ಸಿಎಎ ವಿರೋಧಿ ನಿರ್ಣಯ ಅಂಗೀಕರಿಸಿದ ರಾಜ್ಯಗಳ ಸಾಲಿಗೆ ಮತ್ತೊಂದು ಸೇರ್ಪಡೆ

Update: 2020-02-17 04:08 GMT
ಸಾಂದರ್ಭಿಕ ಚಿತ್ರ

ಹೈದರಾಬಾದ್, ಫೆ.17: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ವಿರೋಧಿಸುವ ನಿರ್ಣಯ ಅಂಗೀಕರಿಸಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಇದರೊಂದಿಗೆ ಸಿಎಎ ವಿರೋಧಿ ನಿರ್ಣಯ ಆಂಗೀಕರಿಸಿದ ರಾಜ್ಯಗಳ ಸಾಲಿಗೆ ಮತ್ತೊಂದು ರಾಜ್ಯ ಸೇರ್ಪಡೆಯಾದಂತಾಗಿದೆ.

ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತ ನಿರ್ಣಯ ಅಂಗೀಕರಿಸಲಾಯಿತು. ಜತೆಗೆ ತಕ್ಷಣ ತಿದ್ದುಪಡಿ ಕಾಯ್ದೆಯನ್ನು ರದ್ದುಪಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಧಾರವನ್ನೂ ಸಭೆ ಕೈಗೊಂಡಿತು.

ಯಾರಿಗೇ ಆಗಲೀ ಪೌರತ್ವ ನೀಡುವ ವಿಚಾರದಲ್ಲಿ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ ಎಂದು ಕೇಂದ್ರಕ್ಕೆ ಮನವಿ ಮಾಡಿಕೊಳ್ಳಲು ನಿರ್ಧರಿಸಲಾಯಿತು. ಎಲ್ಲ ಧರ್ಮಗಳನ್ನು ಕಾನೂನಿನ ಎದುರು ಸಮಾನವಾಗಿ ಕಾಣಬೇಕು ಎಂದು ರವಿವಾರ ರಾತ್ರಿ ನಡೆದ ಸಭೆಯ ಬಳಿಕ ಪ್ರಕಟನೆ ಹೊರಡಿಸಲಾಗಿದೆ.

ಸಿಎಎ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವ ಕ್ರಮವಾಗಿದ್ದು, ಇದು ದೇಶದ ಸಂವಿಧಾನ ಪ್ರತಿಪಾದಿಸಿರುವ ಜಾತ್ಯತೀತ ತತ್ವವನ್ನು ಗಾಳಿಗೆ ತೂರಿದೆ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಯಿತು. ಈಗಾಗಲೇ ಕೇರಳ, ಪಂಜಾಬ್, ರಾಜಸ್ಥಾನ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಸಿಎಎ ವಿರೋಧಿ ನಿರ್ಣಯ ಆಂಗೀಕರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News