ಪುಲ್ವಾಮ ದಾಳಿ: ಇನ್ನೂ ದಾಖಲಾಗಿಲ್ಲ ಚಾರ್ಚ್ ಶೀಟ್

Update: 2020-02-14 16:19 GMT

ಹೊಸದಿಲ್ಲಿ, ಫೆ.14: ಸಿಆರ್‌ಪಿಎಫ್‌ನ 40 ಯೋಧರ ಸಾವಿಗೆ ಕಾರಣವಾದ ಪುಲ್ವಾಮಾ ದಾಳಿ ಕರಾಳ ದಿನಕ್ಕೆ ಇಂದು ಒಂದು ವರ್ಷ. ಆದರೆ ತನಿಖೆಯ ನೇತೃತ್ವ ವಹಿಸಿರುವ ರಾಷ್ಟ್ರೀಯ ಭದ್ರತಾ ಸಮಿತಿಗೆ(ಎನ್‌ಐಎ) ಈ ದಾಳಿಯ ಹಿಂದಿರುವ ಪಿತೂರಿಯನ್ನು ಬಯಲಿಗೆಳೆಯಲು ಸಾಧ್ಯವಾಗಿಲ್ಲ . ಬಿಗಿ ಭದ್ರತೆಯ ಮಧ್ಯೆಯೇ ಸ್ಫೋಟಕ ವಸ್ತು ಕಾಶ್ಮೀರ ತಲುಪಿದ್ದು ಹೇಗೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಪ್ರಕರಣದ ಪ್ರಮುಖ ಆರೋಪಿಗಳೆಲ್ಲಾ ಮೃತಪಟ್ಟಿರುವುದು ಎನ್‌ಐಎ ತನಿಖೆಯ ಪ್ರಗತಿಗೆ ಪ್ರಮುಖ ತೊಡಕಾಗಿದೆ. ಪ್ರಕರಣದಲ್ಲಿ ಇನ್ನೂ ಚಾರ್ಚ್ ಶೀಟ್ ಕೂಡಾ ದಾಖಲಿಸಿಲ್ಲ. ದಾಳಿಯ ಕುರಿತು ಎನ್‌ಐಎಗೆ ಲಭಿಸಿರುವ ಏಕೈಕ ಸ್ಪಷ್ಟ ಮಾಹಿತಿಯೆಂದರೆ - ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್, ನೈಟ್ರೊ ಗ್ಲಿಸರಿನ್ ಮತ್ತು ಆರ್‌ಡಿಎಕ್ಸ್ ಬಳಸಲಾಗಿದೆ ಎಂಬುದು. ಪುಲ್ವಾಮಾ ದಾಳಿ ನಡೆದ 12 ದಿನಗಳ ಬಳಿಕ, ಫೆ.26ರಂದು ಭಾರತದ ವಾಯುಪಡೆಯ 5 ಮಿರಾಜ್ ಯುದ್ಧವಿಮಾನಗಳು ಪಾಕಿಸ್ತಾನದ ಖೈಬರ್-ಪಖ್ತೂಂಕ್ವ ಪ್ರದೇಶದ ಬಾಲಕೋಟ್‌ನಲ್ಲಿರುವ ಜೈಷೆ ಮುಹಮ್ಮದ್ ಭಯೋತ್ಪಾದಕರ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಹಲವು ಭಯೋತ್ಪಾದಕರನ್ನು ಹತ್ಯೆ ಮಾಡಿರುವುದಾಗಿ ಭಾರತ ಸರಕಾರ ಹೇಳಿಕೆ ನೀಡಿತ್ತು.

ಆತ್ಮಹತ್ಯಾ ಬಾಂಬರ್ ದಾಳಿ:

