ಬಾಲ್ಯದ ನೆನಪುಗಳೇ ಬರವಣಿಗೆಯಾಗಿ ರೂಪ ತಾಳಿವೆ: ಹಿರಿಯ ಪ್ರಬಂಧಕಾರ ಚಂದ್ರಶೇಖರ ಆಲೂರು

Update: 2020-02-16 18:20 GMT

ಬೆಂಗಳೂರು, ಫೆ. 16: ನನ್ನ ಬಾಲ್ಯದ ನೆನಪುಗಳೇ ಬರವಣಿಗೆಯಾಗಿ ರೂಪ ತಾಳಿವೆ. ಹುಟ್ಟಿನಿಂದ 14, 15ವರ್ಷದೊಳಗಿನ ಅನುಭವವನ್ನೇ ಬೇರೆ ಬೇರೆ ರೂಪಗಳಲ್ಲಿ ಬರೆದಿದ್ದೇನೆಂದು ಹಿರಿಯ ಪ್ರಬಂಧಕಾರ ಚಂದ್ರಶೇಖರ ಆಲೂರು ತಿಳಿಸಿದ್ದಾರೆ.

ರವಿವಾರ ಸಂಕಥನ ಬಳಗವು ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಆಯೋಜಿಸಿದ್ದ ‘ಆಲೂರರೊಂದಿಗೆ ಒಂದಷ್ಟು ಮಾತು’ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅನುಭವವನ್ನು ಓದುಗರೊಂದಿಗೆ ಹಂಚಿಕೊಂಡರು.

ನನ್ನೂರು ಮದ್ದೂರು ತಾಲೂಕಿನ ಶಿಂಷಾ ನದಿ ದಡೆಯಲ್ಲಿರುವ ಆಲೂರು. ಆದರೂ ನನ್ನಪ್ಪ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಆಗಿದ್ದರಿಂದ ನಾನು ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಶಿಕ್ಷಣವನ್ನು ಹಲವು ಊರುಗಳಲ್ಲಿ ಕಲಿತೆ. ಇದರಿಂದಾಗಿ ವಿಭಿನ್ನ ಜನರರೊಂದಿಗೆ ಬೆರೆಯುವ ಅವಕಾಶ ಸಿಕ್ಕಿತು. ಹಾಗೂ ರೈಲ್ವೆ ಸ್ಟೇಷನ್ ಅನುಭವ, ರೈಲಿನ ಪ್ರಯಾಣ ಸೇರಿದಂತೆ ವಿಭಿನ್ನವಾದ ಬಾಲ್ಯದ ಅನುಭವಗಳು ನನ್ನ ಬರವಣಿಗೆಯನ್ನು ಸಂಪೂರ್ಣವಾಗಿ ಆವರಿಸಿವೆ ಎಂದು ಅವರು ಹೇಳಿದರು.

ನಾನು ಬಾಲ್ಯದಿಂದಲೇ ಎನ್.ನರಸಿಂಹಯ್ಯರವರ ಪತ್ತೆದಾರಿ ಕಾದಂಬರಿಗಳು, ಎಂ.ಕೆ.ಇಂದಿರಾ, ತ್ರಿವೇಣಿ ಕಾದಂಬರಿಗಳನ್ನು ಹೆಚ್ಚಾಗಿ ಓದುತ್ತಿದ್ದೆ. ಇದರ ಪರಿಣಾಮವಾಗಿ ನಾನು 12 ವರ್ಷದವನಿದ್ದಾಗಲೇ ನಕ್ಸಲ್ ದಮನ ಎಂಬ ಪತ್ತೆದಾರಿ ಕಾದಂಬರಿಯನ್ನು ಬರೆದಿದ್ದೆ. ಹೀಗೆ ನನ್ನ ಬರವಣಿಗೆ ಪ್ರಾರಂಭವಾಯಿತು ಎಂದು ಅವರು ವಿವರಿಸಿದರು.

10ನೆ ತರಗತಿಯಲ್ಲಿ ನನಗೆ ಮೂರ್ಛೆ ರೋಗ ಬಾಧಿಸಿತು. ಇದರಿಂದ ಸಾಕಷ್ಟು ಏಕಾಂಗಿತನ ಅನುಭವಿಸಿದೆ. ಇದರಿಂದ ಹೊರ ಬರಲು ಮತ್ತಷ್ಟು ಬರವಣಿಗೆಯತ್ತ ಮುಖ ಮಾಡಿದೆ. ಆದರೆ, ಅದ್ಯಾವುದು ಈಗ ನನ್ನಲ್ಲಿ ಇಲ್ಲ. ನಂತರ ಎಂಎ ಕನ್ನಡಕ್ಕೆ ಸೇರಿಕೊಂಡ ಬಳಿಕ ಸಾಹಿತ್ಯ ಕೃತಿಗಳನ್ನು ಗಂಭೀರವಾಗಿ ಓದಲು ಪ್ರಾರಂಭಿಸಿದೆ ಎಂದು ಅವರು ಹೇಳಿದರು.

