ಗೋಡೆಗಳ ಮೂಲಕ ದೇಶವನ್ನು ವಿಭಜಿಸುತ್ತಿರುವ ಕೇಂದ್ರ ಸರಕಾರ

Update: 2020-02-17 06:04 GMT

ಗೋಡೆಗಳು ಈ ದೇಶಕ್ಕೆ ಹೊಸತೇನೂ ಅಲ್ಲ. ಮೊಗಲರು, ಬ್ರಿಟಿಷರು ಈ ದೇಶಕ್ಕೆ ಆಗಮಿಸಿದಾಗ ಅವರಿಗೆ ಕಂಡದ್ದು ಜನರ ಮಧ್ಯೆ ಕಟ್ಟಿ ನಿಲ್ಲಿಸಿದ ಸಾವಿರಾರು ಜಾತಿಯ ಗೋಡೆಗಳು. ಈ ಗೋಡೆಗಳನ್ನು ಬಳಸಿಕೊಂಡೇ ಮೊಗಲರು, ಬ್ರಿಟಿಷರು ಈ ದೇಶದಲ್ಲಿ ಬೇರೂರಿದರು. ಬಳಿಕ ಮೊಗಲರು, ಬ್ರಿಟಿಷರು ಹಲವು ಗೋಡೆಗಳನ್ನು ಕೆಡವಿದರು. ಹಾಗೆಯೇ ತಮಗೆ ಅನುಕೂಲಕ್ಕೆ ತಕ್ಕಂತೆ ಹೊಸದಾಗಿ ಕೆಲವು ಗೋಡೆಗಳನ್ನು ನಿರ್ಮಿಸಿದರು. ಅನೇಕ ಸಂದರ್ಭಗಳಲ್ಲಿ ಒಡೆಯುವ ಮೂಲಕವೇ ಗೋಡೆಗಳನ್ನು ನಿರ್ಮಿಸಲಾಗುತ್ತದೆ. ಮನಸ್ಸನ್ನು ಒಡೆಯುವುದೆಂದರೆ, ಮನುಷ್ಯರ ನಡುವೆ ಗೋಡೆಗಳನ್ನು ನಿರ್ಮಿಸುವುದೆಂದೇ ಅರ್ಥ. ಬಂಗಾಳವನ್ನು ವಿಭಜಿಸಿ ಹಿಂದೂ-ಮುಸ್ಲಿಮರ ನಡುವೆ ಗೋಡೆಗಳನ್ನು ಬ್ರಿಟಿಷರು ನಿರ್ಮಿಸಲು ಮುಂದಾಗ, ಇಡೀ ಭಾರತ ಒಂದಾಗಿ ಅದನ್ನು ವಿರೋಧಿಸಿತು. ಭಾರತ-ಪಾಕಿಸ್ತಾನ ಒಡೆದಾಗಲೂ ಎರಡು ದೇಶಗಳ ನಡುವೆ ಶತ್ರುತ್ವದ ಬಹುದೊಡ್ಡ ಗೋಡೆಯೊಂದು ಎದ್ದು ನಿಂತಿತು. ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಒಂದು ಗೋಡೆ ಸುದ್ದಿಯಾಯಿತು. ಮೇಲ್ವರ್ಣೀಯರಿಗೆ ದಲಿತ ಕೇರಿ ಕಾಣಬಾರದು ಎನ್ನುವ ಕಾರಣದಿಂದ ಈ ಬೃಹತ್ ಗೋಡೆಯನ್ನು ನಿರ್ಮಿಸಲಾಗಿತ್ತು. ಆದರೆ ಜೋರು ಮಳೆಯಲ್ಲಿ ಈ ಗೋಡೆ ಕುಸಿದು ಹಲವು ಅಮಾಯಕ ದಲಿತರು ಮೃತಪಟ್ಟರು.