2019ರ ಫೆ.14ರಂದು ಸಂಜೆ ಸುಮಾರು 3:15ರ ವೇಳೆಗೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೊರ ಎಂಬಲ್ಲಿ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಿಆರ್‌ಪಿಎಫ್ ವಾಹನಕ್ಕೆ ಆತ್ಮಹತ್ಯಾ ಬಾಂಬರ್ ಚಲಾಯಿಸುತ್ತಿದ್ದ ಸ್ಫೋಟಕ ತುಂಬಿದ್ದ ಟ್ರಕ್ ಢಿಕ್ಕಿಯಾಗಿತ್ತು. ಈ ಸ್ಫೋಟದ ತೀವ್ರತೆಗೆ ಸಿಆರ್‌ಪಿಎಫ್ ವಾಹನ ಚೂರು ಚೂರಾಗಿ ಸಿಡಿದಿದ್ದರೆ ಅದರಲ್ಲಿದ್ದ 40 ಯೋಧರು ಪ್ರಾಣ ಕಳೆದುಕೊಂಡಿದ್ದರು. ದಾಳಿ ನಡೆದ ಬಳಿಕ ವೀಡಿಯೊ ಸಹಿತ ಹೇಳಿಕೆ ಬಿಡುಗಡೆ ಮಾಡಿದ್ದ ನಿಷೇಧಿತ ಉಗ್ರ ಸಂಘಟನೆ ಜೈಷೆ ಮುಹಮ್ಮದ್(ಜೆಇಎಂ), ದಾಳಿಯ ಹೊಣೆ ಹೊತ್ತುಕೊಂಡಿತ್ತು.

 ದಾಳಿ ನಡೆದ ಸಂದರ್ಭ 78 ವಾಹನಗಳಲ್ಲಿ ಸುಮಾರು 2,500ಕ್ಕೂ ಹೆಚ್ಚು ಯೋಧರು ಜಮ್ಮು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದರು. ಸ್ಫೋಟಕ್ಕೆ ಸಿಲುಕಿದ ವಾಹನ ಸಿಆರ್‌ಪಿಎಫ್‌ನ 76 ಬೆಟಾಲಿಯನ್‌ಗೆ ಸೇರಿದ್ದಾಗಿತ್ತು. ಹೆದ್ದಾರಿ ಬದಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಸ್ಫೋಟಕ ಅಳವಡಿಸಲಾಗಿತ್ತು. ಸಿಆರ್‌ಪಿಎಫ್ ವಾಹನಗಳ ಸಾಲು ಬರುತ್ತಿರುವುದನ್ನು ಗಮನಿಸಿದ ಆತ್ಮಹತ್ಯಾ ಬಾಂಬರ್ ಎದುರುಗಡೆಯಿಂದ ಕಾರನ್ನು ಚಲಾಯಿಸಿಕೊಂಡು ಬಂದು ಸಿಆರ್‌ಪಿಎಫ್ ವಾಹನಕ್ಕೆ ಮುಖಾಮುಖಿ ಢಿಕ್ಕಿಯಾಗಿದೆ ಎಂದು ಪೊಲೀಸರು ಹೇಳಿದ್ದರು. ಆದಿಲ್ ಅಹ್ಮದ್ ದಾರ್ (20 ವರ್ಷ) ಎಂಬಾತ ಆತ್ಮಹತ್ಯಾ ಬಾಂಬರ್ ಆಗಿದ್ದ ಎಂದು ಜೆಇಎಂ ಬಿಡುಗಡೆಗೊಳಿಸಿದ್ದ ವೀಡಿಯೊದ ಆಧಾರದಲ್ಲಿ ಗುರುತಿಸಲಾಗಿದೆ. ಈತ 2018ರ ಮಾರ್ಚ್ 19ರಂದು ಜೆಇಎಂ ಸೇರಿದ್ದ ಮತ್ತು ಈ ನಿರ್ದಿಷ್ಟ ಕಾರ್ಯಾಚರಣೆಗಾಗಿ ಆತನನ್ನು ತರಬೇತುಗೊಳಿಸಲಾಗಿತ್ತು.

ಆತ್ಮಹತ್ಯಾ ಬಾಂಬರ್ ಬಳಸಿದ್ದ ಕಾರು ಸ್ಫೋಟದಲ್ಲಿ ಚೂರು ಚೂರಾಗಿದ್ದರೂ ವಿಧಿವಿಜ್ಞಾನ ತಂತ್ರಜ್ಞಾನ ಬಳಸಿ ಕಾರಿನ ಉತ್ಪಾದನೆ, ಮೋಡೆಲ್, ಕಾರಿನ ನಂಬರ್ ಅನ್ನು ಪತ್ತೆ ಹಚ್ಚಲಾಗಿದೆ. ಕಾರಿನ ಪ್ರಥಮ ಮಾಲಕರಿಂದ ಕಡೆಯ ಮಾಲಕರವರೆಗಿನ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಆದರೆ ಈತನನ್ನು ಬಂಧಿಸುವ ಮೊದಲೇ ಈತ ಜೆಇಎಂಗೆ ಸೇರ್ಪಡೆಯಾಗಿ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶಂಕಿತ ಆರೋಪಿಗಳೆಲ್ಲಾ ಕಾರ್ಯಾಚರಣೆಯಲ್ಲಿ ಖತಂ

