OLX ಮೂಲಕ ನೂರಾರು ಜನರಿಗೆ ವಂಚಿಸಿದ ತಂಡ ಬೆಂಗಳೂರು ಪೊಲೀಸ್ ಬಲೆಗೆ: ಇವರು ಹಣ ದೋಚುತ್ತಿದ್ದದ್ದು ಹೇಗೆ ಗೊತ್ತಾ ?

Update: 2020-02-14 14:02 GMT

ಬೆಂಗಳೂರು, ಫೆ.14: ಆನ್‌ಲೈನ್ ಮೂಲಕ ಹಳೇ ವಸ್ತುಗಳ ಖರೀದಿ, ಮಾರಾಟ ಮಾಡುವುದಾಗಿ ನಂಬಿಸಿ ವಂಚನೆ ಮಾಡುತ್ತಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕ್, ಗೂಗಲ್, ಪೇಟಿಎಂ ಕಂಪೆನಿಗಳಲ್ಲಿ ಕಾರ್ಯ ನಿರ್ವಹಿಸಿದ್ದ ಮಾಜಿ ನೌಕರರಿಂದಲೇ ಈ ಕೃತ್ಯ ನಡೆದಿದೆ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ರಾಜಸ್ತಾನ ಮೂಲದ ಕರಣ್‌ ಸಿಂಗ್(35), ಅಕ್ರಂ ಖಾನ್(18), ಹಾರಿಸ್ ಖಾನ್(21), ಜಮೀಲ್(42) ಹಾಗೂ ಮೆಹಝರ್(20) ಎಂಬುವರು ಬಂಧಿತ ಆರೋಪಿಗಳೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಮಾಜಿ ನೌಕರರು: ಬಂಧಿತ ಆರೋಪಿಗಳ ಪೈಕಿ ಕರಣ್ ಸಿಂಗ್ ಬ್ಯಾಂಕ್ ಖಾತೆ ಪರಿಶೀಲನೆ ನೌಕರನಾಗಿದ್ದ. ಹಾರಿಸ್ ಖಾನ್, ಎಚ್‌ಡಿಎಫ್‌ಸಿ, ಗೂಗಲ್, ಪೇಟಿಎಂ ಕಂಪೆನಿಗಳಲ್ಲಿ ಕಾರ್ಯ ನಿರ್ವಹಿಸಿ, ಕ್ಯುಆರ್ ಕೋಡ್‌ನಿಂದ ಹಣ ಪಡೆದುಕೊಳ್ಳುವುದನ್ನು ಕಲಿತಿದ್ದ.

ಮೆಹಝರ್ ಮತ್ತು ಅಕ್ರಂ ಗ್ರಾಹಕರ ಸೋಗಿನಲ್ಲಿ ಮೊಬೈಲ್ ಮೂಲಕ ಸಂಪರ್ಕಿಸಿ, ಬ್ಯಾಂಕ್ ಖಾತೆ ವಿವರಗಳನ್ನು ಪಡೆದುಕೊಳ್ಳುತ್ತಿದ್ದರು. ಬೈಕ್ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಡಿ ಜಮೀಲ್ ಜೈಲಿಗೆ ಹೋಗಿ ವಾಪಸ್ಸಾಗಿ, ಆನ್‌ಲೈನ್ ವಂಚನೆಗೆ ಇಳಿದಿದ್ದ ಎನ್ನುವ ಮಾಹಿತಿ ಗೊತ್ತಾಗಿದೆ ಎಂದು ಆಯುಕ್ತರು ವಿವರಿಸಿದರು.

ಓಎಲ್‌ಎಕ್ಸ್ ವೇದಿಕೆ: ಬಂಧಿತರಿಗೆ ಓಎಲ್‌ಎಕ್ಸ್ ಆ್ಯಪ್ ವೇದಿಕೆಯಾಗಿತ್ತು. ಇಲ್ಲಿ ಗ್ರಾಹಕರ ವಸ್ತುಗಳ ಜಾಹೀರಾತುಗಳ ಮೇಲೆ ನಿಗಾ ಇಟ್ಟಿದ್ದ ಆರೋಪಿಗಳು, ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ, ತಮ್ಮ ವಸ್ತು ಖರೀದಿ ಮಾಡುವುದಾಗಿ ನಂಬಿಸಿ, ಅವರ ಬ್ಯಾಂಕ್‌ ಖಾತೆ ವಿವರ ಅಥವಾ ಕ್ಯೂಆರ್ ಕೋಡ್ ಪಡೆದು, ಹಣ ವಂಚನೆ ಮಾಡುತ್ತಿದ್ದರು. ಈ ರೀತಿ ಒಟ್ಟು 200 ಪ್ರಕರಣಗಳು ಬೆಳಕಿಗೆ ಬಂದಿದ್ದು, ಆರೋಪಿಗಳಿಂದ 6 ಮೊಬೈಲ್ ಜಪ್ತಿ ಮಾಡಿ ತನಿಖೆ ಮುಂದುವರೆಸಲಾಗಿದೆ ಎಂದು ಭಾಸ್ಕರ್ ರಾವ್ ತಿಳಿಸಿದರು.

ಆಯುಕ್ತರ ಹೆಸರಿನಲ್ಲಿಯೇ ವಂಚನೆ

ಆರೋಪಿಗಳ ಬಂಧನಕ್ಕಾಗಿ 2019ನೇ ಸಾಲಿನ ಡಿಸೆಂಬರ್‌ನಲ್ಲಿ ರಾಜಸ್ತಾನಕ್ಕೆ ತೆರಳಿದ್ದ ಸಿಸಿಬಿ ತಂಡ, ಕರಣ್ ಸಿಂಗ್ ಎಂಬಾತನನ್ನು ಬಂಧಿಸಿದ್ದರು. ಇದರಿಂದ ಬೆಂಗಳೂರು ಪೊಲೀಸರ ಮೇಲೆ ಜಿದ್ದಿಗೆ ಬಿದ್ದ ಆರೋಪಿಗಳು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೆಸರಲ್ಲೇ ವಂಚನೆ ಮಾಡಿದ್ದರು ಎನ್ನುವ ಮಾಹಿತಿ ಗೊತ್ತಾಗಿದೆ.

ಕಳೆದ ವಾರ್ಷಿಕ ಸಾಲಿನಲ್ಲಿ ಓಎಲ್ಎಕ್ಸ್ ಹೆಸರಿನಲ್ಲಿ ಗ್ರಾಹಕರಿಗೆ ವಂಚಿಸಿದ್ದ 316 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ 200 ಪ್ರಕರಣಗಳಲ್ಲಿ ಬಂಧಿತರು ಭಾಗಿಯಾಗಿದ್ದಾರೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News