​ದೂರಸಂಪರ್ಕ ಇಲಾಖೆಗೆ ಬರಬೇಕಿರುವ ಬಾಕಿ ಎಷ್ಟು ಲಕ್ಷ ಕೋಟಿ ರೂ. ಗೊತ್ತೇ?

Update: 2020-02-15 05:12 GMT

ಹೊಸದಿಲ್ಲಿ, ಫೆ.15: ಸುಪ್ರೀಂಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ದೂರ ಸಂಪರ್ಕ ಇಲಾಖೆ ಕೊನೆಗೂ ತನಗೆ ಖಾಸಗಿ ಕಂಪೆನಿಗಳು ಮತ್ತು ಸರ್ಕಾರಿ ಸ್ವಾಮ್ಯದ ಕಂಪೆನಿಗಳಿಂದ ಬರರಬೇಕಿರುವ ನಾಲ್ಕು ಲಕ್ಷ ಕೋಟಿ ರೂಪಾಯಿಗಳ ಪಾವತಿಗೆ ಶುಕ್ರವಾರ ಮಧ್ಯರಾತ್ರಿಯ ಗಡುವು ವಿಧಿಸಿದೆ. ಲೈಸನ್ಸಿಂಗ್ ಒಪ್ಪಂದದ ಭಾಗವಾಗಿ ಸರ್ಕಾರಕ್ಕೆ ಈ ಕಂಪೆನಿಗಳು ನಾಲ್ಕು ಲಕ್ಷ ಕೋಟಿ ರೂಪಾಯಿ ಪಾವತಿಸಬೇಕಿವೆ.

ಕಳೆದ ನಾಲ್ಕು ತಿಂಗಳಲ್ಲಿ ಟೆಲಿಕಾಂ ಕಂಪೆನಿಗಳು ಇಲಾಖೆಗೆ ಒಂದು ಪೈಸೆಯನ್ನೂ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಈ ಕಂಪೆನಿಗಳು ಹಾಗೂ ನಿರ್ದೇಶಕರಿಗೆ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ನೀಡಿದ್ದು, ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿದೆ. "ನಿಗದಿತ ಸಮಯದ ಒಳಗಾಗಿ ಮೊತ್ತ ಪಾವತಿಸುವುದನ್ನು ಖಾತರಿಪಡಿಸಿ. ಇಲ್ಲದಿದ್ದರೆ, ನಾವು ಎಷ್ಟು ಕಠಿಣವಾಗುತ್ತೇವೆ ಎನ್ನುವುದನ್ನು ತೋರಿಸಬೇಕಾಗುತ್ತದೆ" ಎಂದು ನ್ಯಾಯಪೀಠ ಹೇಳಿತ್ತು.

ಟೆಲಿಕಾಂ ಕಂಪೆನಿಗಳಿಂದ ಹಣ ವಸೂಲಾತಿ ಮಾಡುವಂತೆ ನೀಡಿದ ಆದೇಶವನ್ನು ಪಾಲಿಸದ ದೂರ ಸಂಪರ್ಕ ಇಲಾಖೆಯನ್ನೂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಇದರಿಂದ ಕಂಪೆನಿಗಳಿಗೆ ಪತ್ರ ಬರೆದಿರುವ ಇಲಾಖೆ, ಈ ಮೊತ್ತವನ್ನು ಪಾವತಿಸದಿದ್ದರೆ ಬ್ಯಾಂಕ್ ಗ್ಯಾರೆಂಟಿ ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದೆ. ತೀರಾ ವ್ಯತಿರಿಕ್ತ ಪ್ರಕರಣಗಳಲ್ಲಿ ಟೆಲಿಕಾಂ ಲೈಸನ್ಸ್ ರದ್ದುಪಡಿಸುವುದಾಗಿಯೂ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News