ಆತ್ಮಹತ್ಯಾ ಬಾಂಬರ್ ಆದಿಲ್ ಅಹ್ಮದ್ ದಾರ್ ಸಹಿತ ಪ್ರಮುಖ ಶಂಕಿತ ಆರೋಪಿಗಳಾದ ಜೆಇಎಂ ಸಂಘಟನೆ ಮುದಸ್ಸಿರ್ ಅಹ್ಮದ್ ಖಾನ್, ಮುಫ್ತಿ ಯಾಸರ್, ಕಮ್ರಾನ್ ಮತ್ತು ಸಜ್ಜಾದ್ ಅಹ್ಮದ್ ಭಟ್ಟ್ ಕಳೆದ ಒಂದು ವರ್ಷದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ವಿವಿಧ ಎನ್‌ಕೌಂಟರ್‌ಗಳಲ್ಲಿ ಸಾವಿಗೀಡಾಗಿದ್ದಾರೆ. ಈ ದಾಳಿ ಕೃತ್ಯದ ಸಂಚು ರೂಪಿಸಿದ್ದು ಜೆಇಎಂ ಹಿರಿಯ ಕಮಾಂಡರ್ ಮುದಸ್ಸಿರ್ ಖಾನ್ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಈತ ಭಾರತದ ಇತರೆಡೆಯೂ ಇದೇ ರೀತಿಯ ಸ್ಫೋಟ ನಡೆಸುವ ಸಂಚು ಹೂಡಿದ್ದ. ಪಾಕಿಸ್ತಾನದಲ್ಲಿರುವ ಸಂಘಟನೆಯ ಸದಸ್ಯರೊಂದಿಗೆ ಇಂಟರ್‌ನೆಟ್ ಕಾಲ್ ಮೂಲಕ ಸಂಪರ್ಕದಲ್ಲಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಫೆ.26ರಂದು ಭಾರತೀಯ ವಾಯುಪಡೆಯ 5 ಮಿರಾಜ್ ಯುದ್ಧವಿಮಾನಗಳು ಪಾಕಿಸ್ತಾನದ ಬಾಲಕೋಟ್‌ನಲ್ಲಿ ಸಕ್ರಿಯವಾಗಿದ್ದ ಉಗ್ರರ ಶಿಬಿರದ ಮೇಲೆ ಮೇಲೆ ಬಾಂಬ್‌ದಾಳಿ ನಡೆಸಿದ್ದವು.

ಜೆಇಎಂ ಮುಖ್ಯಸ್ಥ ಮಸೂದ್ ಅಝರ್ ಮತ್ತಾತನ ಸಹೋದರ ಅಬ್ದುಲ್ ರವೂಫ್ ಅಸ್ಘರ್ ಈ ಶಿಬಿರದ ಮೇಲುಸ್ತುವಾರಿ ವಹಿಸಿದ್ದರು. ಘಟನೆಯಲ್ಲಿ 300ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸರಕಾರ ಹೇಳಿಕೆ ನೀಡಿತ್ತು. ಆದರೆ ಮೃತಪಟ್ಟ ಉಗ್ರರ ಸಂಖ್ಯೆಯ ಬಗ್ಗೆ ಇನ್ನೂ ಸರಕಾರ ಸ್ಪಷ್ಟವಾಗಿ ತಿಳಿಸಿಲ್ಲ. ಪುಲ್ವಾಮ ದಾಳಿಯ ತನಿಖೆ ನಡೆಸುತ್ತಿದ್ದ ಸಂದರ್ಭ ಎನ್‌ಐಎಗೆ ಜೆಇಎಂನ ಮತ್ತೊಂದು ಜಾಲದ ಸುಳಿವು ದೊರಕಿದ್ದು, ಜೆಇಎಂಗೆ ಸ್ಥಳೀಯವಾಗಿ ಸಹಕಾರ ನೀಡುತ್ತಿದ್ದ ಎಂಟು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ, ಅವರನ್ನು ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಬಂಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News