ಕೊಳಗೇರಿ ಜನರ ಆರೋಗ್ಯ ಸುಧಾರಣೆಗೆ ಕ್ರಮ: ಮೇಯರ್ ಗೌತಮ್ ಕುಮಾರ್

Update: 2020-02-14 18:39 GMT

ಬೆಂಗಳೂರು, ಫೆ.14: ಕೊಳಗೇರಿ ಪ್ರದೇಶಗಳಲ್ಲಿನ ಜನರ ಆರೋಗ್ಯ ಸುಧಾರಣೆಗಾಗಿ ಬಿಬಿಎಂಪಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಮೇಯರ್ ಗೌತಮ್ ಕುಮಾರ್ ಜೈನ್ ಹೇಳಿದ್ದಾರೆ.

ಶುಕ್ರವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಜಯ ಕರ್ನಾಟಕ ಸಂಘಟನೆ ವತಿಯಿಂದ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಕುರಿತ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೊಳಗೇರಿ ಪ್ರದೇಶಗಳಲ್ಲಿನ ಜನರ ಆರೋಗ್ಯದ ಪರಿಸ್ಥಿತಿ ಸುಧಾರಣೆಗಾಗಿ ಪಾಲಿಕೆಯು ಮುಂದಾಗಲಿದೆ. ಅವರು, ತಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಲು ಗಂಭೀರವಾದ ಚಿಂತನೆ ನಡೆಸಬೇಕು. ಸರಕಾರದಿಂದ ನೀಡುವ ಎಲ್ಲ ರೀತಿಯ ಸವಲತ್ತುಗಳನ್ನು ಪಡೆದುಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು.

ಉಳ್ಳವರು ಆರೋಗ್ಯಕ್ಕಾಗಿ ಹಣ ಖರ್ಚು ಮಾಡುವಂತಹ ಈ ಸಂದರ್ಭದಲ್ಲಿ, ಬಡವರು ನಿರ್ಗತಿಕರು ಉತ್ತಮ ಆರೋಗ್ಯಕ್ಕಾಗಿ ಪರದಾಡುತ್ತಿರುತ್ತಾರೆ. ಸರಕಾರವು ಬಡವರ ಆರೋಗ್ಯಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದು, ಪ್ರತಿಯೊಬ್ಬರೂ ಆರೋಗ್ಯ ಸೇವೆ ಪಡೆಯಬೇಕಾಗಿದೆ ಎಂದು ಅವರು ಹೇಳಿದರು.

ಅಂಗಡಿ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡುವ ಕುರಿತು ಸಂಘ ಸಂಸ್ಥೆಗಳು ಜಾಗೃತಿ ಮೂಡಿಸಬೇಕು. ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡುವ ಸಂಬಂಧ ಬಿಬಿಎಂಪಿ ಆದೇಶ ಮಾಡಿದೆ. ಆದರೂ, ಕೆಲವರು ನಿಮಯ ಉಲ್ಲಂಘನೆ ಮಾಡುತ್ತಾರೆ. ಮಹದೇವಪುರ ವಲಯದಲ್ಲಿ ಹೆಚ್ಚಾಗಿ ಈ ಪ್ರಕರಣಗಳು ಬೆಳಕಿನ ಬಂದಿವೆ. ಹಾಗಾಗಿ, ಸಂಘ ಸಂಸ್ಥೆಗಳು ಜಾಗೃತಿ ಆಂದೋಲನ ಕೈಗೊಳ್ಳಬೇಕೆಂದು ತಿಳಿಸಿದರು.

ಅನೇಕ ಮಳಿಗೆಗಳ ಮಾಲಕರು ನಾಮಫಲಕ ಬದಲಾಯಿಸಲು ಕಾಲಾವಕಾಶ ಕೇಳಿದರು. ಆದರೆ, ಅವರಿಗೆ ಈಗಾಗಲೇ ಸಾಕಷ್ಟು ಕಾಲಾವಕಾಶ ನೀಡಿದ್ದೇವೆ. ಆದುದರಿಂದ ಅವರ ಕೋರಿಕೆ ಮನ್ನಿಸುವುದರಲ್ಲಿ ಅರ್ಥವಿಲ್ಲ ಎಂದು ಮೇಯರ್ ಗೌತಮ್ ಕುಮಾರ್ ಹೇಳಿದರು.

ಕೆ.ಸಿ.ಜನರಲ್ ಆಸ್ಪತ್ರೆಯ ಮಹಿಳಾ ಆರೋಗ್ಯ ತಜ್ಞೆ ಡಾ.ಮಂಜುಳಾ ಮಾತನಾಡಿ, ನಮ್ಮ ಆಧುನಿಕ ಆಹಾರ ಪದ್ಧತಿಗಳಿಂದ ಇಂದು ಹೆಚ್ಚಿನ ಅನಾರೋಗ್ಯಗಳಿಗೆ ಕಾರಣವಾಗುತ್ತಿದ್ದೇವೆ. ಅಲ್ಲದೆ, ಸರಿಯಾದ ದೈಹಿಕ ಶ್ರಮವಿಲ್ಲದರ ಪರಿಣಾಮದಿಂದ ಆರೋಗ್ಯದ ಸಮಸ್ಯೆಗಳಿಗೆ ದಾರಿಯಾಗುತ್ತಿದೆ ಎಂದರು.

ನಾವು ನಮ್ಮ ಊರು, ನಮ್ಮ ರಸ್ತೆ, ನಮ್ಮ ಬೀದಿ ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಸುತ್ತಮುತ್ತಲೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಕಡೆಗೆ ಗಮನ ನೀಡಬೇಕು. ಅದನ್ನು ಬಿಟ್ಟು ಪೌರ ಕಾರ್ಮಿಕರನ್ನು ದೂರುವುದು ಬಿಡಬೇಕು ಎಂದ ಅವರು, ನಮ್ಮ ಸುತ್ತಲಿನ ಸ್ವಚ್ಛತೆಯಿದ್ದರೆ, ನಾವು ಹೆಚ್ಚು ಆರೋಗ್ಯವಾಗಿರಲು ಸಾಧ್ಯ ಎಂದರು.

ಮಹಿಳೆಯರಿಗೆ ಹೆಚ್ಚು ದೈಹಿಕ ವ್ಯಾಯಾಮ ಅಗತ್ಯವಿದೆ. ದಿನದಲ್ಲಿ ಒಂದು ಗಂಟೆಯಾದರೂ ವ್ಯಾಯಾಮ ಮಾಡಬೇಕಾಗಿದೆ ಎಂದ ಅವರು, ಆಧುನಿಕ ಕಾಲಘಟ್ಟದಲ್ಲಿ ಶಾರೀರಿಕ ವ್ಯಾಯಾಮವನ್ನು ಮರೆತಿದ್ದೇವೆ. ಇದರಿಂದಾಗಿ, ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಬೀಳುವ ಸಾಧ್ಯತೆಯಿದೆ ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ರಾಜ್, ಜಯ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಬಿ.ಎನ್.ಜಗದೀಶ್, ಆಯುರ್ವೇದ ತಜ್ಞ ಡಾ.ವಿ.ಗಿರೀಶ್ ಕುಮಾರ್, ಜಯ ಕರ್ನಾಟಕ ಬೆಂಗಳೂರು ಅಧ್ಯಕ್ಷ ಡಾ.ಎಂ.ಜಗದೀಶ್ ಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News