ಆನಂದ್‌ ಸಿಂಗ್ ಗೆ ಅರಣ್ಯ ಖಾತೆ: ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದೇನು ?

Update: 2020-02-15 18:10 GMT

ಬೆಂಗಳೂರು, ಫೆ. 15: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವ ದೃಷ್ಟಿಯಿಂದ ಮಾರ್ಚ್ ಮೊದಲ ವಾರದಲ್ಲಿ ನಗರದ ಅರಮನೆ ಮೈದಾನದಲ್ಲಿ ಜೆಡಿಎಸ್ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದ್ದಾರೆ.

ಶನಿವಾರ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ರೂತ್ ಮನೋರಮಾ ಅವರ ಅಧ್ಯಕ್ಷತೆಯಲ್ಲಿ ನಗರದಲ್ಲಿ ಮಹಿಳಾ ಸಮಾವೇಶ ನಡೆಸಲಾಗುತ್ತಿದೆ. ರೂತ್ ಮನೋರಮಾ ಅವರಿಗೆ ದೇಶ-ವಿದೇಶಗಳಲ್ಲಿ ಸಾಮಾಜಿಕ ಸಂಘಟನೆ ಮಾಡಿದ ಅನುಭವವಿದೆ ಎಂದರು.

ಮಾಜಿ ಸಚಿವೆ ಲೀಲಾವತಿ ಆರ್.ಪ್ರಸಾದ್‌ಗೆ ಅನಾರೋಗ್ಯದ ಕಾರಣ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಆಗಿ ಮುಂದುವರಿಯಲು ಸಾಧ್ಯ ಇಲ್ಲವೆಂದು ಹೇಳಿದ್ದಾರೆ. ಹೀಗಾಗಿ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದರು.

ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಪಕ್ಷ ಸಂಘಟನೆ ಮಾಡಿದ್ದರು. ಕಾರಣಾಂತರಗಳಿಂದ ಅವರು ವಿಧಾನಸಭೆ ಚುನಾವಣೆಯಲ್ಲಿ ಸೋತರು. ಆದರೆ ಪಕ್ಷದ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ ಎಂದರು.

ಆಸಕ್ತಿ ಇಲ್ಲ: ನಾನು ಈಗ ರಾಜ್ಯಸಭೆಗೆ ಹೋಗುವ ಆಸಕ್ತಿ ಹೊಂದಿಲ್ಲ. ಹೀಗಾಗಿ ನಾನು ಇಲ್ಲೇ ಇದ್ದು ಪಕ್ಷ ಸಂಘಟನೆ ಮಾಡುತ್ತೇನೆ ಎಂದ ದೇವೇಗೌಡ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ದುಡಿಯಬೇಕೆಂಬ ಆಶಯ ಹೊಂದಿದ್ದೇನೆ. ಪಕ್ಷ ಕಟ್ಟುವ ಅನುಭವ ಇದೆ. ಸೋತರೂ, ಗೆದ್ದರೂ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.

ನನಗೆ ಗೊತ್ತಿಲ್ಲ: ನಾನು ಯಾರ ಬಗ್ಗೆಯೂ ಲಘುವಾಗಿ ಮಾತನಾಡುವುದಿಲ್ಲ. ಅವರು ಮೊದಲು ಯಾವ ಪಕ್ಷದಲ್ಲಿ ಇದ್ದರೂ, ಅದೆಲ್ಲ ಈಗ ಬೇಡ ಎಂದ ಅವರು, ಆನಂದ್‌ ಸಿಂಗ್ ಅವರಿಗೆ ಸಚಿವ ಸ್ಥಾನ ನೀಡಬಾರದು ಅಥವಾ ಅರಣ್ಯ ಇಲಾಖೆ ಕೊಡಬಾರದು ಎಂದು ವಿರೋಧ ಮಾಡುತ್ತಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ಸಚಿವ ಆರ್.ಅಶೋಕ್ ಪುತ್ರನ ರಕ್ಷಣೆಗೆ ಸರಕಾರ ಮುಂದಾಗಿದೆ ಎಂಬ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ನಾನು ಇಂತಹ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಹೋರಾಟ ಮಾಡುವುದಕ್ಕೆ ಅನೇಕ ವಿಷಯಗಳಿವೆ ಎಂದು ದೇವೇಗೌಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News