ಫೆ.15ರಂದು ಕೆಪಿಸಿಸಿಯಿಂದ ಸಿಎಂ ಗೃಹ ಕಚೇರಿಗೆ ಮುತ್ತಿಗೆ: ವಿ.ಎಸ್.ಉಗ್ರಪ್ಪ

Update: 2020-02-14 13:34 GMT

ಬೆಂಗಳೂರು, ಫೆ.14: ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ವಿಚಾರದಲ್ಲಿ ಬಿಜೆಪಿಯ ದಲಿತ ವಿರೋಧಿ ನೀತಿ ಖಂಡಿಸಿ ಕೆಪಿಸಿಸಿ ವತಿಯಿಂದ ಫೆ.15ರ ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಾಳೆ(ಶನಿವಾರ) ಬೆಳಗ್ಗೆ 11ಕ್ಕೆ ಮೌರ್ಯ ವೃತ್ತದಿಂದ ಪ್ರತಿಭಟನಾ ರ‍್ಯಾಲಿ ಆರಂಭಿಸಿ, ಮುಖ್ಯಮಂತ್ರಿ ಗೃಹ ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ತಿಳಿಸಿದರು.

ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪು, ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬರಿಗೂ ಆಘಾತ ತಂದಿದೆ. ಉತ್ತರಾ ಖಂಡ ಬಿಜೆಪಿ ಸರಕಾರ ಮೀಸಲಾತಿ ವಿಷಯದಲ್ಲಿ ಬದ್ಧತೆ ತೋರುವಲ್ಲಿ ವಿಫಲವಾಗಿದೆ. ಅಲ್ಲಿನ ಅಡ್ವಕೇಟ್ ಜನರಲ್ ಕೂಡ ಮೀಸಲಾತಿ ಸಂವಿಧಾನ ಬದ್ದ ಹಕ್ಕು ಎನ್ನುವುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಸೋತಿದೆ. ಹೀಗಾಗಿ ದಲಿತ ವಿರೋಧಿ ತೀರ್ಪು ಪ್ರಕಟವಾಗಿದೆ ಎಂದು ಅವರು ಕಿಡಿಕಾರಿದರು.

ಬಿಜೆಪಿ ಹಾಗೂ ಆರೆಸ್ಸೆಸ್ ನಾಯಕರಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಅವರು ಮನುಸ್ಮತಿಯನ್ನು ಆಧರಿಸಿ, ಆಡಳಿತ ನಡೆಸುತ್ತಿದ್ದಾರೆ. ಧರ್ಮಾಧಾರಿತ ಆಡಳಿತವನ್ನು ದೇಶದಲ್ಲಿ ಅಧಿಕೃತಗೊಳಿಸುವ ಷಡ್ಯಂತ್ರದ ಭಾಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ರೂಪಿಸಿರುವ ಕಾನೂನನ್ನು ನಿರ್ಮೂಲನೆ ಮಾಡುತ್ತಿದ್ದಾರೆಂದು ಅವರು ಆರೋಪಿಸಿದರು.

ಫೆ.17ರಂದು ಪ್ರತಿಭಟನಾ ಧರಣಿ

ಸುಪ್ರೀಂ ಕೋರ್ಟ್‌ನಿಂದ ಮೀಸಲಾತಿ ಆಶಯಕ್ಕೆ ಧಕ್ಕೆ ತರುವಂತಹ ತೀರ್ಪು ಪ್ರಕಟವಾಗಿದೆ. ಇದಕ್ಕೆ ಬಿಜೆಪಿ ಮೌನ ಸಮ್ಮತಿ ಸೂಚಿಸಿದೆ. ಹಾಗೂ ಕೆಲವು ನಾಯಕರು ಬಹಿರಂಗವಾಗಿಯೇ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ. ಹೀಗಾಗಿ ಬಿಜೆಪಿಯ ದಲಿತ ಹಾಗೂ ಹಿಂದುಳಿದ ಸಮುದಾಯದ ವಿರೋಧಿ ನೀತಿಯ ವಿರುದ್ದ ರಾಜ್ಯಾದಂತ ನಿರಂತರವಾಗಿ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಅದರ ಭಾಗವಾಗಿ ಫೆ.17ರಂದು ನಗರದ ಟೌನ್‌ಹಾಲ್ ಮುಂಭಾಗ ಕೆಪಿಸಿಸಿ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ಸಮಿತಿಯಿಂದ ಪ್ರತಿಭಟನಾ ಧರಣಿಯನ್ನು ಪ್ರಾರಂಭಿಸಲಾಗುತ್ತಿದೆ. ಅದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು.

-ವಿ.ಎಸ್.ಉಗ್ರಪ್ಪ, ಕಾಂಗ್ರೆಸ್ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News