ಅಸಮ್ಮತಿಗೆ ‘ದೇಶವಿರೋಧಿ’ ಹಣೆಪಟ್ಟಿ ಪ್ರಜಾಪ್ರಭುತ್ವದ ಹೃದಯಕ್ಕೆ ನೀಡುವ ಹೊಡೆತ

Update: 2020-02-15 16:42 GMT
ಫೈಲ್ ಚಿತ್ರ

ಹೊಸದಿಲ್ಲಿ,ಫೆ.15: ಭಿನ್ನಮತಕ್ಕೆ ದೇಶವಿರೋಧಿ ಅಥವಾ ಪ್ರಜಾಪ್ರಭುತ್ವ ವಿರೋಧಿ ಎಂಬ ಹಣೆಪಟ್ಟಿ ಕಟ್ಟುವುದು ವಿಶಾಲವಾದ ಪ್ರಜಾಪ್ರಭುತ್ವದ ಹೃದಯಕ್ಕೆ ನೀಡುವ ಹೊಡೆತವಾಗಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಾಧೀಶ ಡಿ.ವೈ.ಚಂದ್ರಚೂಡ ಶನಿವಾರ ತಿಳಿಸಿದ್ದಾರೆ.

‘‘ಕಾನೂನುಬದ್ಧವಾಗಿ ರಚನೆಯಾದ ಸರಕಾರವು ಮಾತುಕತೆ, ಸಂವಾದಗಳಿಗೆ ಬದ್ಧವಾಗಿರಬೇಕು ಮತ್ತು ರಾಜಕೀಯ ಪೈಪೋಟಿಗೆ ತನ್ನನ್ನು ಸೀಮಿತಗೊಳಿಸಕೂಡದು’’ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಅಹ್ಮದಾಬಾದ್‌ನ ಗುಜರಾತ್ ಹೈಕೋರ್ಟ್ ಸಭಾಭವನದಲ್ಲಿ ನಡೆದ 15ನೇ ಪಿ.ಡಿ. ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

    ‘‘ಪ್ರತಿಭಟನೆಯ ಹಕ್ಕು ಹಾಗೂ ಭಿನ್ನಮತದ ಅಭಿವ್ಯಕ್ತಿ ಸೇರಿದಂತೆ ಕಾನೂನಿನ ಪರಿಮಿತಿಯೊಳಗೆ, ನಾಗರಿಕರು ಯಾವುದೇ ಮನನೀಯವಾದ ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕುಗಳನ್ನು ಅನುಭವಿಸುವುದನ್ನು ಉದಾರವಾದಿ ಪ್ರಜಾಪ್ರಭುತ್ವಗಳು ಖಾತರಿಪಡಿಸಿಕೊಳ್ಳಬೇಕು. ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಗೆ ದೇಶವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಎಂದು ನೇರವಾಗಿ ಹಣೆಪಟ್ಟಿ ಹಚ್ಚುವುದು, ಸಂವಿಧಾನಿಕ ಮೌಲ್ಯಗಳನ್ನು ರಕ್ಷಿಸುವ ಹಾಗೂ ಪ್ರಜಾಪ್ರಭುತ್ವವನ್ನು ಉತ್ತೇಜಿಸಲು ನಾವು ಹೊಂದಿರುವ ಬದ್ಧತೆಯ ಹೃದಯಕ್ಕೆ ನೀಡುವ ಹೊಡೆತವಾಗಿದೆಯೆಂದು ಅವರು ಅಭಿಪ್ರಾಯಿಸಿದರು.

  ಭಿನ್ನಾಭಿಪ್ರಾಯವು ಪ್ರಜಾಪ್ರಭುತ್ವದ ಸುರಕ್ಷತಾ ಕವಾಟವೆಂದು ಅವರು ಬಣ್ಣಿಸಿದರು. ಭಿನ್ನಾಭಿಪ್ರಾಯವನ್ನು ಮೌನಗೊಳಿಸುವುದು ಹಾಗೂ ಜನರ ಮನದಲ್ಲಿ ಭೀತಿ ಸೃಷ್ಟಿಸುವುದು ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಸಾಂವಿಧಾನಿಕ ಮೌಲ್ಯಗಳಿಗಾಗಿನ ಬದ್ಧತೆಯ ಉಲ್ಲಂಘನೆಯಾಗಿದೆ ಎಂದು ಚಂದ್ರಚೂಡ ಅಭಿಪ್ರಾಯಿಸಿದರು.

   ‘‘ ಭಾರತವನ್ನು ರೂಪಿಸುವ ವರ್ಣಗಳು: ಬಹುಮತದಿಂದ ಬಹುತ್ವದೆಡೆಗೆ’ ಎಂಬ ವಿಷಯದ ಕುರಿತಾಗಿ ಉಪನ್ಯಾಸ ನೀಡಿದ ಅವರು ಯಾವುದೇ ಪ್ರತೀಕಾರದ ಭೀತಿಯಿಲ್ಲದೆ ಪ್ರತಿಯೋರ್ವ ವ್ಯಕ್ತಿಯು ತನ್ನ ಅಭಿಪ್ರಾಯವನ್ನು ಧ್ವನಿಯೆತ್ತಲು ಸಾಧ್ಯವಾಗುವಂತಹ ವಾತಾವರಣ ಹಾಗೂ ಅವಕಾಶವನ್ನು ಸೃಷ್ಟಿಯಾಗುವಂತೆ ಮಾಡುವುದು ನಿಜವಾದ ಪ್ರಜಾಪ್ರಭುತ್ವದ ಅಗ್ನಿಪರೀಕ್ಷೆಯಾಗಿದೆ ಎಂದರು.

  ಭಿನ್ನಮತವನ್ನು ಹತ್ತಿಕ್ಕುವುದು ಮತ್ತು ಪರ್ಯಾಯ ಅನಿಸಿಕೆಗಳನ್ನು ವ್ಯಕ್ತಪಡಿಸುವ ಜನಪ್ರಿಯ ಅಥವಾ ಜನಪ್ರಿಯವಲ್ಲದ ಧ್ವನಿಗಳನ್ನು ಹತ್ತಿಕ್ಕುವುದು ದೇಶದ ಬಹುತ್ವವಾದಕ್ಕೆ ಇದು ಅತಿ ದೊಡ್ಡ ಬೆದರಿಕೆಯಾಗಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News