ಬಿಎಸ್‌ವೈ ಆರೆಸ್ಸೆಸ್ ಮಾತು ಕೇಳಿದರೆ ಕೆಟ್ಟ ಪರಿಣಾಮ: ಸಿದ್ದರಾಮಯ್ಯ ಎಚ್ಚರಿಕೆ

Update: 2020-02-15 15:23 GMT

ಬೆಂಗಳೂರು, ಫೆ.15: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆರೆಸ್ಸೆಸ್ ಮಾತು ಕೇಳಿ, ಕಾನೂನು ಮೀರಿ ನಡೆದುಕೊಂಡರೆ ಮುಂದಿನ ದಿನಗಳಲ್ಲಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಶನಿವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಕೆಪಿಸಿಸಿ ವತಿಯಿಂದ ಹಮ್ಮಿಕೊಂಡಿದ್ದ, ಬಿಜೆಪಿ ಸರಕಾರದಿಂದ ಪೊಲೀಸ್ ಇಲಾಖೆ ದುರ್ಬಳಕೆ ವಿರೋಧಿಸಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಯಡಿಯೂರಪ್ಪ ಶಾಶ್ವತವಾಗಿ ಅಧಿಕಾರದಲ್ಲಿ ಇರುವುದಿಲ್ಲ. ಆದರೆ, ಸಣ್ಣ ವಿಚಾರಗಳನ್ನು ದೊಡ್ಡದು ಮಾಡಿ, ಕಾನೂನು ದುರುಪಯೋಗಪಡಿಸಿಕೊಳ್ಳವುದು ಸರಿಯಲ್ಲ. ಈ ಬಗ್ಗೆ ಎಚ್ಚರಿಕೆಯಿಂದ ಸರಕಾರ ನಡೆದುಕೊಳ್ಳಬೇಕು. ಇಲ್ಲದಿದ್ದಲ್ಲಿ, ಭವಿಷ್ಯದಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನುಡಿದರು.

ಬಾಬರಿ ಮಸೀದಿ ಧ್ವಂಸಗೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಸೇರಿದ ಶಾಲೆಯಲ್ಲಿ ಬಹಳ ಕೆಟ್ಟದಾಗಿ ನಾಟಕ ಪ್ರದರ್ಶನ ಮಾಡಲಾಗಿದೆ. ಅಲ್ಲದೆ, ಈ ಬಗ್ಗೆ ಬಾಬರಿ ಮಸೀದಿ ಧ್ವಂಸ ಕಾನೂನು ಬಾಹಿರ ಎಂದು ಸುಪ್ರೀಂಕೋಟ್ ತೀರ್ಪು ನೀಡಿದೆ. ಹಾಗಿದ್ದರೂ ಕಲ್ಲಡ್ಕ ಪ್ರಭಾಕರ್ ಶಾಲೆ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ. ಅದೇ ರೀತಿ, ದಿನನಿತ್ಯ ಪ್ರಚೋದನಕಾರಿ ಭಾಷಣ ಮಾಡುವ ಸಂಸದರಾದ ನಳೀನ್ ಕಟೀಲ್, ಅನಂತಕುಮಾರ್ ಹೆಗಡೆ, ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ, ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧವೂ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸಿಲ್ಲ ಏಕೆ ಎಂದು ಖಾರವಾಗಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಬೀದರ್ ಜಿಲ್ಲೆಯ ಶಾಹೀನ್ ಶಾಲೆಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ವಿಡಂಬನಾತ್ಮಕ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಇದರಲ್ಲಿ 11 ವರ್ಷದ ವಿದ್ಯಾರ್ಥಿನಿಯೊಬ್ಬಳು ನಾನು ಭಾರತೀಯಳು ಎಂದು ಸಾಬೀತುಪಡಿಸಲು ದಾಖಲಾತಿ ಕೇಳುತ್ತಾರಂತೆ. ನಾನು ದಾಖಲಾತಿಗಳನ್ನು ಎಲ್ಲಿಂದ ತರಲಿ, ಒಂದು ವೇಳೆ ಯಾರಾದರೂ ದಾಖಲಾತಿ ಕೇಳಿದರೆ ಹೊಡೆಯುತ್ತೇನೆ ಎಂದು ಸಂಭಾಷಣೆ ಹೇಳಿದ್ದಾಳೆ. ಅದು ನರೇಂದ್ರ ಮೋದಿ ಕುರಿತು ನೀಡಿರುವ ಹೇಳಿಕೆ ಅಲ್ಲ. ಆದರೂ ಅಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಾಲಕಿಯ ವಿಚಾರಣೆ ನಡೆಸಿದ ಪೊಲೀಸರು ತಾಯಿಯೇ ಆ ರೀತಿ ಹೇಳಿಕೊಟ್ಟಿದ್ದಾರೆ ಎಂದು ಹೇಳಿಕೆ ಬರೆದುಕೊಂಡಿದ್ದಾರೆ. ಬಾಲಕಿಯನ್ನು ನಾನು ಕೇಳಿದಾಗ ತಾಯಿ ಬಗ್ಗೆ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ. ಶಾಲೆಯ ಮುಖ್ಯೋಪಾಧ್ಯಾಯರ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು. ಬಾಲಕಿ ತಾಯಿ ಹಾಗೂ ಮುಖ್ಯೋಪಾಧ್ಯಾಯಿನಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈಗ ಜಾಮೀನು ಸಿಕ್ಕಿದೆ ಎಂದರು.

ಪೊಲೀಸರು ಸಮವಸ್ತ್ರ ಮತ್ತು ಶಸ್ತ್ರಾಸ್ತ್ರಗಳ ಜೊತೆ ಶಾಲೆಗೆ ತೆರಳಿ 5 ದಿನ 9 ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದ್ದಾರೆ. ಇದೂ ಕೂಡ ಕಾನೂನು ಬಾಹಿರ ಕೃತ್ಯ. ಅಲ್ಲದೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಾಹಿತಿ ಇಲ್ಲದೆ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಬಿಜೆಪಿ ಸರಕಾರ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸಂವಿಧಾನ ಬಾಹಿರವಾಗಿ ನಡೆದುಕೊಳ್ಳುತ್ತಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News