ಶಾಹೀನ್ ಶಾಲೆಯ ಮಕ್ಕಳ ಜೊತೆಗಿನ ಪೊಲೀಸರ ನಡೆ ಕ್ಷಮೆಗೂ ಅರ್ಹವಲ್ಲ: ಪ್ರೊ.ಪುರುಷೋತ್ತಮ ಬಿಳಿಮಲೆ

Update: 2020-02-15 14:58 GMT

ಬೆಂಗಳೂರು, ಫೆ.15: ಸಿಎಎ, ಎನ್‌ಆರ್‌ಸಿ ವಿರುದ್ಧ ನಾಟಕ ಪ್ರದರ್ಶಿಸಿದರು ಎಂಬ ಕಾರಣಕ್ಕೆ ತಾಯಿ-ಮಗುವನ್ನು ಬೇರ್ಪಡಿಸಿ ಬಂಧಿಸಿದ ಘಟನೆ ಅತ್ಯಂತ ಅಮಾನುಷ ಹಾಗೂ ಮಹಾಕ್ರೌರ್ಯ ಎಂದು ಜೆಎನ್‌ಯು ವಿವಿಯ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಪುರುಷೋತ್ತಮ ಬಿಳಿಮಲೆ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ನಗರದ ಅರಮನೆ ರಸ್ತೆಯಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ)ನ 15 ನೇ ರಾಜ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಲ್ಲಿ ಈ ಹಿಂದೆ ಮುಕ್ತವಾಗಿ ಮಾತನಾಡಲು ಅವಕಾಶವಿತ್ತು. ಆದರೆ, ಇಂದಿನ ಸಂದರ್ಭದಲ್ಲಿ ನಾನಿಲ್ಲಿ ಮಾತನಾಡಿ ಹೊರ ಹೋಗುವುದರೊಳಗೆ ದೇಶದ್ರೋಹಿ ಪಟ್ಟ ಕಟ್ಟಿ, ಜೈಲಿಗೆ ಹಾಕುವಂತಹ ಪರಿಸ್ಥಿತಿಯಿದೆ. ಇತ್ತೀಚಿಗೆ ಬೀದರ್‌ನ ಶಾಹೀನ್ ಶಾಲೆಯಲ್ಲಿ ಮಕ್ಕಳು ನಾಟಕ ಮಾಡಿದ್ದನ್ನೇ ನೆಪವಾಗಿಸಿಕೊಂಡು, ಮಕ್ಕಳ ನಡುವೆ ಪೊಲೀಸರು ನಡೆದುಕೊಂಡ ಕ್ರಮ ಕ್ಷಮೆಗೂ ಅರ್ಹವಲ್ಲ ಎಂದರು.

ದಿಲ್ಲಿಯಲ್ಲಿ ಸಾವಿರಾರು ಜನರ ಎದುರು ಕೇಂದ್ರದ ಮಂತ್ರಿಯೊಬ್ಬರು ಗೋಲಿಮಾರೋ ಅಂತಾರೆ. ಮರುದಿನವೇ ಒಬ್ಬ ಗುಂಡು ಹಾರಿಸುತ್ತಾನೆ. ಆದರೆ, ಇದು ದೇಶದ್ರೋಹದ ಅಡಿಯಲ್ಲಿ ಬರುವುದಿಲ್ಲ, ಯಾರ ಮೇಲೆ ಪ್ರಕರಣವೂ ದಾಖಲಾಗಲಿಲ್ಲ. ಜೆಎನ್‌ಯುನೊಳಗೆ ಮುಸುಕುದಾರಿ ಗೂಂಡಾಗಳು ಬಂದು ಹಲ್ಲೆ ಮಾಡುತ್ತಾರೆ, ಜಾಮಿಯಾ ವಿವಿಯೊಳಗೆ ಪೊಲೀಸರೆ ಪ್ರವೇಶಿಸಿ ದೌರ್ಜನ್ಯ ಮಾಡುತ್ತಾರೆ. ಆದರೆ, ಯಾರ ಮೇಲೂ ಇದುವರೆಗೂ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ಅವರು ಟೀಕಿಸಿದರು.

