ಸಿಎಎ, ಎನ್‌ಆರ್‌ಸಿ ಬಗ್ಗೆ ಮಾಹಿತಿ ನೀಡಲು ರಾಜ್ಯದ 224 ಕ್ಷೇತ್ರಗಳಲ್ಲಿ ಕಾನೂನು ತಂಡ: ಡಾ.ನಾಸಿರ್ ಹುಸೇನ್

Update: 2020-02-15 17:12 GMT

ಬೆಂಗಳೂರು, ಫೆ.15: ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಕುರಿತು ಜನಸಾಮಾನ್ಯರಲ್ಲಿ ಕಾನೂನಾತ್ಮಕವಾಗಿ ಅರಿವು ಮೂಡಿಸಲು ಹಾಗೂ ಅಗತ್ಯ ದಾಖಲಾತಿಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಲು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಕಾನೂನು ತಂಡಗಳನ್ನು ರಚನೆ ಮಾಡಲಾಗುವುದು ಎಂದು ಫೋರಮ್ ಫಾರ್ ಡೆಮಾಕ್ರಟಿಕ್ ರೈಟ್ಸ್ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸಿರ್ ಹುಸೇನ್ ತಿಳಿಸಿದರು.

ಶನಿವಾರ ನಗರದ ದೇವರಾಜ ಅರಸು ಭವನದಲ್ಲಿ ರಾಜ್ಯದ ಫೋರಮ್ ಫಾರ್ ಡೆಮಾಕ್ರಟಿಕ್ ರೈಟ್ಸ್ ಹಾಗೂ ಬೆಂಗಳೂರಿನ ಅಡ್-ಹಾಕ್ ಲೀಗಲ್ ಸಮಿತಿಯ ಜಂಟಿ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ‘ಕಾನೂನು ಕಾರ್ಯಗಾರ’(ಅಸ್ಸಾಂನಲ್ಲಿ ಎನ್‌ಆರ್‌ಸಿ ಅನುಭವ)ದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೇರಿದಂತೆ ಹಲವು ರಾಜ್ಯಗಳ ಹೈಕೋರ್ಟ್‌ಗಳಲ್ಲಿ ಅರ್ಜಿಗಳು ವಿಚಾರಣೆಗೆ ಬಾಕಿಯಿವೆ. ರಾಷ್ಟ್ರಮಟ್ಟದಲ್ಲಿ ನಮ್ಮ ರಾಜಕೀಯ ಹಾಗೂ ಧಾರ್ಮಿಕ ನಾಯಕರು ಕೈಗೊಳ್ಳುವ ತೀರ್ಮಾನದಂತೆ ಎನ್‌ಪಿಆರ್‌ನಲ್ಲಿ ಪಾಲ್ಗೊಳ್ಳಬೇಕೆ ಅಥವಾ ಬೇಡವೆ ಎಂಬುದರ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಅವರು ಹೇಳಿದರು.

ಅಸ್ಸಾಂನಲ್ಲಿ ಎನ್‌ಆರ್‌ಸಿ ಜಾರಿಗೊಳಿಸಿದಾಗ ಆದಂತಹ ಅನುಭವಗಳ ಕುರಿತು ನಮ್ಮ ರಾಜ್ಯದ ವಕೀಲರಿಗೆ ಮನವರಿಕೆ ಮಾಡಿಕೊಡಲು ಈ ಕಾರ್ಯಾಗಾರ ಆಯೋಜಿಸಲಾಗಿತ್ತು. ಒಂದು ಉತ್ತಮವಾದ ಸಂವಾದ ಹಾಗೂ ಚರ್ಚೆ ನಡೆದಿದೆ ಎಂದು ನಾಸಿರ್ ಹುಸೇನ್ ತಿಳಿಸಿದರು.

ಅಡ್-ಹಾಕ್ ಲೀಗಲ್ ಸಮಿತಿಯ ಅಧ್ಯಕ್ಷ ಸಯ್ಯದ್ ಇಶ್ತಿಯಾಕ್ ಅಹ್ಮದ್ ಮಾತನಾಡಿ, ಅಸ್ಸಾಂನಲ್ಲಿ ಎನ್‌ಆರ್‌ಸಿ ಜಾರಿಗೊಳಿಸಿದ ಸಂದರ್ಭದಲ್ಲಿ ಸಾಮಾನ್ಯ ಜನರು ಎದುರಿಸಿದಂತಹ ಸಂಕಷ್ಟಗಳನ್ನು, ಪೌರತ್ವ ಕೊಡಿಸುವ ನಿಟ್ಟಿನಲ್ಲಿ ವಿದೇಶಿ ನ್ಯಾಯಾಧೀಕರಣ, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ನಲ್ಲಿ ಹೋರಾಟ ಮಾಡಿದ ವಿಧಾನವನ್ನು ಅವರು ತಿಳಿಸಿದ್ದಾರೆ ಎಂದರು.

