ಬಡವರನ್ನು ಎರಡನೇ ದರ್ಜೆ ನಾಗರಿಕರನ್ನಾಗಿಸಲು ಎನ್‌ಆರ್‌ಸಿ ಜಾರಿ: ಬೆಂಗಳೂರಿನಲ್ಲಿ ಜಿಗ್ನೇಶ್ ಮೇವಾನಿ

Update: 2020-02-15 18:31 GMT

ಬೆಂಗಳೂರು, ಫೆ.15: ದೇಶದ ಬಡವರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಿ, ಅವರಿಂದ ಬಿಟ್ಟಿ ಚಾಕರಿ ಮಾಡಿಸುವುದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ನ್ನು ಜಾರಿ ಮಾಡಲು ನಿರ್ಧರಿಸಿದೆ ಎಂದು ಹೋರಾಟಗಾರ ಹಾಗೂ ಶಾಸಕ ಜಿಗ್ನೇಶ್ ಮೇವಾನಿ ಆತಂಕ ವ್ಯಕ್ತಪಡಿಸಿದ್ದಾರೆ.

ಶನಿವಾರ ನಾವು ಭಾರತೀಯರು ವತಿಯಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ಸಿಎಎ, ಎನ್‌ಪಿಆರ್ ಹಾಗೂ ಎನ್‌ಅರ್‌ಸಿಯಿಂದ ದುರ್ಬಲ ಸಮುದಾಯಗಳಿಗೆ ಎದುರಾಗುವ ದುಷ್ಪರಿಣಾಮಗಳ ಕುರಿತು ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಕಾನೂನುಗಳು ಕೇವಲ ಮುಸ್ಲಿಮ್ ಸಮುದಾಯಕ್ಕೆ ಮಾತ್ರ ಸಮಸ್ಯೆಯಾಗಲಿದೆ ಎಂಬ ತಪ್ಪು ಭಾವನೆಯನ್ನು ಬಿತ್ತಲಾಗುತ್ತಿದೆ. ಆದರೆ, ಈ ಕಾನೂನುಗಳು ದಲಿತರು, ಅನಕ್ಷರಸ್ತರು, ಅಲೆಮಾರಿಗಳು, ಬುಡಕಟ್ಟುಗಳು, ಮಹಿಳೆಯರು ಒಳಗೊಂಡಂತೆ ಎಲ್ಲ ಧರ್ಮದ ಬಡವರನ್ನು ಬಾಧಿಸಲಿದೆ ಎಂದು ಅವರು ಎಚ್ಚರಿಕೆ ನೀಡಿದರು.

ಕರ್ನಾಟಕ ಸರಕಾರ ಕಾರ್ಪೊರೇಟ್ ಫಾರ್ಮಿಂಗ್ ಕಾಯ್ದೆಯನ್ನು ಜಾರಿ ಮಾಡಲು ಮುಂದಾಗಿದೆ. ಇದರ ಉದ್ದೇಶವೇ, ದಲಿತರಿಗೆ, ಹಿಂದುಳಿದವರಿಗೆ, ಬಡವರ ಲಕ್ಷಾಂತರ ಎಕರೆ ಜಮೀನನ್ನು ಅಂಬಾನಿ, ಅದಾನಿ ಸೇರಿದಂತೆ ಬಂಡವಾಳಶಾಹಿಗಳಿಗೆ ಒಪ್ಪಿಸುವುದೇ ಆಗಿದೆ. ಆ ಮೂಲಕ ಎನ್‌ಪಿಆರ್, ಎನ್‌ಆರ್‌ಸಿ ಜಾರಿ ಮಾಡಿ, ದೇಶದ ಬಡವರನ್ನು ಇಲ್ಲಿ ಬಿಟ್ಟಿ ಚಾಕರಿ ಮಾಡಿಸುವ ಹುನ್ನಾರ ಅಡಗಿರಬಹುದೆಂದು ಅವರು ತಿಳಿಸಿದರು.

ಬಿಜೆಪಿ, ಆರೆಸ್ಸೆಸ್ ದೇಶದಲ್ಲಿ ನಿರಾಶ್ರಿತ ಶಿಬಿರಗಳನ್ನು ಸ್ಥಾಪಿಸಿದರೆ, ಸಂವಿಧಾನದ ನಂಬಿಕೆ ಇಟ್ಟಿರುವ ದೇಶದ ಬಹುಜನತೆ ದೇಶಾದ್ಯಂತ ಶಾಹೀನ್‌ ಬಾಗ್‌ಗಳನ್ನು ನಿರ್ಮಿಸುತ್ತಾರೆ. ಆ ಮೂಲಕ ದೇಶದಲ್ಲಿ ಬಿಜೆಪಿಯ ದೇಶದ್ರೋಹಿ ಕೃತ್ಯಗಳನ್ನು ಯಶಸ್ವಿಯಾಗಿ ತಡೆಯುತ್ತೇವೆಂದು ಅವರು ಹೇಳಿದರು.

ಜೈಲಿಗೆ ಹೋಗಲು ಸಿದ್ಧ: ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರೋಧಿಸಿ ಏಕ ಮಾತ್ರಕ್ಕೆ ವೈದ್ಯರು, ಶಿಕ್ಷಕರು, ಹೋರಾಟಗಾರರನ್ನು ಜೈಲಿಗೆ ಹಾಕಲಾಗುತ್ತಿದೆ. ಹೀಗಾಗಿ ದೇಶದ ಹಿತಕ್ಕಾಗಿ ನಾನೂ ಜೈಲಿಗೆ ಹೋಗಲು ಸಿದ್ಧ. ಅದು ಕರ್ನಾಟಕವಾಗಲಿ, ಗುಜರಾತಾಗಲಿ, ಹೋರಾಟ ಮಾಡುತ್ತಲೇ ಜೈಲಿಗೆ ಹೋಗಲು ಸಿದ್ಧನಿದ್ದೇನೆಂದು ಅವರು ಹೇಳಿದರು.

ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂನ ಕೂಲಿಕಾರ್ಮಿಕರು ಬೆಂಗಳೂರಿನಲ್ಲಿ ಹಲವಾರು ವರ್ಷಗಳಿಂದ ನೆಲೆಸಿ, ಐಟಿಬಿಟಿ ಕಂಪೆನಿಗಳನ್ನು, ಮೇಲ್ಸೇತುವೆಗಳನ್ನು ನಿರ್ಮಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಆದರೆ, ಬಿಜೆಪಿ ಹಾಗೂ ರಿಯಲ್ ಎಸ್ಟೇಟ್ ಮಾಫಿಯಾದವರು, ಈ ಕಾರ್ಮಿಕರನ್ನು ಬಾಂಗ್ಲಾದೇಶಿಯರು ಎಂದು ಆರೋಪಿಸಿ, ಅವರು ನೆಲೆಸಿದ್ದ ಗುಡಿಸುಗಳನ್ನು ಧ್ವಂಸ ಮಾಡಿದ್ದಾರೆ. ಹಲವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

-ಜಿಗ್ನೇಶ್ ಮೇವಾನಿ, ಶಾಸಕ ಹಾಗೂ ಹೋರಾಟಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News