ದೇಶದಲ್ಲಿ ಅತ್ಯಂತ ಭಯಾನಕ ಪರಿಸ್ಥಿತಿಯಿದೆ. ದೇಶವನ್ನು ಮಕಾಡೆ ಮಲಗಿಸುವವರು ಅತ್ಯುನ್ನತ ಸ್ಥಾನದಲ್ಲಿದ್ದಾರೆ. ಆದರೆ, ಸಂವಿಧಾನ ರಕ್ಷಣೆಗಾಗಿ, ಶಿಕ್ಷಣ, ಯುವಜನರ ಹಕ್ಕುಗಳಿಗಾಗಿ ಹೋರಾಡುವವರನ್ನು ದೇಶದ್ರೋಹಿಗಳಾಗಿ ನೋಡುತ್ತಿದ್ದಾರೆ. ನನ್ನ ಜೀವನದಲ್ಲಿ ಇಂತಹ ಸಂದಿಗ್ಧ ಸ್ಥಿತಿಯನ್ನು ಎಂದೂ ಕಂಡಿರಲಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ದೇಶದಲ್ಲಿ ಉನ್ನತ ಶಿಕ್ಷಣವನ್ನು ಸಂಪೂರ್ಣ ನಾಶ ಮಾಡಲು ಆಡಳಿತದಲ್ಲಿರುವ ಪ್ರಭುತ್ವ ಯತ್ನಿಸುತ್ತಿದೆ. ಯುಜಿಸಿ ಮೂಲಕ ಇಡೀ ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ, ವಿವಿಗಳ ಮೇಲೆ ಹಿಡಿತ ಸಾಧಿಸಲು ಮುಂದಾಗಿದೆ. ಅದರ ಭಾಗವಾಗಿ, ವಿವಿಗಳ ಪಠ್ಯಕ್ರಮವನ್ನು ಸರಕಾರ ರೂಪಿಸುತ್ತಿದೆ. ಮತ್ತೊಂದು ಕಡೆ ವಿವಿಗಳ ನೇಮಕಾತಿಯಲ್ಲಿ ಬಲಪಂಥೀಯರನ್ನು ತುರುಕುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಅವರು ಹೇಳಿದರು.

ವಿಶ್ವವಿದ್ಯಾಲಯಗಳಲ್ಲಿ ನೇಮಕವಾಗುತ್ತಿರುವ ಬಲಪಂಥೀಯರಲ್ಲಿ ಯಾರೊಬ್ಬರೂ ವಿದ್ವಾಂಸರಿಲ್ಲ. ಬದಲಿಗೆ, ರಾಜಕೀಯ ಪ್ರೇರಿತರು, ಗೂಂಡಾಗಳೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಅವರಿಗೆ, ಭಾರತ ಬಹುತ್ವದ ಕುರಿತು ಹಾಗೂ ಕಾಲಕಾಲಕ್ಕೆ ನಡೆದ ಬದಲಾವಣೆಗಳ ಪರಿಜ್ಞಾನವೇ ಇಲ್ಲ ಎಂದು ಬಿಳಿಮಲೆ ನುಡಿದರು.

ಉನ್ನತ ಶಿಕ್ಷಣದಲ್ಲಿ ಚಿಂತನಾಶೀಲವಾದ ಶಿಕ್ಷಣವನ್ನು ಸಂಪೂರ್ಣ ನಾಶ ಮಾಡಲಾಗಿದೆ. ವಿದ್ಯಾರ್ಥಿಗಳನ್ನು ಹಾಗೂ ಜನರನ್ನು ಪಾಕಿಸ್ತಾನ ದ್ವೇಷಿಯಾಗಿ ಚಿತ್ರೀಕರಿಸಿ, ಆ ಕಡೆಗೆ ವಾಲುವಂತೆ ಮಾಡುತ್ತಿದ್ದಾರೆ. ದೇಶ, ವಿದೇಶದ ರಾಜಕೀಯ ಚಿತ್ರಣ, ಆರ್ಥಿಕತೆ, ಸಾಮಾಜಿಕ ವಿಷಯಗಳನ್ನು ಚರ್ಚೆ ಮಾಡದಂತೆ ನಿರ್ಬಂಧ ಹೇರಲಾಗುತ್ತಿದೆ ಎಂದು ಅವರು ದೂರಿದರು.

ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಮಾತನಾಡಿ, ಕೇಂದ್ರ ಸರಕಾರ ಸಂವಿಧಾನಕ್ಕೆ ವಿರುದ್ಧವಾದ ಕಾಯ್ದೆಗಳು, ಕಾನೂನುಗಳನ್ನು ಜಾರಿ ಮಾಡಲು ಮುಂದಾಗುತ್ತಿದೆ. ಇದರ ವಿರುದ್ಧ ವಿದ್ಯಾರ್ಥಿ ಸಮುದಾಯ ಸಂಘಟಿತ ಹೋರಾಟ ರೂಪಿಸಿರುವುದು ಶ್ಲಾಘನೀಯ ಕೆಲಸ. ಮುಂದಿನ ದಿನಗಳಲ್ಲಿಯೂ ಇದೇ ಮಾದರಿಯಲ್ಲಿ ಚಳವಳಿ ರೂಪಗೊಳ್ಳಲಿ ಎಂದು ಆಶಿಸಿದರು.

ಆಳುವ ವರ್ಗವು ವಿದ್ಯಾರ್ಥಿಗಳು ಸೇರಿದಂತೆ ಜನರ ಸಾಂವಿಧಾನಿಕ ಹಕ್ಕುಗಳನ್ನು ದಮನಿಸಲು ಮುಂದಾಗಬಾರದು. ಜನರಿಂದ ಆಯ್ಕೆಯಾದವರು ಜನರಿಗಾಗಿ ಕೆಲಸ ಮಾಡಬೇಕು. ಕೇಂದ್ರ ಸರಕಾರವು ತನ್ನ ತಪ್ಪುಗಳನ್ನು ತಿದ್ದಿಕೊಂಡು ಸರಿಯಾದ ಮಾರ್ಗದಲ್ಲಿ ಮುನ್ನಡೆಯಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ, ಮಾಜಿ ಸಚಿವ ಮುರಳೀಧರ ಹಾಲಪ್ಪ, ಎಸ್‌ಎಫ್‌ಐ ರಾಷ್ಟ್ರಾಧ್ಯಕ್ಷ ವಿ.ಪಿ.ಸಾನು, ಜಂಟಿ ಕಾರ್ಯದರ್ಶಿ ನಿತೀಶ್ ನಾರಾಯಣ, ರಾಜ್ಯಾಧ್ಯಕ್ಷ ವಿ.ಅಂಬರೀಶ್, ಕಾರ್ಯದರ್ಶಿ ಗುರುರಾಜ್‌ದೇಸಾಯಿ, ಕೇಂದ್ರ ಸಮಿತಿ ಸದಸ್ಯೆ ಮಾಧುರಿ ಬೋಳಾರ್ ಸೇರಿದಂತೆ ಹಲವರಿದ್ದರು.

ದಿಲ್ಲಿಯ ಜೆಎನ್‌ಯು ವಿವಿಯ ಆತ್ಮವನ್ನು ಅಲ್ಲಿನ ವಿದ್ಯಾರ್ಥಿಗಳು ಜೀವಂತವಾಗಿಡಲು ಸದಾ ಪ್ರಯತ್ನಿಸುತ್ತಲೇ ಇದ್ದಾರೆ. ಬಲಪಂಥೀಯರ, ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಸಮರ ಸಾರುವ ಮೂಲಕ ಆಳುವವರಿಗೆ ಪೆಟ್ಟು ನೀಡುತ್ತಿದ್ದಾರೆ. ಸರಕಾರ, ಮಂತ್ರಿಗಳು ಸೇರಿದಂತೆ ಬಲಪಂಥೀಯ ವರ್ಗ ಜೆಎನ್‌ಯು ವಿರುದ್ಧ ಕೆಟ್ಟ ಪ್ರಚಾರ ಮಾಡುತ್ತಿರುವುದು ಖಂಡನೀಯ. ಅದರ ವಿರುದ್ಧ ಅಲ್ಲಿನ ವಿದ್ಯಾರ್ಥಿಗಳು ತೋರಿದ ಪ್ರತಿರೋಧ ಜಗತ್ತಿಗೆ ಮಾದರಿ.

-ಪುರುಷೋತ್ತಮ ಬಿಳಿಮಲೆ, ಜೆಎನ್‌ಯು ಕನ್ನಡ ವಿಭಾಗದ ಮುಖ್ಯಸ್ಥ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News