ಶಾಹೀನ್ ಶಾಲೆಯ ದೇಶದ್ರೋಹದ ಪ್ರಕರಣದಲ್ಲಿ ಸರಕಾರ ಹಸ್ತಕ್ಷೇಪ ಮಾಡಿಲ್ಲ: ಡಿಸಿಎಂ ಅಶ್ವಥ್ ನಾರಾಯಣ

Update: 2020-02-15 14:33 GMT

ಬೆಂಗಳೂರು, ಫೆ. 15: ಬೀದರ್ ಶಾಹೀನ್ ಶಾಲೆಯ ಮುಖ್ಯ ಶಿಕ್ಷಕಿ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿರುವ ಘಟನೆಗೆ ಸಂಬಂಧಿಸಿದಂತೆ ಸರಕಾರ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಈ ಕುರಿತು ಕಾಂಗ್ರೆಸ್ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ದೂರಿದ್ದಾರೆ.

ಶನಿವಾರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಸಿಎಎ, ಎನ್‌ಪಿಆರ್, ಎನ್‌ಆರ್‌ಸಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಆದರೆ, ಇವೆಲ್ಲವುಗಳನ್ನು ಕಾಂಗ್ರೆಸ್ ಅವಧಿಯಲ್ಲೆ ಜಾರಿಗೆ ತರಲಾಗಿತ್ತು ಎಂದರು.

ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಪ್ರಸ್ತಾಪಿಸಲು ಯಾವುದೇ ವಿಚಾರಗಳಿಲ್ಲ. ಹೀಗಾಗಿ ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದು, ಇದನ್ನು ಅವರು ಬಿಡಬೇಕು. ಜನ್ಮ ದಿನಾಂಕವಿಲ್ಲ ಎಂದು ಯಾರನ್ನು ಹೊರಹಾಕುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಸಂಪುಟ ವಿಸ್ತರಣೆ ಮಾಡುತ್ತೇವೆಂದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರೂ ಹೇಳಿದ್ದಾರೆ. ಆದರೆ, ಯಾವಾಗ ಎಂದು ನನಗೆ ಗೊತ್ತಿಲ್ಲ ಎಂದ ಅವರು, ಬಜೆಟ್ ಅಧಿವೇಶನದಲ್ಲಿ ಸಂವಿಧಾನದ ಕುರಿತು ಚರ್ಚೆಗೆ ಎರಡು ದಿನ ಮೀಸಲಿಟ್ಟಿರುವುದು ಸ್ವಾಗತಾರ್ಹ ಎಂದರು.

ಅಪಘಾತ ಸಂಭವಿಸಿದ ವೇಳೆ ಕಂದಾಯ ಸಚಿವ ಆರ್.ಅಶೋಕ್ ಪುತ್ರನ ಇದ್ದ ಎಂಬ ಪ್ರಕರಣ ಸಂಬಂಧ ತನಿಖೆ ಪ್ರಗತಿಯಲ್ಲಿದೆ. ಪಾರದರ್ಶಕವಾಗಿ ಪೊಲೀಸ್ ತಂಡಗಳು ತನಿಖೆ ನಡೆಸುತ್ತಿವೆ. ತನಿಖೆ ಬಳಿಕ ಸತ್ಯ ಬೆಳಕಿಗೆ ಬರಲಿದೆ. ಸರಕಾರ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News