ಹಡಗಿನಿಂದ ಭಾರತೀಯರನ್ನು ಇಳಿಸಲು ಯತ್ನ: ಜಪಾನ್‌ನಲ್ಲಿ ಭಾರತೀಯ ರಾಯಭಾರ ಕಚೇರಿ

Update: 2020-02-15 16:48 GMT

ಟೋಕಿಯೊ (ಜಪಾನ್), ಫೆ. 15: ಜಪಾನ್ ಕರಾವಳಿಯಲ್ಲಿ ಲಂಗರು ಹಾಕಿರುವ ಪ್ರವಾಸಿ ಹಡಗು ‘ಡೈಮಂಡ್ ಪ್ರಿನ್ಸೆಸ್’ನ ದಿಗ್ಬಂಧನದ ಅವಧಿ ಮುಗಿದ ಬಳಿಕ, ಅದರಲ್ಲಿರುವ ಎಲ್ಲ ಭಾರತೀಯರನ್ನು ಕೆಳಗೆ ತರಲು ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ಜಪಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಶನಿವಾರ ತಿಳಿಸಿದೆ.

ಹಡಗಿನಲ್ಲಿರುವ ಪ್ರವಾಸಿಗರ ಪೈಕಿ, ಮೂವರು ಭಾರತೀಯರು ಸೇರಿದಂತೆ 218 ಮಂದಿಯಲ್ಲಿ ನೂತನ-ಕೊರೋನವೈರಸ್ ಕಾಯಿಲೆ ಇರುವುದು ದೃಢಪಟ್ಟಿದೆ ಎಂದು ಜಪಾನ್ ಅಧಿಕಾರಿಗಳು ಹೇಳಿದ್ದಾರೆ.

ಈ ತಿಂಗಳ ಆದಿ ಭಾಗದಲ್ಲಿ ಜಪಾನ್ ಕರಾವಳಿಗೆ ಆಗಮಿಸಿದ ಪ್ರವಾಸಿ ಹಡಗಿನಲ್ಲಿ 3,711 ಮಂದಿಯಿದ್ದು, ಆ ಪೈಕಿ 132 ಸಿಬ್ಬಂದಿ ಮತ್ತು 6 ಪ್ರವಾಸಿಗರು ಸೇರಿದಂತೆ ಒಟ್ಟು 138 ಮಂದಿ ಭಾರತೀಯರು. ಕಳೆದ ತಿಂಗಳು ಹಾಂಕಾಂಗ್‌ನಲ್ಲಿ ಕೆಳಗಿಳಿದ ಪ್ರವಾಸಿಯೊಬ್ಬರಲ್ಲಿ ನೂತನ-ಕೊರೋನವೈರಸ್ ಸೋಂಕು ಇರುವುದು ಪತ್ತೆಯಾದ ಬಳಿಕ ಹಡಗನ್ನು ಜಪಾನ್‌ನ ಯೊಕೊಹಾಮ ನಗರದ ಕರಾವಳಿಯಲ್ಲಿ ದಿಗ್ಬಂಧನದಲ್ಲಿರಿಸಲಾಗಿದೆ.

ಭಾರತೀಯ ರಾಯಭಾರ ಕಚೇರಿಯು ಜಪಾನ್ ಅಧಿಕಾರಿಗಳು, ಹಡಗಿನ ಆಡಳಿತ ಮತ್ತು ಹಡಗಿನಲ್ಲಿರುವ ಭಾರತೀಯರೊಂದಿಗೆ ಸಂಪರ್ಕದಲ್ಲಿದೆ ಎಂದು ರಾಯಭಾರ ಕಚೇರಿಯ ಅಧಿಕಾರಿಗಳು ಹೇಳಿದ್ದಾರೆ.

‘‘ಪ್ರಸಕ್ತ ದಿಗ್ಬಂಧನ ಅವಧಿ ಮುಗಿದ ಬಳಿಕ ಹಾಗೂ ಕೊರೋನವೈರಸ್ ಸೋಂಕು ಪತ್ತೆ ಪರೀಕ್ಷೆಯಲ್ಲಿ ಅಪೇಕ್ಷಣೀಯ ಫಲಿತಾಂಶ ಬಂದರೆ, ಭಾರತೀಯರನ್ನು ಬೇಗನೇ ಹಡಗಿನಿಂದ ಇಳಿಸಲು ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ’’ ಎಂದು ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ಶನಿವಾರ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News