ಗ್ರಾಮಗಳಲ್ಲಿ ಆರೆಸ್ಸೆಸ್ ನವರು ಹೆಜ್ಜೆ ಇಡಲು ಸಾಧ್ಯವಿಲ್ಲದಂತಹ ವಾತಾವರಣ ನಿರ್ಮಾಣ ಮಾಡಬೇಕು: ಜಿಗ್ನೇಶ್ ಮೇವಾನಿ

Update: 2020-02-15 17:27 GMT

ಬೆಂಗಳೂರು, ಫೆ.15: ಜಾತಿ ವ್ಯವಸ್ಥೆ ಎಂಬುದು ನಮ್ಮ ದೇಶದ ಕರಾಳ ಸತ್ಯ. ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡದೇ ಜಾತ್ಯತೀತ ತತ್ವವನ್ನು ಯಶಸ್ವಿಗೊಳಿಸಲು ಸಾಧ್ಯವೇ ಇಲ್ಲ ಎಂದು ಹೋರಾಟಗಾರ ಹಾಗೂ ಗುಜರಾತಿನ ಶಾಸಕ ಜಿಗ್ನೇಶ್ ಮೇವಾನಿ ಅಭಿಪ್ರಾಯಪಟ್ಟಿದ್ದಾರೆ. 

ಶನಿವಾರ ನಗರದಲ್ಲಿ ಸಿವಿಲ್ ಲಿಬರ್ಟಿಸ್ ಕಲೆಕ್ಟಿವ್ಸ್ ವತಿಯಿಂದ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ‘ಜಾತ್ಯತೀತ ಪ್ರಜಾಪ್ರಭುತ್ವ: ಸವಾಲುಗಳು ಹಾಗೂ ನಿರೀಕ್ಷೆಗಳು’ ಕುರಿತು ಅವರು ವಿಷಯ ಮಂಡಿಸಿ ಮಾತನಾಡಿದರು.

ಗುಜರಾತಿನಲ್ಲಿ 1590 ಗ್ರಾಮಗಳಲ್ಲಿ 98 ಬಗೆಯ ಅಸ್ಪೃಶ್ಯತೆಗಳನ್ನು ಎನ್‌ಜಿಓ ಒಂದು ಅಧ್ಯಯನ ನಡೆಸಿ ವರದಿ ಮಾಡಿದೆ. ಆದರೆ, ದಲಿತರನ್ನು ಹೊರತುಪಡಿಸಿ, ತಮ್ಮನ್ನು ಪ್ರಗತಿಪರರು ಎಂದು ಗುರುತಿಸಿಕೊಳ್ಳುವವರ ಪೈಕಿ ಒಬ್ಬನೇ ಒಬ್ಬ ಕೂಡ ಅಸ್ಪೃಶ್ಯತೆಯ ನಿವಾರಣೆಗಾಗಿ ಹೋರಾಟ ಮಾಡಿದ್ದನ್ನು ನಾನು ಈವರೆಗೆ ಕಂಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಮ್ಮ ದೇಶದಲ್ಲಿ ಒಬ್ಬ ಮನುಷ್ಯ, ಮತ್ತೊಬ್ಬ ಮನುಷ್ಯನನ್ನು ಮಾನವ ಎಂದು ಒಪ್ಪಲು ಸಿದ್ಧವಿಲ್ಲ. ಈ ವಿಚಾರಧಾರೆಯನ್ನು ನಾವು ಬದಲಾಯಿಸದೇ, ಜಾತ್ಯತೀತದ ಬಗ್ಗೆ ಎಷ್ಟು ಚರ್ಚೆ ಮಾಡಿದರೂ ಅದು ಅಪ್ರಸ್ತುತವಾಗುತ್ತದೆ. ಗಾಂಧಿ ಹಾಗೂ ಅಂಬೇಡ್ಕರ್ ನಡುವೆ ಇದ್ದ ವೈಚಾರಿಕ ಭಿನ್ನಾಭಿಪ್ರಾಯದಿಂದ ಮುಂದಕ್ಕೆ ನಾವು ಯೋಚನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.

