ಸಿಎಂ ಗೃಹಕಚೇರಿಗೆ ಮುತ್ತಿಗೆ ಯತ್ನ: ಸಿದ್ದರಾಮಯ್ಯ ಸಹಿತ ಹಲವರು ಪೊಲೀಸ್ ವಶಕ್ಕೆ

Update: 2020-02-15 07:47 GMT

ಮಂಗಳೂರು, ಫೆ.15: ಶಾಹೀನ್ ಶಾಲೆಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ, ರಾಜ್ಯ ಬಿಜೆಪಿ ಸರಕಾರವು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ವಿರೋಧಿಸಿ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ಬೆಂಗಳೂರಿನಲ್ಲಿಂದು ಪ್ರತಿಭಟನೆ ನಡೆಯಿತು.

ರಾಜ್ಯ ಸರಕಾರವು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಅಮಾಯಕರ ವಿರುದ್ಧ ದೇಶದ್ರೋಹ ಮತ್ತಿತರ ಕೇಸುಗಳನ್ನು ದಾಖಲಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿ ಗೃಹಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಈ ಸಂದರ್ಭ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಂಸರಾದ ಡಿ.ಕೆ.ಸುರೇಶ್, ಬಿ.ಕೆ.ಹರಿಪ್ರಸಾದ್, ಪಕ್ಷದ ಮುಖಂಡರಾದ ಸೌಮ್ಯಾ ರೆಡ್ಡಿ, ರಿಝ್ವಿನ್ ಅರ್ಶದ್, ಎಲ್.ಹನುಮಂತಯ್ಯ, ನಾರಾಯಣಸ್ವಾಮಿ ಮತ್ತಿತರರನ್ನು ಪೊಲೀಸರು ವಶಕ್ಕೆ ತಡೆದು ವಶಕ್ಕೆ ಪಡೆದರು.

ಇದಕ್ಕೂ ಮೊದಲು ರೇಸ್ ಕೋರ್ಸ್ ರಸ್ತೆಯ ಗಾಂಧಿ ಪ್ರತಿಮೆಯ ಬಳಿಯಿಂದ ಸಿಎಂ ಗೃಹ ಕಚೇರಿಯವರೆಗೆ ಪ್ರತಿಭಟನಾ ಜಾಥಾ ನಡೆಸಿದರು. ಶಾಹೀನ್ ಶಾಲಾ ಪ್ರಕರಣದಲ್ಲಿ ದೇಶದ್ರೋಹ ಕೇಸು ದಾಖಲಿಸುವ ಮೂಲಕ ಕಾನೂನಿನ ದುರುಪಯೋಗ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News