ಲ್ಯಾಪ್‌ಟಾಪ್ ಅನ್ನು ವಿದ್ಯಾರ್ಥಿಗಳು ಜೀವನದ ಉನ್ನತಿಗೆ ಬಳಸಿಕೊಳ್ಳಿ: ನ್ಯಾ.ಎಂ.ಜಿ.ಉಮಾ

Update: 2020-02-16 16:52 GMT

ರಾಮನಗರ, ಫೆ.16: ವಿದ್ಯಾರ್ಥಿಗಳು ಲ್ಯಾಪ್‌ಟಾಪ್‌ಗೆ ಇಂಟರ್ನೆಟ್ ಸೌಲಭ್ಯ ಪಡೆದುಕೊಂಡರೆ ಇಡೀ ಜಗತ್ತಿನ ಒಳ್ಳೆಯ ಮತ್ತು ಕೆಟ್ಟ ಜ್ಞಾನಗಳು ತಮ್ಮ ಬೆರಳ ತುದಿಯಲ್ಲಿ ಪಡೆಯಬಹುದು. ಒಳ್ಳೆಯ ಜ್ಞಾನವನ್ನು ಆಯ್ಕೆ ಮಾಡಿಕೊಂಡು ಲ್ಯಾಪ್‌ಟಾಪ್ ಅನ್ನು ಜೀವನದ ಉನ್ನತಿಗೆ ಬಳಸಿಕೊಳ್ಳಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ನ್ಯಾ.ಎಂ.ಜಿ.ಉಮಾ ಹೇಳಿದರು.

ನಗರದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಹಾಗೂ ಬಸವನಪುರ ಸರಕಾರಿ ಕಾನೂನು ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಉಚಿತ ಲ್ಯಾಪ್‌ಟಾಪ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರಕಾರದಿಂದ 2.5 ಲಕ್ಷ ರೂ.ವಾರ್ಷಿಕ ಆದಾಯದೊಳಗಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಈ ಯೋಜನೆಯ ಸದುದ್ದೇಶವನ್ನು ಅರ್ಥಮಾಡಿಕೊಳ್ಳಬೇಕು. ತಂತ್ರಜ್ಞಾನ ಇಂದಿನ ಜೀವನದಲ್ಲಿ ಅತಿಮುಖ್ಯವಾಗುತ್ತದೆ. ತಂತ್ರಜ್ಞಾನವನ್ನು ತಮ್ಮ ವಿದ್ಯಾಭ್ಯಾಸದೊಂದಿಗೆ ಅಳವಡಿಸಿಕೊಂಡು ಜ್ಞಾನದಲ್ಲಿ ಪರಿಣಿತಿ ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಕಾನೂನು ಪದವಿ ಪಡೆದುಕೊಳ್ಳಲು ತಾವು ವಿದ್ಯಾಭ್ಯಾಸ ಮಾಡುತ್ತಿರುವ ಅವಧಿ ಅತ್ಯಮೂಲ್ಯವಾದ ಅವಧಿ, ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿಕೊಂಡು ಪದವಿಯ ನಂತರ ದೇಶದ ಉತ್ತಮ ಪ್ರಜೆಗಳಾಗಬೇಕು ಎಂದು ಅವರು ಹೇಳಿದರು.

ನ್ಯಾಯಾಲಯಗಳಲ್ಲಿ ವಿಚಾರಣೆಯ ಸಂದರ್ಭದಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳಬೇಕಾದ 12-18 ವರ್ಷದವರು ಸಮಾಜಘಾತುಕ ಕೆಲಸಗಳಲ್ಲಿ ತೊಡಗಿಕೊಂಡು ತಮ್ಮ ಸುಂದರವಾದ ಜೀವನವನ್ನೇ ಕಳೆದುಕೊಂಡಿರುವುದನ್ನು ನೋಡಿದ್ದೇನೆ. ವಿದ್ಯಾಭ್ಯಾಸದ ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಅವರು ಕಿವಿ ಮಾತು ಹೇಳಿದರು.

ಪದವಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಎಂದಿಗೂ ಮನೆಯ ಕೆಲಸವನ್ನು ನಿರ್ಲಕ್ಷಿಸಬೇಡಿ. ಸ್ವಾವಲಂಭಿಗಳಾಗಬೇಕಾದರೆ ಮೊದಲು ನಾವು ವಾಸಿಸುವ ಮನೆ, ಧರಿಸುವ ಬಟ್ಟೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದನ್ನು ಹಾಗೂ 3 ಹೊತ್ತು ಅಡುಗೆ ಮಾಡಿಕೊಳ್ಳುವುದನ್ನು ಕಲಿಯಬೇಕು ಎಂದು ಅವರು ಹೇಳಿದರು.

ಪದವಿ ಮುಗಿದ ನಂತರ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿ ತೊಡಗಿಕೊಳ್ಳುತ್ತೀರಿ, ಮೊದಲು ಆರೋಗ್ಯವಂತ ಸದೃಢ ದೇಹ ಮತ್ತು ಮನಸ್ಸು ಬೆಳೆಸಿಕೊಳ್ಳಿ, ಉದ್ಯೋಗದಲ್ಲಿ ಪಾರದರ್ಶಕ ಹಾಗೂ ಸಮಾಜಮುಖಿ ಕೆಲಸಗಳನ್ನು ಮಾಡಿ ಸಮಾಜಕ್ಕೆ ಕೊಡುಗೆ ನೀಡಿ, ಪೋಷಿಸಿದ ತಂದೆ, ತಾಯಿ, ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಉಮಾ ತಿಳಿಸಿದರು.

ಕಾರ್ಯಕ್ರಮದಲ್ಲಿ ಸರಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎಸ್.ಅಂಬೇಡ್ಕರ್ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾನೂನು ಸಹಾಯಕ ಪ್ರಾಧ್ಯಾಪಕರು ಹಾಗೂ ಲ್ಯಾಪ್‌ಟಾಪ್ ವಿತರಣಾ ಸಮಿತಿಯ ಸಂಚಾಲಕ ಡಾ.ಸಿ.ಬಿ.ರಂಗನಾಥಯ್ಯ ಸ್ವಾಗತಿಸಿದರು. ಕಾನೂನು ಸಹಾಯಕ ಪ್ರಾಧ್ಯಾಪಕ ಡಾ.ಕೆ.ಎನ್.ಅನಿತಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News