ದೇಶದಲ್ಲಿ ಈಗಿರುವ ಪರಿಸ್ಥಿತಿಯಲ್ಲಿ ಮುಸ್ಲಿಮರು ಮತ್ತು ದಲಿತರು ಒಂದಾಗಿದ್ದಾರೆ. ಅಸ್ಪೃಶ್ಯತೆಯ ನಿವಾರಣೆಯ ವಿರುದ್ಧದ ಹೋರಾಟಕ್ಕೆ ಇದು ಉತ್ತಮ ಅವಕಾಶ. ಜಾತ್ಯತೀತದ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಬೇಕಿದೆ. ವೈಚಾರಿಕ ಭಿನ್ನಾಭಿಪ್ರಾಯ ಇದ್ದರೂ ಒಂದಾಗಿ ಬಾಳುವುದೇ ಅಸ್ಪೃಶ್ಯತೆ ನಿವಾರಣೆ ಎಂಬ ಸಂದೇಶವನ್ನು ಎಲ್ಲರಿಗೂ ತಲುಪಿಸಬೇಕಿದೆ ಎಂದು ಜಿಗ್ನೇಶ್ ಮೇವಾನಿ ತಿಳಿಸಿದರು.

ನರೇಂದ್ರ ಮೋದಿ-ಅಮಿತ್ ಶಾ ಸೇರಿದಂತೆ ಫ್ಯಾಶಿಸ್ಟ್ ಶಕ್ತಿಗಳನ್ನು ಚುನಾವಣಾ ರಾಜಕೀಯದಲ್ಲಿ ಸೋಲಿಸಿ, ಅಧಿಕಾರದಿಂದ ತೊಲಗಿಸುವ ಸಂಕಲ್ಪ ಮಾಡಬೇಕಿದೆ. ನಮ್ಮ ದೇಶದ ಜಾತ್ಯತೀತ ತತ್ವ, ಸಂವಿಧಾನವನ್ನು ರಕ್ಷಣೆ ಮಾಡಲು ಕಟಿಬದ್ಧವಾಗಬೇಕಿದೆ. ಇವರ ವಿರುದ್ಧದ ಹೋರಾಟಕ್ಕೆ ನಾನು ಸೈದ್ಧಾಂತಿಕವಾಗಿ ರಾಜಿಯಾಗಲೂ ಸಿದ್ಧನಿದ್ದೇನೆ ಎಂದು ಜಿಗ್ನೇಶ್ ಮೇವಾನಿ ತಿಳಿಸಿದರು.

ಆರೆಸೆಸ್ಸ್‌ನ ಎಲ್ಲ ಪ್ರಯತ್ನಗಳ ಹೊರತಾಗಿಯೂ ನಾವು ಜಾತ್ಯತೀತ ತತ್ವವನ್ನು ಪ್ರಚಾರ ಮಾಡಲು ಸಾಕಷ್ಟು ಪ್ರಯತ್ನ ಮಾಡಬೇಕಿದೆ. ಗ್ರಾಮಗಳಲ್ಲಿ ಆರೆಸೆಸ್ಸ್‌ನವರು ಹೆಜ್ಜೆ ಇಡಲು ಸಾಧ್ಯವಿಲ್ಲದಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದು ಅವರು ಕರೆ ನೀಡಿದರು. ಮನುಸ್ಮತಿಯನ್ನು ನಂಬುವವರು ಡಿಟೆನ್ಷನ್ ಸೆಂಟರ್ ಮಾಡಲು ನಿರ್ಧರಿಸಿದ್ದಾರೆ. ಅಂಬೇಡ್ಕರ್, ಫುಲೇ, ಭಗತ್‌ ಸಿಂಗ್, ಸಂವಿಧಾನವನ್ನು ನಂಬುವವರು ಎಷ್ಟು ಬಿಲಾಲ್ ಬಾಗ್ ನಿರ್ಮಿಸಬೇಕು ಎಂಬುದನ್ನು ನಿರ್ಧರಿಸಬೇಕಿದೆ. ಚುನಾವಣಾ ರಾಜಕೀಯದಲ್ಲಿ ಇವರ ಘರ್ ವಾಪಸಿ ಮಾಡಿಸಬೇಕಿದೆ. ಇದಕ್ಕಾಗಿ ಮುಂದಿನ 30-40 ವರ್ಷಗಳ ಗುರಿಯೊಂದಿಗೆ ಹೋರಾಡಬೇಕಿದೆ ಎಂದು ಜಿಗ್ನೇಶ್ ಮೇವಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News