ಈವರೆಗೆ ಗೋಡೆ ನಿರ್ಮಾಣದ ಹಿಂದಿರುವವರಿಗೆ ಶಿಕ್ಷೆಯಾಗಿಲ್ಲ. ಗೋಡೆಗಳನ್ನೇ ಈ ದೇಶದ ಪರಂಪರೆಯೆಂದು ಭಾವಿಸುವ ಪ್ರಭುತ್ವವೊಂದು, ಗುಜರಾತ್‌ನಲ್ಲಿ ಕಟ್ಟುತ್ತಿರುವ ಇಟ್ಟಿಗೆಯ ಸಣ್ಣದೊಂದು ಗೋಡೆ ಸುದ್ದಿಯಾಗುತ್ತಿದೆ.ಮೋದಿ ಸರಕಾರ ಈಗಾಗಲೇ ದೇಶದಲ್ಲಿ ಕಟ್ಟ ಹೊರಟಿರುವ ಇತರೆಲ್ಲ ಗೋಡೆಗಳಿಗೆ ಹೋಲಿಸಿದರೆ ಇದೊಂದು ಅತಿ ಸಣ್ಣ ಗೋಡೆ. ತೀರಾ ಅಪಾಯಕಾರಿ ಗೋಡೆಯೇನೂ ಅಲ್ಲ. ‘ಗುಜರಾತ್ ಅಭಿವೃದ್ಧಿ’ಯ ಮಾನ ಮರ್ಯಾದೆಯನ್ನು ಟ್ರಂಪ್ ಮುಂದೆ ಕಾಪಾಡುವುದಕ್ಕಾಗಿ ಈ ಗೋಡೆಯನ್ನು ಕಟ್ಟಲಾಗುತ್ತಿದೆ. ಗುಜರಾತ್‌ನ ಮರ್ಯಾದೆಯೆಂದರೆ ದೇಶದ ಮರ್ಯಾದೆಯೂ ಆಗಿರುವುದರಿಂದ ಸದ್ಯಕ್ಕೆ ಗುಜರಾತ್‌ನಲ್ಲಿ ಈ ಗೋಡೆ ನಿರ್ಮಿಸುವುದು ಮೋದಿಯವರಿಗೆ ಅತ್ಯಗತ್ಯವಾಗಿದೆ. ಆದರೆ ಗುಜರಾತ್‌ನಲ್ಲಿ ನಡೆದ ಅಭಿವೃದ್ಧಿಯ ವಾಸ್ತವವನ್ನು ಈ ಗೋಡೆ ದೇಶದ ಜನರಿಗೆ ಮನವರಿಕೆ ಮಾಡುತ್ತಿದೆ. ದೇಶದ ಜನತೆಯ ನಡುವೆ ಮಾಧ್ಯಮಗಳು ಗೋಡೆಗಳಾಗಿ ನಿಂತು ಗುಜರಾತ್ ಅಭಿವೃದ್ಧಿಯ ವಾಸ್ತವಗಳನ್ನು ಮುಚ್ಚಿ ಹಾಕಿ, ಸುಳ್ಳುಗಳನ್ನು ಹರಡಿದ್ದವು. ಇಂದು ಆ ಸುಳ್ಳುಗಳನ್ನು ಮೋದಿ ನಿರ್ಮಿಸುತ್ತಿರುವ ಗೋಡೆಯೇ ಬಹಿರಂಗಗೊಳಿಸಿದೆ.

ಶಿಕ್ಷಣ, ಆರೋಗ್ಯ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗಿಂತ ಗುಜರಾತ್‌ತೀರಾ ಹಿಂದುಳಿದಿರುವ ಸಂಗತಿ ತಿಳಿಯದೇ ಇರುವ ಗುಟ್ಟೇನೂ ಅಲ್ಲ. ರಸ್ತೆಯ ಇಕ್ಕೆಡೆಗಳಲ್ಲಿರುವ ಕೊಳೆಗೇರಿಗಳನ್ನು ಮರೆಮಾಡಲು ಗೋಡೆಗಳನ್ನು ಕಟ್ಟಿದಾಕ್ಷಣ, ಅಮೆರಿಕಕ್ಕೆ ಗುಜರಾತ್‌ನ ವಾಸ್ತವ ತಿಳಿಯದೇ ಇರುವುದಿಲ್ಲ. ಹಿಂದುತ್ವವೆನ್ನುವ ಬೃಹತ್ ಗೋಡೆಯೊಂದನ್ನು ಕಟ್ಟಿ ಆ ಮೂಲಕ ಜಾತಿಗಳೆಂಬ ಕಿರುಗೋಡೆಗಳನ್ನು ಕಾಣದಂತೆ ಮಾಡುವ ಆರೆಸ್ಸೆಸ್‌ನ ಪ್ರಯತ್ನದಷ್ಟೇ ಮೂರ್ಖತನದಿಂದ ಕೂಡಿದ ನಿರ್ಧಾರವಿದು. 3,000 ಕೋಟಿ ರೂಪಾಯಿಯಲ್ಲಿ ವಿಶ್ವದಲ್ಲೇ ಅತಿ ದೊಡ್ಡ ಪಟೇಲ್ ಪ್ರತಿಮೆಯನ್ನು ನಿರ್ಮಿಸಿದ ಕೇಂದ್ರ ಸರಕಾರ, ಆ ಮೂಲಕ ತನ್ನನ್ನು ತಾನು ವಿಶ್ವಕ್ಕೆ ಪ್ರದರ್ಶಿಸಲು ಯತ್ನಿಸಿತು. ಅದೇ ಹಣವನ್ನು ಗುಜರಾತ್‌ನ ಎಲ್ಲ ಕೊಳೆಗೇರಿಗಳ ಸುಧಾರಣೆಗೆ ಬಳಸಿದ್ದರೆ, ಹೀಗೆ ತನ್ನ ಮಾನವನ್ನು ಗೋಡೆ ಕಟ್ಟಿ ಮುಚ್ಚಿ ಹಾಕುವ ಅಗತ್ಯ ಮೋದಿಯವರಿಗೆ ಬರುತ್ತಿರಲಿಲ್ಲವೇನೋ? ಗುಜರಾತ್‌ನಲ್ಲಿ ಸೂಕ್ತ ವೈದ್ಯಕೀಯ ವ್ಯವಸ್ಥೆಗಳಿಲ್ಲದೆ 253 ಮಕ್ಕಳ ಸಾವಿಗೆ ಕಾರಣವಾದದ್ದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿವೆ.

