'ಸಿದ್ದರಾಮಯ್ಯ ಧರ್ಮವನ್ನು ಕೆಣಕಿದ್ದರಿಂದ ಬಿಎಸ್‌ವೈ ಸಿಎಂ' ಎಂದ ಸೋಮಣ್ಣ: ಸಚಿವರ ಹೇಳಿಕೆಗೆ ಸಭಿಕರಿಂದ ತೀವ್ರ ವಿರೋಧ

Update: 2020-02-16 13:43 GMT

ಬೆಂಗಳೂರು, ಫೆ.16: ಕಾಂಗ್ರೆಸ್ ನೇತೃತ್ವದ ಸರಕಾರ ಜಾರಿಗೆ ತಂದ ಅಭಿವೃದ್ಧಿ ಪರ ಯೋಜನೆಗಳನ್ನೆ ಬಿಜೆಪಿ ಸರಕಾರ ಮುಂದುವರೆಸಿಕೊಂಡು ಹೋಗುತ್ತಿದೆ. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಲ್ಪಮಟ್ಟಿಗೆ ಧರ್ಮವನ್ನು ಕೆಣಕಿದ್ದರಿಂದ ಬಿಎಸ್‌ವೈ ಸಿಎಂ ಆಗಲು ಸಾಧ್ಯವಾಯಿತು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಆದರೆ ಸೋಮಣ್ಣನವರ ಹೇಳಿಕೆಗೆ ನೆರೆದ ಸಭಿಕರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ ಘಟನೆ ನಡೆಯಿತು.

ರವಿವಾರ ಮಾದಾವರದ ನಂದಿ ಗ್ರೌಂಡ್ಸ್‌ನಲ್ಲಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಆಯೋಜಿಸಿದ್ದ ಅಸಂಖ್ಯ ಪ್ರಮಥರ ಗಣಮೇಳದ ವೇದಿಕೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷದಲ್ಲಿ ಇದ್ದಾಗ ನಾನು ಸಿದ್ದರಾಮಯ್ಯ ಅವರ ಜೊತೆಗೆ ಕೆಲಸ ಮಾಡಿದ್ದೇನೆ. ಬಿಜೆಪಿ ಸರಕಾರ ಸಿದ್ದರಾಮಯ್ಯ ಜಾರಿಗೆ ತಂದ ಕಾರ್ಯಕ್ರಮಗಳನ್ನೆ ಮುಂದುವರೆಸಿಕೊಂಡು ಹೋಗುತ್ತಿದೆ. ಆದರೆ, ಅವರು ಧರ್ಮವನ್ನು ಕೆಣಕಿದ್ದರಿಂದ ಯಡಿಯೂರಪ್ಪ ಸಿಎಂ ಆಗಲು ಸಾಧ್ಯವಾಯಿತು ಎಂದು ಹೇಳಿದರು. ಈ ವೇಳೆ ಸಚಿವ ವಿ. ಸೋಮಣ್ಣ ಅವರ ಮಾತಿಗೆ ಸಭಿಕರಿಂದ ತೀವ್ರ ವಿರೋಧ ವ್ಯಕ್ತವಾಯಿತು.

ಬಳಿಕ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಶರಣರು ಜಾತ್ಯತೀತ ಸುಂದರ ಸಮಾಜ ನಿರ್ಮಾಣಕ್ಕೆ ಹೋರಾಟ ನಡೆಸಿದ್ದು, ಅನೇಕ ಮಾನವ ಹಕ್ಕುಗಳಿಗಾಗಿ ಪ್ರತಿಪಾದಿಸಿದ್ದಾರೆ. ಶೋಷಿತರು, ಕಾಯಕ ಯೋಗಿಗಳ ಏಳಿಗೆಗಾಗಿ ಶ್ರಮಿಸಿದ್ದಾರೆ. ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಶೋಷಣೆಯ ವಿರುದ್ಧ ಬಂಡಾಯವೆದ್ದು, ಕ್ರಾಂತಿ ಮಾಡಿದ್ದಾರೆ ಎಂದು ತಿಳಿಸಿದರು.

ಜಾತ್ಯತೀತ ಮಾನವ ಧರ್ಮ ಉದಯಕ್ಕೆ ಶ್ರಮಿಸಿದ್ದಾರೆ. ಅದೇ ಶ್ರೇಷ್ಠ ವಾದ ಧರ್ಮ ಬಸವ ಧರ್ಮ. ಅವರು ಪ್ರತಿ ಪಾದಿಸಿದಂತಹ ಅನೇಕ ಮಾನವ ಹಕ್ಕುಗಳು ಕಾಯ್ದೆಯ ರೂಪದಲ್ಲಿ ಅನುಷ್ಠಾನವಾಗುತ್ತಿವೆ ಎಂದು ಹೇಳಿದರು. ಮೊಟ್ಟ ಮೊದಲಿಗೆ ಸಂಸತ್ ಸ್ವರೂಪದ ಅನುಭವ ಮಂಟಪ ಆಯೋಜಿಸಿ, ಮಾನವ ಹಕ್ಕು, ಸಮಾನತೆಗೆ, ಸಾಮಾಜಿಕ ಪಿಡುಗುಗಳ ಕುರಿತು ಚರ್ಚಿಸಿ, ನಿರ್ಣಯ ಕೈಗೊಂಡಿದ್ದು , ಅದೇ ಮಾದರಿಯಲ್ಲಿ ಸಂಸತ್‌ನಲ್ಲಿ ಚರ್ಚೆಗಳಾಗಿ ನಿರ್ಣಯಗಳಾಗುತ್ತಿವೆ. ಶರಣರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಶರಣರ ಆಶಯದಂತೆ ಸುಂದರ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.

ವಿಶ್ವ ಗುರು ಬಸವಣ್ಣ ಹಾಗೂ ಅವರ ಸಮಕಾಲೀನ ಶರಣರು 900 ವರ್ಷಗಳ ಹಿಂದೆ ಸಾಮಾಜಿಕ ಸಮಾನತೆಗಾಗಿ ಕ್ರಾಂತಿಯನ್ನೇ ಮಾಡಿದ್ದರೂ ಅಸಮಾನತೆ ಇನ್ನೂ ಅಳಿದಿಲ್ಲ. ಸಮಾನತೆ ಬರಲಿಲ್ಲ. ಶರಣರ ಆಶಯವಾಗಿದ್ದ ಸಾಮಾಜಿಕ ಸಮಾನತೆ ಕುರಿತು ಇಂದು ಚಿಂತಿಸಬೇಕು’

-ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News