ಕಂಬಳ ಓಟಗಾರ ಶ್ರೀನಿವಾಸ್ ಗೌಡರನ್ನು ಸಾಯ್ ಟ್ರಯಲ್ಸ್‌ಗೆ ಆಹ್ವಾನಿಸಿದ ಕೇಂದ್ರ ಕ್ರೀಡಾ ಸಚಿವ ರಿಜಿಜು

Update: 2020-02-15 09:38 GMT

ಹೊಸದಿಲ್ಲಿ, ಫೆ.15: ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್)ಅಗ್ರ ಕೋಚ್‌ಗಳೊಂದಿಗೆ ಟ್ರಯಲ್ಸ್‌ಗೆ ಕರ್ನಾಟಕದ ಶ್ರೀನಿವಾಸ ಗೌಡರನ್ನು ನಾನು ಆಹ್ವಾನಿಸಲಿದ್ದೇನೆ. ಜನಸಾಮಾನ್ಯರಿಗೆ ಒಲಿಂಪಿಕ್ಸ್‌ನ ಸ್ಥಾನಮಾನ ಅದರಲ್ಲೂ ಮುಖ್ಯವಾಗಿ ಅಥ್ಲೆಟಿಕ್ಸ್‌ನಲ್ಲಿ ಮಾನವನ ಅತ್ಯಧಿಕ ಶಕ್ತಿ ಹಾಗೂ ಧಾರಣಾ ಸಾಮರ್ಥ್ಯದ ಅರಿವಿನ ಕೊರತೆ ಇದೆ. ಭಾರತದಲ್ಲಿರುವ ಯಾವುದೇ ಪ್ರತಿಭೆ ಗಳು ಪರೀಕ್ಷೆಗೆ ಒಳಪಡದೇ ಹೋಗದಂತೆ ಖಾತರಿಪಡಿಸುತ್ತೇನೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಉದ್ಯಮಿ ಆನಂದ್ ಮಹೇಂದ್ರ ಟ್ವೀಟ್‌ಗೆ ರೀಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ಐಕಳದಲ್ಲಿ ನಡೆದ ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಕಂಬಳ ಓಟದಲ್ಲಿ 142.5 ಮೀ.ದೂರವನ್ನು 13.62 ಸೆಕೆಂಡ್‌ನಲ್ಲಿ ಕ್ರಮಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಮೀಯಾರಿನ ಯುವಕ ಶ್ರೀನಿವಾಸ ಗೌಡ ಜಗತ್ತೇ ನಿಬ್ಬೆರಗಾಗಿಸುವ ಸಾಧನೆ ಮಾಡಿದ್ದರು. ಶ್ರೀನಿವಾಸ್ ಕಂಬಳದ ಗದ್ದೆಯಲ್ಲಿ ಕೋಣಗಳೊಂದಿಗೆ 142.5 ಮೀ. ಹಾದಿಯಲ್ಲಿ 100 ಮೀ. ದೂರವನ್ನು 9.55 ಸೆಕೆಂಡ್‌ನಲ್ಲಿ ಕ್ರಮಿಸಿದ್ದರು. ಶ್ರೀನಿವಾಸ್‌ರನ್ನು ವಿಶ್ವ ವಿಖ್ಯಾತ ಓಟಗಾರ ಉಸೇನ್ ಬೋಲ್ಟ್ ಅವರೊಂದಿಗೆ ಹೋಲಿಸಲಾಗುತ್ತಿದೆ. ಬೋಲ್ಟ್ 100 ಮೀ. ಓಟವನ್ನು 9.58 ಸೆಕೆಂಡ್‌ನಲ್ಲಿ ಕ್ರಮಿಸಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು. ಕಂಬಳದ ಆಡಳಿತ ಮಂಡಳಿಯು ಶ್ರೀನಿವಾಸ್‌ರನ್ನು ಬೋಲ್ಟ್‌ಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಹೇಳಿದೆ.

 "ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ವೇಗವನ್ನು ಅಳೆಯಲು ಹೆಚ್ಚಿನ ವೈಜ್ಞಾನಿಕ ಮಾದರಿಯ ಹಾಗೂ ಉತ್ತಮ ಎಲೆಕ್ಟ್ರಾನಿಕ್ ಸಾಧನ ಇರುತ್ತದೆ. ಕಂಬಳದಲ್ಲಿ ನೆಟ್‌ವರ್ಕ್ ಸಿಸ್ಟಂ ಸಾಕಷ್ಟಿಲ್ಲ ಹಾಗೂ ಇಲೆಕ್ಟ್ರಾನಿಕ್ ಟೈಮಿಂಗ್ ಇಲ್ಲ. ಶ್ರೀನಿವಾಸ್ ಬಗ್ಗೆ ನನಗೆ ಹೆಮ್ಮೆ ಇದೆ'' ಎಂದು ಕೆಲವು ಸ್ಥಳೀಯ ದಿನಪತ್ರಿಕೆಗಳು ಹಾಗೂ ಪತ್ರಕರ್ತರು ಗೌಡರ ಪ್ರದರ್ಶನವನ್ನು ಜಮೈಕಾದ ಓಟಗಾರ ಬೋಲ್ಟ್‌ಗೆ ಹೋಲಿಕೆ ಮಾಡುತ್ತಿರುವುದಕ್ಕೆ ಕಂಬಳ ಅಕಾಡಮಿಯ ಅಧ್ಯಕ್ಷ ಡಾ.ಗುಣಪಾಲ ಕಡಂಬ ಪ್ರತಿಕ್ರಿಯಿಸಿದ್ದಾರೆ.

ಉಸೇನ್ ಬೋಲ್ಟ್ ಗಿಂತ ವೇಗ? ಕರ್ನಾಟಕದ ಈ ವ್ಯಕ್ತಿ ಕೋಣಗಳೊಂದಿಗೆ 100 ಮೀ.ನ್ನು 9.55 ಸೆಕೆಂಡ್‌ನಲ್ಲಿ ಕ್ರಮಿಸಿದ್ದಾರೆ. ಈ ವ್ಯಕ್ತಿಯನ್ನು ನಿಮ್ಮಿಂದಿಗೆ ಸೇರಿಸಿಕೊಂಡು ಒಲಿಂಪಿಕ್ಸ್ ಚಾಂಪಿಯನ್ ಆಗಿ ರೂಪಿಸಿ ಎಂದು ಭಾರತದ ಅಥ್ಲೆಟಿಕ್ಸ್ ಸಂಘಟನೆಗೆ ವಿನಂತಿಸಿಕೊಳ್ಳುವೆ. ನಮ್ಮಲ್ಲಿ ಇಂತಹ ಅದ್ಭುತ ಪ್ರತಿಭೆಗಳು ಎಷ್ಟಿವೆ ಎಂದು ತಿರುವನಂತಪುರದ ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News