ಇದೇ ಸಂದರ್ಭದಲ್ಲಿ ಟ್ರಂಪ್‌ನ ಮೂರುಗಂಟೆಗಳ ಪ್ರವಾಸಕ್ಕಾಗಿ ಸುಮಾರು ನೂರು ಕೋಟಿ ರೂಪಾಯಿಗಳನ್ನು ವ್ಯಯ ಮಾಡಿ ಅವರನ್ನು ಸ್ವಾಗತಿಸಲು ಮೋದಿ ಸರಕಾರ ಸಿದ್ಧತೆ ಮಾಡುತ್ತಿದೆ. ‘ನನ್ನ ಆಗಮನಕ್ಕಾಗಿ ಸುಮಾರು 70 ಲಕ್ಷ ಜನರನ್ನು ಸೇರಿಸುವ ಭರವಸೆಯನ್ನು ಮೋದಿ ನೀಡಿದ್ದಾರೆ’ ಎಂಬ ಹೇಳಿಕೆಯನ್ನೂ ಈಗಾಗಲೇ ಟ್ರಂಪ್ ನೀಡಿದ್ದಾರೆ. ಇಷ್ಟಕ್ಕೂ 70 ಲಕ್ಷ ಜನರನ್ನು ಸೇರಿಸುವುದರಿಂದ ಈ ದೇಶಕ್ಕೆ ಆಗುವ ಲಾಭವಾದರೂ ಏನು? ಇಷ್ಟಕ್ಕೂ ಅಮೆರಿಕ ತನ್ನ ಲಾಭಕ್ಕಾಗಿ ಹಿಂದುಳಿದ ದೇಶವನ್ನು ಬಳಸುತ್ತದೆಯೇ ಹೊರತು, ಇತರ ಬಡ ದೇಶಗಳಿಗೆ ಒಳಿತು ಮಾಡಿದ ಉದಾಹರಣೆಗಳೇ ಇಲ್ಲ. ಅಮೆರಿಕದ ಸಂಗದಿಂದ ಪಾಕಿಸ್ತಾನಕ್ಕೆ ಯಾವ ಸ್ಥಿತಿ ಒದಗಿದೆ ಎನ್ನುವ ಉದಾಹರಣೆ ನಮ್ಮ ಮುಂದಿದೆ. ಇಂದು ಭಾರತ ತನ್ನನ್ನು ತಾನು ಪಾಕಿಸ್ತಾನವಾಗಿ ಪರಿವರ್ತಿಸಲು ಹೊರಟಿದೆ. ಇದೇ ಮೊದಲ ಬಾರಿಗೆ, ಭಾರತ ಅಮೆರಿಕದ ಅಧ್ಯಕ್ಷನ ಮುಂದೆ ಗುಲಾಮನಂತೆ ನಡೆದುಕೊಳ್ಳುತ್ತಿದೆ. ತನ್ನ ಒಡೆಯ ಬಂದ ಸಂಭ್ರಮಕ್ಕೆ ಹಿಗ್ಗುವ ಜೀತದಾಳುವಿನಂತೆ ಮೋದಿ ಸರಕಾರ ಆಡುತ್ತಿದೆ.