ನಮ್ಮ ರಾಜ್ಯದ ವಕೀಲರಿಗೆ ಈ ಕಾರ್ಯಾಗಾರ ಮಾರ್ಗದರ್ಶಿಯಾಗಿದೆ. ರಾಜ್ಯದಲ್ಲಿ ಎನ್‌ಆರ್‌ಸಿ ಜಾರಿಗೊಳಿಸಿದರೆ ಬಡವರು, ನಿರುದ್ಯೋಗಿಗಳು, ಅನಕ್ಷರಸ್ಥರು, ಗ್ರಾಮೀಣ ಪ್ರದೇಶದಲ್ಲಿರುವ ಜನರು ವಿವಿಧ ದಾಖಲಾತಿಗಳನ್ನು ಪಡೆಯುವಲ್ಲಿ ಯಾವ ರೀತಿಯಲ್ಲಿ ಸಹಕಾರ ನೀಡಬಹುದು ಎಂಬುದರ ಕುರಿತು ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು. ಅಸ್ಸಾಂನಲ್ಲಿ ಎದುರಿಸಿದಂತಹ ಸಂಕಷ್ಟಗಳು ನಮ್ಮ ರಾಜ್ಯದಲ್ಲಿ ಎದುರಾಗಬಾರದು. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ತಾಲೂಕು ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ನಾವು ಕೆಲಸ ಮಾಡಲು ನಿರ್ಧರಿಸಿದ್ದೇವೆ. ಕೆಲವು ಕಿಡಿಗೇಡಿಗಳು ದಾಖಲೆಗಳನ್ನು ಸೃಷ್ಟಿಸಿಕೊಡುವುದಾಗಿ ಹೇಳಿ ಅಮಾಯಕರನ್ನು ವಂಚಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಕಲ್ಪಿಸಬಾರದು ಎಂದು ಅವರು ಹೇಳಿದರು.

ಫೋರಮ್ ಫಾರ್ ಡೆಮಾಕ್ರಟಿಕ್ ರೈಟ್ಸ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಸಯ್ಯದ್ ಝಮೀರ್ ಪಾಷ ಮಾತನಾಡಿ, ಅಸ್ಸಾಂ ರಾಜ್ಯದ ವಕೀಲರ ಜೊತೆ ನಡೆದ ಚರ್ಚೆಯಿಂದಾಗಿ ನಮ್ಮ ರಾಜ್ಯದ ವಕೀಲರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ ಎಂದರು.

ಹೈಕೋರ್ಟ್, ಸುಪ್ರೀಂಕೋರ್ಟ್ ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳ ಮುಂದೆ ಕಾನೂನಾತ್ಮಕವಾದ ಹೋರಾಟದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ನಾವು ಕೇವಲ ಮುಸ್ಲಿಮರನ್ನು ಗುರಿಯನ್ನಾಗಿಸಿಕೊಂಡು ಕೆಲಸ ಮಾಡುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿರುವ ಅನ್ಯ ಧರ್ಮೀಯರಿಗೂ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಇಂದ ಆಗುವಂತಹ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಅಧ್ಯಕ್ಷ ನ್ಯಾ.ಜವಾದ್ ರಹೀಮ್ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು. ಅಸ್ಸಾಂನ ಗುವಾಹಟಿ ಹೈಕೋರ್ಟ್‌ನ ನ್ಯಾಯವಾದಿಗಳಾದ ಎಂ.ಖದ್ದಾಮ್ ಹುಸೇನ್ ಹಾಗೂ ಎ.ಎಸ್.ತಪಾದರ್, ಸಾಮಾಜಿಕ ಹೋರಾಟಗಾರ ಹಾಗೂ ಶಿಕ್ಷಣ ತಜ್ಞ ಅತೀಖುರ್ರಹ್ಮಾನ್ ಬರ್ಬುಹಿಯಾ ಕಾನೂನು ಕಾರ್ಯಾಗಾರದಲ್ಲಿ ಅಸ್ಸಾಂನಲ್ಲಿ ಎನ್‌ಆರ್‌ಸಿ ಜಾರಿಯಿಂದಾಗಿ ಆದ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಅಡ್-ಹಾಕ್ ಲೀಗಲ್ ಸಮಿತಿಯ ಸದಸ್ಯ ಶಾಹುಲ್ ಹಮೀದ್, ನಿವೃತ್ತ ಐಎಎಸ್ ಅಧಿಕಾರಿ ಮೀರ್ ಅನೀಸ್ ಅಹ್ಮದ್, ನಿವೃತ್ತ ಕೆಎಎಸ್ ಅಧಿಕಾರಿ ಏಜಾಯ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News