪಕ್ಷಪಾತ ಮಾಡಬಾರದು; ಎಲ್ಲ ಧಾರ್ಮಿಕ ಸಮುದಾಯಗಳ ಏಕತೆಗೆ ಮುಂದಾಗಬೇಕು" ಎಂದು ಬಿಜೆಪಿ ಮಿತ್ರಪಕ್ಷವಾದ ಶಿರೋಮಣಿ ಅಕಾಲಿದಳ ಸಲಹೆ ಮಾಡಿದೆ.

ಪಕ್ಷದ ಹಿರಿಯ ಮುಖಂಡ ಪ್ರಕಾಶ್ ಸಿಂಗ್ ಬಾದಲ್ ಗುರುವಾರ ಈ ಬಗ್ಗೆ ಹೇಳಿಕೆ ನೀಡಿ, "ದೇಶದಲ್ಲಿ ವಾತಾವರಣ ಉತ್ತಮವಾಗಿಲ್ಲ ಎನ್ನುವುದು ತೀರಾ ಕಳವಳಕಾರಿ. ಎಲ್ಲ ಧರ್ಮಗಳನ್ನು ಗೌರವಿಸಬೇಕು. ಸರ್ಕಾರ ಯಶಸ್ವಿಯಾಗಬೇಕಾದರೆ, ಅಲ್ಪಸಂಖ್ಯಾತರನ್ನೂ ಜತೆಗೆ ಕರೆದೊಯ್ಯಬೇಕು. ಹಿಂದೂ, ಮುಸ್ಲಿಂ, ಸಿಕ್ಖ್, ಕ್ರಿಶ್ಚಿಯನ್ನರಲ್ಲಿ ಒಂದೇ ಕುಟುಂಬದ ಭಾಗ ಎಂಬ ಭಾವನೆ ಬರಬೇಕು. ಅವರು ಪರಸ್ಪರ ಒಗ್ಗಟ್ಟಿನಿಂದ ಇರಬೇಕೇ ವಿನಃ ದ್ವೇಷದ ಬೀಜ ಬಿತ್ತಬಾರದು" ಎಂದು ಅಮೃತಸರದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಅವರು ಹೇಳಿದರು.

"ನಮ್ಮ ದೇಶ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ನಿಯಮವನ್ನು ಹೊಂದಿದೆ ಎಂದು ಸಂವಿಧಾನ ಹೇಳಿದೆ. ಜಾತ್ಯತೀತ ತತ್ವದಿಂದ ವಿಮುಖವಾದರೆ, ಅದು ನಮ್ಮ ದೇಶ ದುರ್ಬಲಗೊಳ್ಳಲು ಕಾರಣವಾಗುತ್ತದೆ. ಭಾರತವನ್ನು ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಸಂರಕ್ಷಿಸಲು ಅಧಿಕಾರದಲ್ಲಿರುವವರು ಸಂಘಟಿತರಾಗಿ ಹಾಗೂ ನಿರಂತರವಾಗಿ ಪ್ರಯತ್ನಿಸಬೇಕು" ಎಂದು ಸಲಹೆ ಮಾಡಿದರು.

ಜಾತ್ಯತೀತತೆ ಬೋಧಿಸಿದ ಸಿಕ್ಖ್ ಗುರುಗಳ ಬೋಧನೆಗಳಿಗೆ ಸರ್ಕಾರ ಗಮನ ನೀಡಬೇಕು. ಉದಾಹರಣೆಗೆ ಸಿಕ್ಖ್ ರಾಜ ಮಹಾರಾಜಾ ರಂಜಿತ್ ಸಿಂಗ್, ಮುಸ್ಲಿಂ ವ್ಯಕ್ತಿಯನ್ನು ವಿದೇಶಾಂಗ ಸಚಿವರಾಗಿ ನೇಮಿಸಿಕೊಂಡಿದ್ದರು. ಅವರು ಎಂದೂ ಮತಗಳ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಜಾತ್ಯತೀತತೆಯ ನಿಜ ಅರ್ಥ ಅವರಿಗೆ ಗೊತ್ತಿತ್ತು" ಎಂದು ಪರೋಕ್ಷವಾಗಿ ಬಿಜೆಪಿಯನ್ನು ಚುಚ್ಚಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News