ಕಾವಲು ನಾಯಿಯಾಗಿದ್ದ ಮಾಧ್ಯಮ ಇಂದು ಸಾಕು ನಾಯಿ: ಎಚ್.ಎಸ್.ದೊರೆಸ್ವಾಮಿ

Update: 2020-02-14 13:29 GMT

ಬೆಂಗಳೂರು, ಫೆ.14: ಕಾವಲು ನಾಯಿ ಎಂದು ಕರೆಸಿಕೊಳ್ಳುತ್ತಿದ್ದ ಪತ್ರಿಕೋದ್ಯಮ ಇಂದು ಸಾಕು ನಾಯಿ ಎಂಬ ಮಾತು ಕೇಳಿಬರುತ್ತಿರುವುದು ಆತಂಕಕಾರಿ ವಿಷಯ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಶುಕ್ರವಾರ ನಗರದ ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ಆಯೋಜಿಸಿದ್ದ 70ನೆ ವಾರ್ಷಿಕೋತ್ಸವ ಹಾಗೂ ಮಾಧ್ಯಮ ಟ್ವೆಂಟಿ-20 ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ದೊಡ್ಡ ಪತ್ರಿಕಾ ಸಂಸ್ಥೆ ಮಾಲಕರು ಕೆಲಸಗಾರರಿಗೆ ಪೂರ್ಣ ಪ್ರಮಾಣದಲ್ಲಿ ಅಂಕುಶ ಹಾಕದೇ ಸ್ವತಂತ್ರವಾಗಿ ಬಿಟ್ಟ ಪರಿಣಾಮ ಉತ್ತಮ ವರದಿಗಳು ಪ್ರಕಟವಾಗುತ್ತಿವೆ. ಆದರೆ ಸಣ್ಣ ಪತ್ರಿಕೆಗಳಿಂದ ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕೆಲಸಗಳಾಗುತ್ತಿಲ್ಲ ಎಂದು ನುಡಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮಿ ಮಾತನಾಡಿ, ಪತ್ರಕರ್ತರಿಗೆ ಸಂಸ್ಕೃತಿ, ಸಂಸ್ಕಾರ ಮುಖ್ಯ. ಅಂತರಂಗ ಶುದ್ಧವಾಗಿಟ್ಟುಕೊಂಡು ಸಮಾಜದ ಏಳಿಗೆಗೆ ಶ್ರಮಿಸಲು ಬದ್ಧರಾಗಬೇಕು. ಆಳವಾದ ಅಧ್ಯಯನ ಮಾಡಿ ಪೂರ್ಣ ಪ್ರಮಾಣದ ವರದಿ ನೀಡಬೇಕು ಎಂದರು. ಅರೆಬೆಂದ ಮಾಹಿತಿಯ ಉಪದೇಶ ಸರಿಯಲ್ಲ. ಇದು ಪತ್ರಕರ್ತರಿಗಷ್ಟೇ ಅಲ್ಲದೇ ಉಪದೇಶ ಮಾಡುವ ಎಲ್ಲರಿಗೂ ಅನ್ವಯಿಸುತ್ತದೆ. ಅಪೂರ್ಣ ಮಾಹಿತಿಯಿಂದ ಸಮಾಜದ ಬೆಳವಣಿಗೆ ಅಸಾಧ್ಯ ಎಂದು ಅವರು ನುಡಿದರು.

ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮಿ ಮಾತನಾಡಿ, ಸಾಮರಸ್ಯದಿಂದ ಬಾಳಲು, ಸಂಘಟಿತರಾಗಿರಲು ಸಮಾಜಕ್ಕೆ ಮಾಧ್ಯಮಗಳು ಅಗತ್ಯ. ಸಮಾಜ ಸುಧಾರಣೆಗಾಗಿ ಶ್ರಮಿಸುವ ಪತ್ರಕರ್ತರ ಹಿತ ಕಾಪಾಡಲೆಂದೇ ಸಹಕಾರ ಸಂಘ ಸ್ಥಾಪನೆಯಾಗಿದೆ. ಈ ಸಂಘದ ಉಪಶಾಖೆಗಳನ್ನು ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕಕ್ಕೆ ವಿಸ್ತರಿಸಿ ಅಲ್ಲಿನ ಪತ್ರಕರ್ತರ ಏಳಿಗೆಗೂ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಉದ್ಘಾಟಿಸಿದರು. ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್ ರಾಜೇಂದ್ರ ಕುಮಾರ್, ಸ್ಮರಣ ಸಂಚಿಕೆ ಸಂಪಾದಕ ರಘುನಾಥ ಚ.ಹ, ಸಹಕಾರ ಸಂಘದ ನಿರ್ದೇಶಕರು, ಸದಸ್ಯರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News