ಸಿಎಎ ವಿರುದ್ಧದ ಹೋರಾಟ 'ಜೈಲ್‌ ಭರೋ ಚಳವಳಿ' ಆಗಬೇಕು: ಎಚ್.ಎಸ್.ದೊರೆಸ್ವಾಮಿ

Update: 2020-02-15 14:48 GMT

ಬೆಂಗಳೂರು, ಫೆ.15: ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರುದ್ಧ ಹೋರಾಟ ಮುಂದಿನ ವರ್ಷದೊಳಗೆ ಜೈಲ್‌ ಭರೋ ಚಳವಳಿ ರೂಪಿಸುವಷ್ಟು ಶಕ್ತಿಶಾಲಿಯಾಗಿ ರೂಪತಾಳಬೇಕೆಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ತಿಳಿಸಿದ್ದಾರೆ.

ಶನಿವಾರ ನಾವು ಭಾರತೀಯರು ವತಿಯಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ಸಿಎಎ, ಎನ್‌ಪಿಆರ್ ಹಾಗೂ ಎನ್‌ಅರ್‌ಸಿ ವಿರುದ್ಧ ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಎ, ಎನ್‌ಆರ್‌ಸಿ ವಿರುದ್ಧದ ಹೋರಾಟ ನಿರಂತರತೆಯನ್ನು ಪಡೆದುಕೊಳ್ಳಬೇಕು. ಒಂದು ವರ್ಷದ ನಂತರ ಜೈಲ್‌ ಭರೋ ಚಳವಳಿಗೆ ಸ್ವಇಚ್ಛೆಯಿಂದ ಭಾಗವಹಿಸುವವರ ಪಟ್ಟಿ ಮಾಡಿಕೊಂಡು ಹೋರಾಟ ರೂಪಿಸಬೇಕಾಗಿದ ಎಂದು ತಿಳಿಸಿದರು.

ಕಳೆದ ಮೂರು ತಿಂಗಳಿಂದ ಪ್ರಾರಂಭಗೊಂಡಿರುವ ಸಿಎಎ ವಿರುದ್ಧ ಹೋರಾಟ 2023ರವರೆಗೆ ನಿರಂತರವಾಗಿ ನಡೆಯಬೇಕು. ಆ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸುವಂತೆ ಮಾಡುವ ನಿಟ್ಟಿನಲ್ಲಿ ಪ್ರಗತಿಪರ ಸಂಘಟನೆಗಳು ಸಂಘಟಿತ ಹೋರಾಟ ಮಾಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಈಗಾಗಲೇ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶವೇ ಸಿಎಎ, ಎನ್‌ಪಿಆರ್‌ಗೆ ದೇಶದ ಜನತೆ ನೀಡಿರುವ ತಕ್ಕಪಾಠವೆಂದು ಬಿಜೆಪಿ ನಾಯಕರು ಅರಿತುಕೊಳ್ಳಬೇಕಾಗಿತ್ತು. ಆದರೆ, ಬಿಜೆಪಿ ನಾಯಕರು ಅಷ್ಟು ಸುಲಭವಾಗಿ ತಮ್ಮ ತಪ್ಪನ್ನು ಒಪ್ಪಿಕೊಳ್ಳುವವರಲ್ಲ. ಹೀಗಾಗಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಅವರು ಹೇಳಿದರು.

ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ ಮಾತನಾಡಿ, ಎನ್‌ಪಿಆರ್‌ನಲ್ಲಿ ಸೂಚಿಸುವ ದಾಖಲೆಗಳನ್ನು ತೋರಿಸಲು ಈ ದೇಶದ ಬಡವರ ಕೈಯಿಂದ ಸಾಧ್ಯವೇ ಆಗುವುದಿಲ್ಲ. ಕುಟುಂಬದ ಹಿರಿಯರ ಜನನದ ಪ್ರಾಮಾಣ ಪತ್ರ, ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳ ಪತ್ರಗಳು ಬಡವರ ಬಳಿಯಲ್ಲಿ ಇರಲು ಸಾಧ್ಯವೇ ಇಲ್ಲ. ಆದರೂ ಬಡವರನ್ನು ಮತ್ತಷ್ಟು ಹಿಂಸಿಸಲು ಇಂತಹ ಕಾನೂನುಗಳನ್ನು ಜಾರಿ ಮಾಡಲು ಮುಂದಾಗಿದೆ ಎಂದು ತಿಳಿಸಿದರು.

ಈಗಾಗಲೇ ದೇಶದಲ್ಲಿ ಅಂಗನವಾಡಿ ನೌಕರರಿಗೆ, ಆಶಾ ಕಾರ್ಯಕರ್ತೆಯರಿಗೆ ಬಿಸಿಯೂಟ ಕಾರ್ಮಿಕರಿಗೆ ಕನಿಷ್ಠ ವೇತನ ಸೌಲಭ್ಯಗಳನ್ನು ನೀಡುವುದಕ್ಕೆ ಸರಕಾರದ ಖಜಾನೆಯಲ್ಲಿ ಹಣವಿಲ್ಲ. ನಿರುದ್ಯೋಗ ಮಿತಿಮೀರಿ ಬೆಳೆಯುತ್ತಿದೆ. ದೇಶದ ಆರ್ಥಿಕತೆಗೆ ದುಸ್ಥಿತಿಗೆ ತಲುಪಿದೆ. ಆದರೂ ಸಾವಿರಾರು ಕೋಟಿ ರೂ. ವೆಚ್ಚಕ್ಕೆ ಕಾರಣವಾಗಿರುವ ಎನ್‌ಆರ್‌ಸಿ, ಎನ್‌ಪಿಆರ್‌ನ್ನು ಜಾರಿ ಮಾಡಲು ಅಗತ್ಯವಿದೆಯೇ ಎಂದು ಅವರು ಪ್ರಶ್ನಿಸಿದರು.

ಈ ವೇಳೆ ದಸಂಸ ಮುಖಂಡ ಲಕ್ಷ್ಮಿನಾರಾಯಣ ನಾಗವಾರ, ನಿರ್ಮಲಾ, ಗಾರ್ಮೆಂಟ್ ನೌಕರರ ಸಂಘಟನೆಯ ನಾಯಕಿ ಪ್ರತಿಭಾ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸರೋವರ ಬೆಂಕಿಕೆರೆ, ಕರ್ನಾಟಕ ಜನಶಕ್ತಿಯ ಗೌರಿ ಮತ್ತಿತರರಿದ್ದರು.

ಸಿಐಟಿಯುನಲ್ಲಿ 61 ಲಕ್ಷ ಸದಸ್ಯರಿದ್ದಾರೆ. ನಮ್ಮ ಮುಂದಿನ ರಾಷ್ಟ್ರೀಯ ಸಮ್ಮೇಳನದಲ್ಲಿ ನಮ್ಮ ಯಾವುದೇ ಸದಸ್ಯರು ಎನ್‌ಪಿಆರ್, ಎನ್‌ಆರ್‌ಸಿಗೆ ಮಾಹಿತಿ ಕೊಡುವುದಿಲ್ಲವೆಂದು ತೀರ್ಮಾನಕ್ಕೆ ಬರಲಿದ್ದೇವೆ.

-ವರಲಕ್ಷ್ಮಿ, ಸಿಐಟಿಯು ರಾಜ್ಯಾಧ್ಯಕ್ಷೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News