ಜನಪ್ರತಿನಿಧಿಗಳಿಂದ ಶಾಲೆ ದತ್ತು ಪ್ರಸ್ತಾವನೆ: ಅಧಿವೇಶನದಲ್ಲಿ ಆದೇಶ ಹೊರಡಿಸಲು ಮನವಿ

Update: 2020-02-14 17:39 GMT

ಬೆಂಗಳೂರು, ಫೆ. 14: ಜನಪ್ರತಿನಿಧಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಗೊಳಿಸುವ ಪ್ರಸ್ತಾವನೆಯನ್ನು ರಾಜ್ಯ ಸರಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ.ಎಂ.ಆರ್.ದೊರೆಸ್ವಾಮಿ ಸರಕಾರಕ್ಕೆ ಸಲ್ಲಿಸಿದ್ದಾರೆ.

ಪ್ರಾಥಮಿಕ ಶಿಕ್ಷಣದ ಅಭಿವೃದ್ಧಿ ಮುಖ್ಯವಾಗಿದ್ದು, ವಿದ್ಯಾರ್ಥಿಗಳಿಲ್ಲದೆ ಮುಚ್ಚುತ್ತಿರುವ ಶಾಲೆಗಳನ್ನು ಉಳಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ತಲಾ 3 ಸರಕಾರಿ ಶಾಲೆಗಳನ್ನು, ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ತಲಾ 5 ಸರಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು ಅಭಿವೃದ್ಧಿ ಮಾಡಬೇಕು. ಇದರಿಂದ ವಾರ್ಷಿಕ 1 ಸಾವಿರಕ್ಕೂ ಅಧಿಕ ಶಾಲೆಗಳು ಅಭಿವೃದ್ಧಿಯಾಗುತ್ತವೆ. ಈ ಕುರಿತು ಅಧಿವೇಶನದಲ್ಲಿ ಲಿಖಿತ ಆದೇಶ ಹೊರಡಿಸಬೇಕು ಎಂದು ಪ್ರಸ್ತಾವನೆಯಲ್ಲಿ ಹೇಳಿದ್ದಾರೆ.

ಪಠ್ಯಪುಸ್ತಕ ರಚನೆಯಲ್ಲಿ 2050 ಕ್ಕೆ ದೂರದರ್ಶಿತ್ವ ದಾಖಲೆ ಸಾಧಿಸಲು ಪ್ರೊ.ಕಸ್ತೂರಿ ರಂಗನ್ ಸಮಿತಿ ಕರಡು ಶಿಫಾರಸು ಅನುಸರಿಸಬೇಕು. ಶಾಲಾ-ಕಾಲೇಜುಗಳಿಗೆ ಶುದ್ಧ ಕುಡಿಯುವ ನೀರು, ಪ್ರತ್ಯೇಕ ಶೌಚಾಲಯ ನೀಡಬೇಕು. ಗುಣಮಟ್ಟ ಶಿಕ್ಷಣ ನೀಡಲು ಶಿಕ್ಷಕರಿಗೆ ತರಬೇತಿ ಮತ್ತು ಶಿಕ್ಷಣ ಕ್ಷೇತ್ರದ ಅಪರಾಧ ಪ್ರಕರಣಗಳ ಪರಿಹಾರಕ್ಕೆ ಪ್ರತ್ಯೇಕ ನ್ಯಾಯಮಂಡಳಿ ರಚಿಸಬೇಕು.

ವಿವಿಗಳಿಗೆ ಅರ್ಹ ಉಪ ಕುಲಪತಿ ಆಯ್ಕೆ ಮಾಡಬೇಕು. ಅಂಗವಿಕಲರ ಉನ್ನತ ಶಿಕ್ಷಣಕ್ಕೆ ಒತ್ತು ಕೊಡಲು ಅಂಗವಿಕಲರ ವಿವಿ ಆರಂಭಿಸಬೇಕು. ಪ್ರಶ್ನೆ ಪತ್ರಿಕೆ ಸೋರಿಕೆ ಆಗದಂತೆ ಪರೀಕ್ಷೆ ದಿನವೇ ಆನ್‌ಲೈನ್ ಮೂಲಕ ಪ್ರಶ್ನೆಪತ್ರಿಕೆ ಸರಬರಾಜು ವ್ಯವಸ್ಥೆ ಮಾಡಬೇಕು ಸೇರಿದಂತೆ ಹಲವು ಸಲಹೆಗಳನ್ನು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News