ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಗೆ ಷಡಕ್ಷರಿಸ್ವಾಮಿ ನೇಮಕ ವಿಚಾರ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2020-02-14 18:36 GMT

ಬೆಂಗಳೂರು, ಫೆ.14: ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ಎಸ್.ಪಿ.ಷಡಕ್ಷರಿ ಸ್ವಾಮಿ ಅವರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. 

ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಅಸ್ತಿತ್ವಕ್ಕೆ ಬರುತ್ತಲೇ ನಿಯಮಗಳನ್ನು ಉಲ್ಲಂಘಿಸಿ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ಷಡಕ್ಷರಿ ಸ್ವಾಮಿಯವರನ್ನು ನೇಮಕ ಮಾಡಲಾಗಿದೆ ಎಂದು ಆರೋಪಿಸಿ ಹೋರಾಟಗಾರ ಟಿ.ನರಸಿಂಹಮೂರ್ತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಾದಿಸಿದ ವಕೀಲ ಎಸ್.ಉಮಾಪತಿ ಅವರು, ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಅಧಿಕಾರಕ್ಕೆ ಬಂದ ದಿನವೇ ಕೆಪಿಎಸ್‌ಸಿ ಗೆ ಷಡಕ್ಷರಿಸ್ವಾಮಿ ನೇಮಕ ಮಾಡಿದ್ದಾರೆ. ಆಯ್ಕೆ ಸಮಿತಿಯನ್ನು ಪರಿಗಣಿಸದೇ ಮಾಡಿರುವ ಈ ನೇಮಕ ಕಾನೂನು ಬಾಹಿರ. ರಾಜಕೀಯ ಹಿತಾಸಕ್ತಿಗಳ ಅನುಕೂಲಕ್ಕಾಗಿ ನಿಯಮಗಳನ್ನು ಉಲ್ಲಂಘಿಸಿ ತರಾತುರಿಯಲ್ಲಿ ಮಾಡಿರುವ ನೇಮಕ ರದ್ದುಗೊಳಿಸಬೇಕು ಎಂದು ಕೋರಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತು. ಜೊತೆಗೆ, ನೇಮಕಾತಿಗೆ ಸಂಬಂಧಿಸಿದ ಕಡತವನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ತಿಳಿಸಿ ವಿಚಾರಣೆಯನ್ನು ಮಾ.12ಕ್ಕೆ ಮುಂದೂಡಿತು.

ಷಡಕ್ಷರಿಸ್ವಾಮಿ ಅವರು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಕಿರಿಯ ಸಹೋದರರಾಗಿದ್ದಾರೆ. ಮಠದ ಆಗು-ಹೋಗುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News