​"ನೋಟು ನಿಷೇಧದಂತೆ ಕೇಂದ್ರದಿಂದ ಯಾವುದೇ ಕ್ಷಣದಲ್ಲಿ ಮೀಸಲಾತಿ ರದ್ದು ಸಂಭವ"

Update: 2020-02-17 03:47 GMT

ಜೈಪುರ, ಫೆ.17: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನೋಟು ರದ್ದತಿ ಮಾದರಿಯಲ್ಲಿ ಯಾವುದೇ ಕ್ಷಣದಲ್ಲಿ ಮೀಸಲಾತಿ ಸೌಲಭ್ಯವನ್ನೂ ರದ್ದುಪಡಿಸುವ ಎಲ್ಲ ಸಾಧ್ಯತೆಗಳಿವೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ.

ಮೀಸಲಾತಿ ಕುರಿತ ಬಿಜೆಪಿ ದೃಷ್ಟಿಕೋನವನ್ನು ವಿರೋಧಿಸಿದ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಆರೆಸ್ಸೆಸ್ ಕಾರ್ಯಸೂಚಿಯನ್ನು ಹೇರುತ್ತಿದೆ ಎಂದು ಅವರು ಆಪಾದಿಸಿದರು. ಕಾಂಗ್ರೆಸ್ ಪಕ್ಷದ ಬುಡಕಟ್ಟು, ಇತರ ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಜಾತಿ ವಿಭಾಗ ಸಂಯುಕ್ತವಾಗಿ ಈ ರ್ಯಾಲಿ ಆಯೋಜಿಸಿತ್ತು.

ಬಿಜೆಪಿಯ ಈ ಉದ್ದೇಶ ಸಮರ್ಥನೀಯವಲ್ಲ ಎಂದು ಪಕ್ಷದ ಹಿರಿಯ ಮುಖಂಡರೂ ಆಗಿರುವ ಅವರು ಸ್ಪಷ್ಟಪಡಿಸಿದರು.

"ದೇಶದಲ್ಲಿ ಆರೆಸ್ಸೆಸ್ ಕಾರ್ಯಸೂಚಿಯನ್ನು ಕೇಂದ್ರ ಸರಕಾರ ಅನುಷ್ಠಾನಗೊಳಿಸುತ್ತಿದ್ದು, ದೇಶದ ಸ್ಥಿತಿ ಹದಗೆಡುತ್ತಿದೆ. ಈ ಕಾರ್ಯಸೂಚಿ ಯಾವಾಗ ಮುಗಿಯುತ್ತದೆಯೋ ಅಂದು, ನೋಟು ರದ್ದತಿ ನಿರ್ಧಾರ ಕೈಗೊಂಡಂತೆ ಬಿಜೆಪಿ ಮೀಸಲಾತಿ ಸ್ಥಗಿತಗೊಳಿಸುವ ನಿರ್ಧಾರವನ್ನೂ ದಿಢೀರನೇ ಪ್ರಕಟಿಸಲಿದೆ" ಎಂದು ಹೇಳಿದರು.

"ಮೀಸಲಾತಿ ಆರಂಭಿಸಿ 70 ವರ್ಷಗಳೇ ಕಳೆದಿವೆ. ಇನ್ನು ಮುಂದೆ ಇದರ ಅಗತ್ಯವಿಲ್ಲ ಎನ್ನುವುದು ಆರೆಸ್ಸೆಸ್ ಪ್ರತಿಪಾದನೆ. ಮೋಹನ್ ಭಾಗ್ವತ್ ಹೀಗೆ ಹೇಳಿದ್ದರು. ಆದರೆ ಚುನಾವಣೆ ಬಳಿಕ, ತಮ್ಮ ಹೇಳಿಕೆಯ ಅರ್ಥ ಅದಲ್ಲ ಎಂದು ಸಮುಜಾಯಿಷಿ ನೀಡಿದರು. ಮೀಸಲಾತಿಯ ವಿಚಾರದಲ್ಲಿ ಕೇಂದ್ರ ಸರ್ಕಾರ ಅಪಾಯಕಾರಿ ಆಟವಾಡುತ್ತಿದೆ" ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News