ಕೊಳೆಗೇರಿಯನ್ನು ಮುಚ್ಚಿದಾಕ್ಷಣ ಅದರ ದುರ್ವಾಸನೆಯನ್ನು ತಡೆಯಲು ಮೋದಿಗೆ ಸಾಧ್ಯವಿಲ್ಲ. ಗುಜರಾತ್‌ನಲ್ಲಿ ನಿರ್ಮಾಣವಾಗುತ್ತಿರುವ ಗೋಡೆಗಳಾಚೆಗೆ ಬದುಕುತ್ತಿರುವ ಜನರು ಯಾವ ದೇಶಕ್ಕೆ ಸೇರಿದವರು? ಟ್ರಂಪ್‌ನ ಆಗಮನಕ್ಕೂ ಈ ಗೋಡೆಯಾಚೆಗೆ ಇರುವವರಿಗೂ ಯಾವ ಸಂಬಂಧವೂ ಇಲ್ಲ ಎನ್ನುವುದನ್ನು ಮೋದಿ ಹೇಳುತ್ತಿದ್ದಾರೆ. ಅಂದರೆ ಗುಜರಾತ್‌ನೊಳಗೊಂದು ಗುಜರಾತ್, ಭಾರತದೊಳಗೊಂದು ಭಾರತವನ್ನು ಅವರು ಕಟ್ಟಲು ಹೊರಟಿದ್ದಾರೆ ಎನ್ನುವುದರ ಸೂಚನೆಯಿದು. ಎನ್‌ಆರ್‌ಸಿ ಹೆಸರಿನಲ್ಲಿ ಮೋದಿಯವರು ನಿರ್ಮಿಸುತ್ತಿರುವ ‘ಡಿಟೆನ್‌ಶನ್ ಸೆಂಟರ್’ನ ಇನ್ನೊಂದು ರೂಪವೇ ಈ ಗೋಡೆಯಾಗಿದೆ. ಆಡಳಿತದಲ್ಲಿ ಮೋದಿ ಸಂಪೂರ್ಣ ವಿಫಲವಾಗಿದ್ದಾರೆ. ಬಡವರನ್ನು ಉದ್ಧರಿಸುವ ಮಾತು ದೂರ ಉಳಿಯಿತು. ಈಗ ಈ ಬಡವರನ್ನೆಲ್ಲ ‘ಭಾರತೀಯರೇ ಅಲ್ಲ’ ಎಂದು ಘೋಷಿಸಿ ಗೋಡೆಯಾಚೆಗೆ ಅವರನ್ನಿಟ್ಟರೆ, ಅವರ ಸಮಸ್ಯೆಯೇ ಮುಗಿದಂತಾಗುತ್ತದೆ.

ಈಗಾಗಲೇ ಕಾಶ್ಮೀರದಲ್ಲಿ ಗೋಡೆ ಒಡೆದಿದ್ದೇನೆ ಎಂದು ಘೋಷಿಸಿ ಭಾರತ ಮತ್ತು ಕಾಶ್ಮೀರದ ನಡುವೆ ಮೋದಿ ಬೃಹತ್ ಗೋಡೆಯನ್ನು ಕಟ್ಟಿ ನಿಲ್ಲಿಸಿದ್ದಾರೆ. ಇಂದು ಯುರೋಪಿಯನ್ ನಾಯಕರು ಈ ರಾಜ್ಯಕ್ಕೆ ಭೇಟಿ ನೀಡಬಹುದು. ಆದರೆ ಭಾರತೀಯರು ಇದರೊಳಗೆ ಕಾಲಿಡಲು ಸಾಧ್ಯವಾಗದಂತಹ ಸನ್ನಿವೇಶವಿದೆ. ಸಿಎಎ ಮೂಲಕ ಇಡೀ ದೇಶದುದ್ದಕ್ಕೂ ಗೋಡೆ ಕಟ್ಟುವ ಪ್ರಯತ್ನ ನಡೆಯುತ್ತಿದೆ. ಈ ಪ್ರಯತ್ನದ ವಿರುದ್ಧ ದೇಶಾದ್ಯಂತ ಘೋಷಣೆಗಳು ಮೊಳಗುತ್ತಿವೆ. ದಲಿತ ವಿರೋಧಿ ನೀತಿಗಳ ವಿರುದ್ಧ ದಲಿತ ಸಂಘಟನೆಗಳು ಒಂದಾಗಿ ಬೀದಿಗಿಳಿದಿವೆ. ಉದ್ಯೋಗ ಕಳೆದುಕೊಂಡ ಕಾರ್ಮಿಕರೂ ರಸ್ತೆಯಲ್ಲಿ ನಿಂತು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಅಮೆರಿಕದಿಂದ ಬರುತ್ತಿರುವ ತನ್ನ ಅತಿಥಿಗೆ ಈ ಕೂಗು ಕೇಳಿಸದಂತೆ ಮೋದಿ ಏನು ಕ್ರಮ ತೆಗೆದುಕೊಳ್ಳಲಿದ್ದಾರೆ ಎನ್ನುವುದು ಕುತೂಹಲಕಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News