ಕಾಶ್ಮೀರ ವಿವಾದವನ್ನು ಭಾರತದ ಪ್ರಜಾಪ್ರಭುತ್ವ ಬಗೆಹರಿಸಲಿದೆ: ಅಮೆರಿಕ ಸೆನೆಟರ್ ಗೆ ಸಚಿವ ಜೈಶಂಕರ್ ಖಡಕ್ ನುಡಿ

Update: 2020-02-15 16:15 GMT

ಮ್ಯೂನಿಕ್,ಫೆ.15: ಕಾಶ್ಮೀರ ವಿವಾದವನ್ನು ಭಾರತವು ತಾನಾಗಿಯೇ ಬಗೆಹರಿಸಲಿದೆಯೆಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಗುರುವಾರ ಅಮೆರಿಕದ ಹಿರಿಯ ಸೆನೆಟ್ ಸದಸ್ಯರೊಬ್ಬರಿಗೆ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಜರ್ಮನಿಯ ಮ್ಯೂನಿಕ್‌ನಲ್ಲಿ ಶುಕ್ರವಾರ ನಡೆದ ಭದ್ರತಾ ಸಮಾವೇಶದ ಸಂದರ್ಭ ತನ್ನೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದ್ದ ಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಮ್ ಅವರಿಗೆ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

   ಸಮಿತಿ ಚರ್ಚೆಯೊಂದರಲ್ಲಿ ಪಾಲ್ಗೊಂಡ ಸೆನೆಟರ್ ಲಿಂಡ್ಸೆ ಗ್ರಹಾಮ್ ಅ ವರು ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸುತ್ತಾ, ಕಾಶ್ಮೀರ ವಿವಾದವನ್ನು ಪ್ರಜಾತಾಂತ್ರಿಕವಾಗಿ ಇತ್ಯರ್ಥಪಡಿಸುವುದು ಪ್ರಜಾಪ್ರಭುತ್ವವನ್ನು ಪ್ರಚುರ ಪಡಿಸುವ ಅತ್ಯುತ್ತಮ ಮಾರ್ಗವಾಗಿದೆಯೆಂದು ಹೇಳಿದರು.

  ‘‘ ಭಾರತದಲ್ಲಿ ನೀವು ಮುನ್ನಡೆಸುವಾಗ, ನಮ್ಮ ತಾಯ್ನಾಡಿನಲ್ಲಿರುವಂತಹ ಸಮಸ್ಯೆಗಳನ್ನೇ ನೀವು ಕೂಡಾ ಎದುರಿಸುತ್ತಿರುವಿರಿ. ಕಾಶ್ಮೀರದ ವಿಷಯ ಹೇಗೆ ಕೊನೆಗೊಳ್ಳುತ್ತದೆಯೆಂಬುದು ನಿಮಗೇ ತಿಳಿಯಲಾರದು. ಆದರೆ, ಎರಡು ಪ್ರಜಾಪ್ರಭುತ್ವವಾದಿ ರಾಷ್ಟ್ರಗಳು ಅದನ್ನು ವಿಭಿನ್ನವಾದ ರೀತಿಯಲ್ಲಿ ಬಗೆಹರಿಸಲಿದೆಯೆಂಬುದನ್ನು ಖಾತರಿಪಡಿಸೋಣ. ಬಹುಶಃ ಪ್ರಜಾಪ್ರಭುತ್ವವನ್ನು ಪ್ರಚುರಪಡಿಸುವ ಅತ್ಯುತ್ತಮ ಮಾರ್ಗ ಇದಾಗಿದೆ’’ ಎಂದು ರಿಪಬ್ಲಿಕನ್ ನಾಯಕಿಯೂ ಆಗಿರುವ ಲಿಂಡ್ಸೆ ಗ್ರಹಾಮ್ ತಿಳಿಸಿದ್ದರು.

  ಲಿಂಡ್ಸೆ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಜೈಶಂಕರ್, ‘‘ ಸೆನೆಟರ್ ಅವರೇ ಚಿಂತಿಸಬೇಡಿ. ಒಂದು ದೇಶದ ಪ್ರಜಾಪ್ರಭುತ್ವವು ಅದನ್ನು ಇತ್ಯರ್ಥಪಡಿಸಲಿದೆ ಮತ್ತು ಆ ದೇಶ ಯಾವುದೆಂಬುದು ನಿಮಗೇ ತಿಳಿಯಲಿದೆ’’ ಎಂದು ಹೇಳಿದ್ದಾರೆ.

   ಇತಿಹಾಸದಲ್ಲಿರುವುದಕ್ಕಿಂತ ಕಡಿಮೆ ಮಟ್ಟದ ವಿಶ್ವಸನೀಯತೆಯನ್ನು ವಿಶ್ವಸಂಸ್ಥೆ ಈಗ ಹೊಂದಿದೆಯೆಂದು ಅಭಿಪ್ರಾಯಿಸಿರುವ ಜೈಶಂಕರ್, ಇದನ್ನು ಸರಿಪಡಿಸಲು ‘‘ಏನಾದರೂ ಮಾಡಬೇಕಿದೆ’’ ಎಂದವರು ಹೇಳಿದ್ದಾರೆ.

   ‘‘ವಿಶ್ವಸಂಸ್ಥೆಯು ಇತಿಹಾಸದಲ್ಲಿದ್ದುದಕ್ಕಿಂತ ಈಗ ತುಂಬಾ ಕಡಿಮೆ ಮಟ್ಟದ ವಿಶ್ವಸನೀಯತೆಯನ್ನು ಹೊಂದಿದೆ. ಆದರೆ ಇದರಲ್ಲಿ ಅಚ್ಚರಿಯೇನಿಲ್ಲ. ಯಾಕೆಂದರೆ 75 ವರ್ಷಗಳಷ್ಟು ಹಳೆಯದಾದ ಹಲವು ವಿಷಯಗಳು ಉತ್ತಮವಾದುದಲ್ಲ ಎಂಬುದು ಆ ಬಗ್ಗೆ ಯೋಚಿಸಿದರೆ ನಿಮಗೆ ಮನದಟ್ಟಾಗುತ್ತದೆ. ಅವುಗಳನ್ನು ಖಂಡಿತವಾಗಿಯೂ ಸರಿಪಡಿಸಲು ಏನಾದರೂ ಮಾಡಬೇಕಿದೆ’’ ಎಂದು ಜೈಶಂಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News