'ಈ ದೇಶ ತೊರೆಯುವುದೇ ಒಳ್ಳೆಯದು': ಆಕ್ರೋಶಗೊಂಡ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅರುಣ್ ಮಿಶ್ರಾ

Update: 2020-02-14 15:33 GMT

ಹೊಸದಿಲ್ಲಿ,ಫೆ.14: ಈ ದೇಶದಲ್ಲಿ ಕಾನೂನು ಉಳಿದಿಲ್ಲವೇ ಎಂದು ಶುಕ್ರವಾರ ಖಾರವಾಗಿ ಪ್ರಶ್ನಿಸಿದ ಸರ್ವೋಚ್ಚ ನ್ಯಾಯಾಲಯವು ದೂರಸಂಪರ್ಕ ಇಲಾಖೆಗೆ 1.47 ಲ.ಕೋ.ರೂ. ಬಾಕಿಯನ್ನು ಪಾವತಿಸುವಂತೆ ತನ್ನ ಆದೇಶವನ್ನು ಪಾಲಿಸುವಲ್ಲಿ ವೈಫಲ್ಯಕ್ಕಾಗಿ ಟೆಲಿಕಾಂ ಕಂಪನಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್‌ನ್ನು ಹೊರಡಿಸಿದೆ.

ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ, ಟಾಟಾ ಟೆಲಿಸರ್ವಿಸಿಸ್ ಮತ್ತು ಇತರರಿಗೆ ನೋಟಿಸ್‌ಗಳನ್ನು ಹೊರಡಿಸಿದ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಸ್.ಅಬ್ದುಲ್ ನಝೀರ್ ಮತ್ತು ಎಂ.ಆರ್.ಶಾ ಅವರ ಪೀಠವು,ಮುಂದಿನ ವಿಚಾರಣೆಯ ದಿನಾಂಕವಾದ ಮಾರ್ಚ್ 17ರೊಳಗೆ ಬಾಕಿಯಿರುವ ಹೊಂದಾಣಿಕೆ ಮಾಡಲಾದ ಒಟ್ಟು ಆದಾಯ(ಎಜಿಆರ್) ಮೊತ್ತವನ್ನು ಸರಕಾರಕ್ಕೆ ಪಾವತಿಸುವಂತೆ ಆದೇಶಿಸಿತು. ಹಣವನ್ನು ಪಾವತಿಸದಿದ್ದರೆ ಈ ಕಂಪನಿಗಳ ಆಡಳಿತ ನಿರ್ದೇಶಕರು ಮತ್ತು ಇತರ ಹಿರಿಯ ಅಧಿಕಾರಿಗಳು ಮಾ.17ರಂದು ನ್ಯಾಯಾಯಲದಲ್ಲಿ ಖುದ್ದಾಗಿ ಹಾಜರಾಗಬೇಕಾಗುತ್ತದೆ ಎಂದೂ ಅದು ತಿಳಿಸಿತು.

  ಈ ಅವಿವೇಕವನ್ನು ಯಾರು ಸೃಷ್ಟಿಸುತ್ತಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲ. ಈ ದೇಶದಲ್ಲಿ ಕಾನೂನು ಉಳಿದಿಲ್ಲವೇ? ಈ ದೇಶದಲ್ಲಿ ಉಳಿಯುವುದಕ್ಕಿಂತ ತೊರೆಯುವುದೇ ಲೇಸು ಎಂದು ಕಟುವಾಗಿ ಹೇಳಿದ ಪೀಠವು ಟೆಲಿಕಾಂ ಕಂಪನಿಗಳಿಗೆ ಸರ್ವೋಚ್ಚ ನ್ಯಾಯಾಲಯದ ನಿರ್ದೇಶಕ್ಕೆ ತಡೆಯನ್ನು ವಿಧಿಸಿದ್ದ ದೂರಸಂಪರ್ಕ ಇಲಾಖೆಯ ಕಾನೂನು, ಆದೇಶ ಜಾರಿ ಮೇಲ್ವಿಚಾರಣೆ ಮತ್ತು ಸಮನ್ವಯ ಅಧಿಕಾರಿ (ಡೆಸ್ಕ್ ಆಫೀಸರ್)ಯ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿತು.

ಎಜಿಆರ್ ಪಾವತಿಸಲು ಟೆಲಿಕಾಂ ಕಂಪನಿಗಳ ಮೇಲೆ ಒತ್ತಡ ಹೇರದಿರುವಂತೆ ಮತ್ತು ಅವುಗಳ ವಿರುದ್ಧ ಬಲವಂತದ ಕ್ರಮವನ್ನು ಕೈಗೊಳ್ಳದಂತೆ ಡೆಸ್ಕ್ ಆಫೀಸರ್ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಮತ್ತು ಇತರ ಸಾಂವಿಧಾನಿಕ ಪ್ರಾಧಿಕಾರಗಳಿಗೆ ಪತ್ರವನ್ನು ಬರೆಯುತ್ತಾರೆ ಎಂದು ಬೆಟ್ಟು ಮಾಡಿದ ನ್ಯಾ.ಮಿಶ್ರಾ ಅವರು, “ಓರ್ವ ಡೆಸ್ಕ್ ಆಫೀಸರ್ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನೇ ತಡೆಯುವ ಧೈರ್ಯ ಮಾಡುತ್ತಿದ್ದರೆ ಬಹುಶಃ ನ್ಯಾಯಾಲಯವನ್ನೇ ಮುಚ್ಚಬೇಕಾಗುತ್ತದೆ” ಎಂದರು.

