ಮೀಸಲಾತಿ ಕುರಿತ ಸುಪ್ರೀಂ ತೀರ್ಪು: ಮರುಪರಿಶೀಲನಾ ಅರ್ಜಿ ಸಲ್ಲಿಕೆಗೆ ದಸಂಸ ಆಗ್ರಹ

Update: 2020-02-15 13:27 GMT

ಬೆಂಗಳೂರು, ಫೆ.15: ಮೀಸಲಾತಿ ಸೌಲಭ್ಯ ಮೂಲಭೂತ ಹಕ್ಕಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪು ಪ್ರಶ್ನಿಸಿ ವಿಸ್ತೃತ ಅಥವಾ ಸಾಂವಿಧಾನಿಕ ಪೀಠಕ್ಕೆ ಕೇಂದ್ರ ಸರಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.

ಶನಿವಾರ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಸಾಂವಿಧಾನಿಕ ಹಕ್ಕು ಶೋಷಣೆಗೆ ಒಳಗಾದ ಜನರನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮೇಲೆತ್ತಲು ಇರುವ ಸಾಧನ. ಸಂವಿಧಾನದ ಪ್ರಕಾರ ಇದೊಂದು ಮೂಲಭೂತ ಹಕ್ಕು. ಸುಪ್ರೀಂ ಕೋರ್ಟ್ ತೀರ್ಪು ಸಂವಿಧಾನದ ಆಶಯಗಳಿಗೆ ಧಕ್ಕೆಯುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತೀರ್ಪಿಗೆ ವಿರುದ್ಧವಾಗಿ ಕೇಂದ್ರ ಸರಕಾರ ಈ ಕೂಡಲೇ ಸುಗ್ರೀವಾಜ್ಞೆ ಹೊರಡಿಸಬೇಕು. ಈ ಕುರಿತು ಕೇಂದ್ರ ಮೇಲ್ಮನವಿ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಸರ್ವ ಪಕ್ಷಗಳ ಎಲ್ಲಾ ಸಂಸದರು ಮತ್ತು ಶಾಸಕರು ಸರಕಾರದ ಮೇಲೆ ಒತ್ತಡ ಹಾಕಬೇಕು ಎಂದು ಒತ್ತಾಯಿಸಿದರು.

ಪರಿಶಿಷ್ಟ ಜಾತಿ, ಪಂಗಡ ಸಮುದಾಯಗಳಿಗೆ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ತೀರ್ಪು ಸಂವಿಧಾನ ಆಶಯಕ್ಕೆ ವಿರುದ್ಧ. ಬಿಜೆಪಿ ಸಿದ್ದಾಂತಕ್ಕೆ ಪೂರಕ. ನ್ಯಾಯಾಲಯಗಳ ಮೇಲೆ ಜನರು ಇಟ್ಟಿರುವ ನಂಬಿಕೆಗೆ ಧಕ್ಕೆ ತಂದಿದೆ. ಆದರೆ, ಈ ಹಿಂದೆ ಸುಪ್ರೀಂ ಕೋರ್ಟ್‌ನ 7 ನ್ಯಾಯಾಧೀಶರ ಪೀಠ ಭಡ್ತಿ ಮೀಸಲಾತಿ ಪರವಾಗಿ ತೀರ್ಪು ನೀಡಿದ್ದರು. ಈಗಿನ ತೀರ್ಪು ವ್ಯತಿರಿಕ್ತವಾಗಿದೆ. ಇದು ವಿರೋಧಾಭಾಸ. ಈ ತೀರ್ಪಿನ ಹಿಂದೆ ಮೀಸಲಾತಿ ವಿರುದ್ಧದ ಒಂದು ವ್ಯವಸ್ಥಿತ ಸಂಚು ಇದೆ ಎಂದು ಆರೋಪಿಸಿದರು.

ಲೋಕಸಭೆಯಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ 117ನೇ ತಿದ್ದುಪಡಿ ಮಸೂದೆ ಇಚ್ಛಾಶಕ್ತಿ ಕೊರತೆ ಕಾರಣ ಇತ್ಯರ್ಥವಾಗದೇ ಉಳಿದಿದೆ. ಈ ಕಾಯ್ದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಿ,ಅನುಮೋದನೆ ನೀಡಬೇಕು. ಪರಿಶಿಷ್ಟ ಜನಾಂಗದ ಹಿತ ಕಾಯಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಮೀಸಲಾತಿ ಸೌಲಭ್ಯ ಮೂಲಭೂತ ಹಕ್ಕಲ್ಲ ಎಂಬ ಸುಪ್ರೀಂ ಕೋರ್ಟ್‌ನ ಈ ತೀರ್ಪಿನ ಬಗ್ಗೆ ಜನಾಭಿಪ್ರಾಯ ರೂಪಿಸಲು ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಮಾರ್ಚ್ ಮೊದಲನೆ ವಾರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News