ಎಂಎ ವಿದ್ಯಾಭ್ಯಾಸ ಮಾಡಿದ ನಂತರ ಊರಿನಲ್ಲಿ ರೇಷ್ಮೆ ಸಾಕಾಣಿಕೆ ಮಾಡಿಕೊಂಡಿದ್ದೆ. ನನ್ನ ಗುರುಗಳಾದ ಚಂದ್ರಶೇಖರ ಕಂಬಾರರ ಸಲಹೆಯ ಮೇರೆಗೆ ಲಂಕೇಶ್ ಪತ್ರಿಕೆಗೆ ಸೇರಿಕೊಂಡೆ. ಅಲ್ಲಿ ಸುಮಾರು ಹತ್ತು ವರ್ಷಗಳ ಕಾಲ, ಸಿನೆಮಾ, ಸಾಹಿತ್ಯದ ಕುರಿತ ನನ್ನ ಬರವಣಿಗೆಗೆ ಹೆಚ್ಚು ಮನ್ಯತೆ ಸಿಕ್ಕಿತು. ಸಿನೆಮಾ ಬರಹಗಳು ನನಗೆ ಸಾಕಷ್ಟು ಹೆಸರು ತಂದುಕೊಟ್ಟಿತು ಎಂದು ಅವರು ಹೇಳಿದರು.

ಲಂಕೇಶ್ ಪತ್ರಿಕೆಯ ಭಾಗವಾಗಿ ರಾಷ್ಟ್ರಕವಿ ಕುವೆಂಪುರನ್ನು ಸಂದರ್ಶನ, ರೈತ ಚಳವಳಿಯ ಭಾಗವಾಗಿ ಪ್ರೊ.ನಂಜುಂಡ ಸ್ವಾಮಿ ಸಂದರ್ಶನ, ಡಾ.ರಾಜ್‌ಕುಮಾರ ಸಿನೆಮಾಗಳ ಒಳಗೊಂಡಂತೆ ಕನ್ನಡ ಸಿನೆಮಾಗಳ ವಿಮರ್ಶೆ ಹಾಗೂ ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ವಿವಿಧ ನಾಯಕರೊಂದಿಗೆ ಒಡನಾಡ, ಮಾತುಕತೆ, ಚರ್ಚೆಗಳು ಸಾಧ್ಯವಾಗಿದ್ದು, ಮರೆಯಲಾಗದ ಅನುಭವವೆಂದು ಅವರು ಹೇಳಿದರು. ಈ ವೇಳೆ ಸಂಕತನದ ರಾಜೇಂದ್ರ ಪ್ರಸಾದ್, ಲೇಖಕ ಪುಟ್ಟಸ್ವಾಮಿ, ಪತ್ರಕರ್ತ ಬಸವರಾಜು, ಸಂಧ್ಯಾರಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈಜಿಪ್ಟ್‌ನಲ್ಲಿ ಮೂರು ತಿಂಗಳಿದ್ದೆ. ಅಲ್ಲಿನ ಅನುಭವಗಳ ಕುರಿತು ಪ್ರವಾಸ ಕಥನವನ್ನು ರಚಿಸಿದ್ದೇನೆ. ಅಲ್ಲಿನ ಅನುಭವದ ಮೇರೆಗೆ ಹೇಳುವುದಾದರೆ, ಯಾವುದೇ ಪ್ರದೇಶದ ಭಾಷೆ ಸತ್ತರೆ, ಅದರ ಜೊತೆಗೆಯೇ ಅಲ್ಲಿನ ಸಂಸ್ಕೃತಿ, ಇತಿಹಾಸವು ನಾಶವಾಗುತ್ತದೆ. ಈಗ ಈಜಿಪ್ಟ್ ಜನತೆ ಅರೇಬಿಯನ್ ಭಾಷೆ ಮಾತ್ರ ಮಾತನಾಡುತ್ತಾರೆ. ಈಜಿಪ್ಟ್ ಭಾಷೆ ಸಂಪೂರ್ಣವಾಗಿ ನಾಶವಾಗಿದೆ. ಹೀಗಾಗಿ ಈಜಿಪ್ಟ್‌ನಲ್ಲಿರುವ ಪಿರಿಯಾಮಿಡ್‌ಗಳ ಬಗೆಗಾಗಲಿ, ಅಲ್ಲಿರುವ ಅತ್ಯುತ್ತಮ ಮ್ಯೂಸಿಯಂ ಬಗೆಗಾಗಲಿ ಅಲ್ಲಿನ ಜನತೆಗೆ ಭಾವನಾತ್ಮಕವಾದ ಸಂಬಂಧವಿಲ್ಲ. ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಮಾತ್ರ ಅವುಗಳನ್ನು ಜೋಪಾನ ಮಾಡಲಾಗಿದೆ. ಇಂತಹ ದುರ್ಗತಿ ಕನ್ನಡಕ್ಕೆ ಯಾವ ಸಂದರ್ಭಕ್ಕೂ ಬಾರದಿರಲಿ.

-ಚಂದ್ರಶೇಖರ ಆಲೂರು, ಹಿರಿಯ ಪ್ರಬಂಧಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News