“ಸರ್ವೋಚ್ಚ ನ್ಯಾಯಾಲಯಕ್ಕೆ ಬೆಲೆಯಿಲ್ಲವೇ? ಇದೆಲ್ಲ ಹಣಬಲದ ಫಲಶ್ರುತಿಯಾಗಿದೆ” ಎಂದು ತರಾಟೆಗೆತ್ತಿಕೊಂಡರು. ನ್ಯಾಯಾಲಯವು ದೂರಸಂಪರ್ಕ ಇಲಾಖೆಯ ಡೆಸ್ಕ್ ಅಧಿಕಾರಿಯ ವಿರುದ್ಧವೂ ನ್ಯಾಯಾಂಗ ನಿಂದನೆ ನೋಟಿಸ್‌ನ್ನು ಹೊರಡಿಸಿತು.

‘ಎಜಿಆರ್ ಪ್ರಕರಣದಲ್ಲಿ ಪುನರ್ ಪರಿಶೀಲನೆ ಅರ್ಜಿಯನ್ನು ನಾವು ಈಗಾಗಲೇ ವಜಾಗೊಳಿಸಿದ್ದೇವೆ,ಆದರೆ ಟೆಲಿಕಾಂ ಕಂಪನಿಗಳು ಒಂದೇ ಒಂದು ಪೈಸೆಯನ್ನೂ ಸರಕಾರಕ್ಕೆ ಪಾವತಿಸಿಲ್ಲ ’ಎಂದು ಹೇಳಿದ ನ್ಯಾ.ಮಿಶ್ರಾ, “ಈ ದೇಶದಲ್ಲಿ ಬೆಳವಣಿಗೆಗಳು ನಡೆಯುತ್ತಿರುವ ರೀತಿಯಿಂದ ನಮ್ಮ ಆತ್ಮವಿಶ್ವಾಸ ಅಲ್ಲಾಡಿಹೋಗಿದೆ” ಎಂದರು.

ಟೆಲಿಕಾಂ ಕಂಪನಿಗಳು ಸರಕಾರಕ್ಕೆ ಬಾಕಿಯಿರಿಸಿರುವ 1.47 ಲ.ಕೋ.ರೂ.ಗಳ ಪೈಕಿ 82,000 ಕೋ.ರೂ.ಗಳ ಸಿಂಹಪಾಲನ್ನು ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಪಾವತಿಸಬೇಕಿವೆ.

                                                       ವೊಡಾಫೋನ್‌ಗೆ ತೀವ್ರ ಸಂಕಷ್ಟ

ಸರಕಾರವು ಪರಿಹಾರವನ್ನು ಒದಗಿಸದಿದ್ದರೆ ತಾನು ಬಾಗಿಲೆಳೆದುಕೊಳ್ಳಬೇಕಾಗುತ್ತದೆ ಎಂದು ಎರಡು ತಿಂಗಳ ಹಿಂದೆ ಹೇಳಿದ್ದ ವೊಡಾಫೋನ್ ಐಡಿಯಾವನ್ನು ಸರ್ವೋಚ್ಚ ನ್ಯಾಯಾಲಯದ ಇಂದಿನ ಆದೇಶ ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ.

ತನ್ನ ನಷ್ಟ ಮತ್ತು ಸಾಲವನ್ನು ನಿಯಂತ್ರಿಸಲು ವೊಡಾಫೋನ್ ಪ್ರಯತ್ನಿಸುತ್ತಿದೆಯಾದರೂ ಸರಕಾರಕ್ಕೆ ಅತ್ಯಂತ ಹೆಚ್ಚಿನ ಬಾಕಿ (44,000 ಕೋ.ರೂ.)ಯನ್ನು ಉಳಿಸಿಕೊಂಡಿದೆ.

ವೊಡಾಫೋನ್ ಪಾಲಿಗೆ ಇನ್ನು ಯಾವುದೇ ನಿರೀಕ್ಷೆಗಳು ಉಳಿದಿಲ್ಲ. ಸರ್ವೋಚ್ಚ ನ್ಯಾಯಾಲಯವು ಏನಾದರೂ ಉದಾರತೆ ತೋರಿಸಿದ್ದರೆ ಕಂಪನಿಯ ಪಾಲಿಗೆ ಕೊಂಚ ನಿರಾಳತೆ ದೊರೆಯುತ್ತಿತ್ತು. ಅದು ಖಂಡಿತವಾಗಿಯೂ ಬಾಕಿಯನ್ನು ಪಾವತಿಸುವ ಸ್ಥಿತಿಯಲ್ಲಿಲ್ಲ ಎಂದು ಮುಂಬೈನ ಕಿಮ್ ಎಂಗ್ ಸೆಕ್ಯೂರಿಟಿಸ್‌ನ ಅನಾಲಿಸ್ಟ್ ನೀರವ್ ದಲಾಲ್ ಹೇಳಿದರು.

ಶುಕ್ರವಾರ ಶೇರು ಮಾರುಕಟ್ಟೆಯಲ್ಲಿ ಶೇ.24.44ರಷ್ಟು ಕುಸಿತ ದಾಖಲಿಸಿದ ವೊಡಾಫೋನ್ ಐಡಿಯಾ ಶೇರು 3.44 ರೂ.ನಲ್ಲಿ ಮುಕ್ತಾಯಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News