ಆಳುವ ಸರಕಾರಗಳ ಹಿತಾಸಕ್ತಿಗೆ ದೇಶದ್ರೋಹ ಕಾಯ್ದೆ ದುರ್ಬಳಕೆ: ಸಿನಿಮಾ ನಿರ್ದೇಶಕ ಬಿ.ಸುರೇಶ್

Update: 2020-02-15 17:23 GMT

ಬೆಂಗಳೂರು, ಫೆ.15: ಆಳ್ವಿಕೆ ನಡೆಸುವ ಸರಕಾರಗಳ ಹಿತಾಸಕ್ತಿಗೆ ಬದ್ಧವಾಗಿರುವ ದೇಶದ್ರೋಹ ಕಾಯ್ದೆಯನ್ನು ಕಿತ್ತೆಸೆಯಬೇಕು ಎಂದು ಚಿಂತಕ, ಸಿನಿಮಾ ನಿರ್ದೇಶಕ ಬಿ.ಸುರೇಶ್ ಇಂದಿಲ್ಲಿ ಹೇಳಿದರು.

ನಗರದ ಪುರಭವನ ಮುಂಭಾಗ ಶಾಂತಿನಗರ ಸಾಮರಸ್ಯ ಸೌಹಾರ್ದ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಪ್ರಕ್ರಿಯೆ ವಿರೋಧಿಸಿ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಈ ದೇಶದೊಳಗೆ ಮೊದಲನೇ ಬಾರಿಗೆ ದೇಶದ್ರೋಹ ಪ್ರಕರಣವನ್ನು ಚಾಲ್ತಿಗೆ ತಂದಿದ್ದೇ ಬ್ರಿಟಿಷರು. ಅವರು ತಮ್ಮ ಆಳ್ವಿಕೆಯನ್ನು ಕಾಪಾಡಿಕೊಳ್ಳಲು ಇಂತಹ ಕರಾಳ ಕಾನೂನು ಜಾರಿಗೊಳಿಸಿದರು. ಆದರೆ, ಈಗಲೂ ಸರಕಾರಗಳು ದೇಶದ್ರೋಹ ಕಾಯ್ದೆ ಬಳಕೆ ಮಾಡುತ್ತಿರುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಅವರು ನುಡಿದರು.

ಬೀದರ್ ಜಿಲ್ಲೆಯ ಶಾಹೀನ್ ಶಾಲೆ ಮೇಲೆ ಉದ್ದೇಶಪೂರ್ವಕವಾಗಿ ದೇಶದ್ರೋಹ ಪ್ರಕರಣ ದಾಖಲು ಮಾಡಲಾಗಿದೆ. ಆದರೆ, ಕೋಮು ಸೌಹಾರ್ದ ಕದಡುವ ರೀತಿ, ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ಬಾಬರಿ ಮಸೀದಿ ಪ್ರತಿಕೃತಿ ಧ್ವಂಸಗೈಯುವ ನಾಟಕ ಪ್ರದರ್ಶಿಸಿದರೂ, ಇಲ್ಲಿ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ದ್ವಂದ್ವ ನೀತಿ ಏಕೆ ಎಂದು ಸುರೇಶ್ ಪ್ರಶ್ನೆ ಮಾಡಿದರು.

ಸಿಎಎ ಕಾಯ್ದೆ ಮೂರು ಪುಟಗಳು ಮಾತ್ರ ಇದ್ದು, ಎರಡನೆ ಪುಟದಲ್ಲಿಯೇ ಜಾತಿ, ಧರ್ಮ ಆಧರಿತ ಅಸಮಾನತೆ ಅಂಶಗಳನ್ನು ಕಾಣಬಹುದು ಎಂದ ಅವರು, ದೊಡ್ಡ ಸಿನಿಮಾ ನಟನೇ ಆಗಲಿ, ರಸ್ತೆ ಬದಿ ಪಂಚರ್ ಹಾಕುವವನೇ ಆಗಲಿ, ಯಾರು ಬೇಕಾದರೂ, ಸಿಎಎ ಅನ್ನು ವಿರೋಧಿಸಿ, ಪ್ರಶ್ನಿಸಬಹುದಾಗಿದೆ ಎಂದರು.

ಏಪ್ರಿಲ್ ಮಾಸದಿಂದಲೇ ಕರ್ನಾಟಕದಲ್ಲಿ ಎನ್‌ಪಿಆರ್ ಪ್ರಕ್ರಿಯೆಗೆ ಚಾಲನೆ ದೊರೆಯಬಹುದು. ಆದರೆ, ಇದರಿಂದ ಮುಸ್ಲಿಮರು ಮಾತ್ರವಲ್ಲದೆ, ಗ್ರಾಮೀಣ ಭಾಗದ ಜನರು, ಆದಿವಾಸಿಗಳು, ದಲಿತರು ತೊಂದರೆಗೆ ಸಿಲುಕಿಕೊಳ್ಳುವುದು ಖಚಿತವಾಗಿದ್ದು, ರಾಜ್ಯ ಸರಕಾರ ಇದನ್ನು ಕೈಬಿಟ್ಟರೆ ಒಳಿತು ಎಂದು ತಿಳಿಸಿದರು.

ಜೆಡಿಎಸ್ ಮುಖಂಡ ಸೆಯ್ಯದ್ ಶಫೀವುಲ್ಲಾ ಮಾತನಾಡಿ, ಸರ್ವ ಜನಾಂಗದ ಶಾಂತಿಯ ತೋಟವಾದ ದೇಶವನ್ನು ಒಡೆಯಲು ಈ ಕಾಯ್ದೆ ತರಲಾಗಿದೆ. ಇದರಿಂದ ದೇಶದಲ್ಲಿ ಅಶಾಂತಿ ವಾತಾವರಣ ನಿರ್ಮಿಸಲಾಗುತ್ತಿದೆ. ಇದರ ಹಿಂದೆ ದೇಶವನ್ನು ಒಡೆದು ಆಳುವ ವ್ಯವಸ್ಥಿತ ಸಂಚು ಇರುವಂತೆ ಕಾಣುತ್ತಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಕಾತ್ಯಾಯಿನಿ ಚಾಮರಾಜ್, ದಲಿತ ಮುಖಂಡ ಪಿ.ನಾಗರಾಜ್, ಹೋರಾಟಗಾರ ಎಸ್.ವೈ.ಗುರುಶಾಂತ್, ಸಾಮಾಜಿಕ ಕಾರ್ಯಕರ್ತ ತನ್ವೀರ್ ಹಕ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News