ಜಮ್ಮು ಕಾಶ್ಮೀರ ವಿಚಾರದಲ್ಲಿ ಸರಕಾರದ ಕ್ರಮ ಟೀಕಿಸಿದ ಬ್ರಿಟಿಷ್ ಸಂಸದೆಗೆ ಭಾರತ ಪ್ರವೇಶ ನಿರಾಕರಣೆ

Update: 2020-02-17 09:52 GMT

ಹೊಸದಿಲ್ಲಿ: ಜಮ್ಮು ಕಾಶ್ಮೀರದ ವಿಚಾರದಲ್ಲಿ ಭಾರತ ಸರಕಾರ ಕೈಗೊಂಡ ಕ್ರಮಗಳನ್ನು ಟೀಕಿಸಿರುವ ಬ್ರಿಟಿಷ್ ಸಂಸದೆ ಡೆಬೀ ಅಬ್ರಹಾಮ್ಸ್ ಅವರಿಗೆ ಭಾರತಕ್ಕೆ ಪ್ರವೇಶ ನಿರಾಕರಿಸಲಾಗಿದೆ.

ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ಅವರ ಇ-ವೀಸಾ ತಿರಸ್ಕರಿಸಲಾಗಿದೆ. ಆಲ್ ಪಾರ್ಟಿ ಪಾರ್ಲಿಮೆಂಟರಿ ಗ್ರೂಪ್ ಫಾರ್ ಕಾಶ್ಮೀರ್ ಅಧ್ಯಕ್ಷೆಯಾಗಿರುವ ಅಬ್ರಹಾಮ್ಸ್ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ್ದು ತಮ್ಮನ್ನು ಅಪರಾಧಿ ಎಂಬಂತೆ  ಪರಿಗಣಿಸಲಾಗುತ್ತಿದೆ ಹಾಗೂ ಗಡೀಪಾರು ಘಟಕಕ್ಕೆ (ಡಿಪೋರ್ಟೀ ಸೆಲ್) ಕರೆದುಕೊಂಡು ಹೋಗಲಾಗಿದೆ ಎಂದಿದ್ದಾರೆ.

ಇಂದು ಬೆಳಗ್ಗೆ 8:50ಕ್ಕೆ ಅವರು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಕಳೆದ ಅಕ್ಟೋಬರ್ ತಿಂಗಳಲ್ಲಿ ಆಕೆಗೆ ನೀಡಲಾಗಿದ್ದ ಹಾಗೂ ಈ ವರ್ಷದ ಅಕ್ಟೋಬರ್ ತಿಂಗಳ ತನಕ ಊರ್ಜಿತದಲ್ಲಿರುವ ಇ-ವೀಸಾ ತಿರಸ್ಕರಿಸಲಾಗಿದೆ ಎಂದು ಅಧಿಕಾರಿಗಳು  ತಿಳಿಸಿದ್ದಾರೆಂದು ಅಬ್ರಹಾಮ್ಸ್ ಹೇಳಿದ್ದಾರೆ.

"ಎಲ್ಲರ ಜತೆ ಸರತಿಯಲ್ಲಿ ನಿಂತು ದಾಖಲೆ ಹಾಜರುಪಡಿಸಿದೆ. ನನ್ನ ವೀಸಾ ಪಡೆದುಕೊಂಡ ಅಧಿಕಾರಿ ಪರದೆ ನೋಡಿ ಅದನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದರು. ಆತ ನನ್ನ ಪಾಸ್ ಪೋರ್ಟ್ ತೆಗೆದುಕೊಂಡು ಹತ್ತು ನಿಮಿಷದ ನಂತರ ವಾಪಸಾದರು. ಆಗ ಅವರು ಬಹಳ ಒರಟಾಗಿ ಹಾಗೂ ಆಕ್ರಮಣಕಾರಿಯಾಗಿ ವರ್ತಿಸಿ 'ನನ್ನ ಜತೆ ಬನ್ನಿ' ಎಂದು ಜೋರಾಗಿ ಹೇಳಿದರು'' ಎಂದು ಅಬ್ರಹಾಮ್ಸ್ ತಿಳಿಸಿದ್ದಾರೆ.

ಅವರನ್ನು ನಂತರ ಡಿಪೋರ್ಟ್ ಸೆಲ್‍ ಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಅಬ್ರಹಾಮ್ಸ್ ತಮ್ಮ ಸಂಬಂಧಿಗೆ ಕರೆ ಮಾಡಿದ ನಂತರ ಅವರು ಬ್ರಿಟಿಷ್ ಹೈಕಮಿಷನ್‍ಗೆ ಮಾಹಿತಿ ನೀಡಿದರು.

2019ರ ಆಗಸ್ಟ್ ತಿಂಗಳಲ್ಲಿ 370ನೇ ವಿಧಿ ರದ್ದುಗೊಳಿಸಿದ ಕೇಂದ್ರ ಸರಕಾರದ ಕ್ರಮದ ಬಗ್ಗೆ ಕಳವಳ ವ್ಯಕ್ತಪಡಿಸಿ ಅಬ್ರಹಾಮ್ಸ್ ಬರೆದಿದ್ದ ಪತ್ರ ಆಕೆಯ ಟ್ವಿಟರ್ ಖಾತೆಯಲ್ಲಿದೆ. ಅಷ್ಟೇ ಅಲ್ಲದೆ ಕಾಶ್ಮೀರ ಕುರಿತಂತೆ ಸರಕಾರದ ಕ್ರಮವನ್ನು ಟೀಕಿಸಿ ಆಕೆ ಹಲವು ಪೋಸ್ಟ್‍ ಗಳನ್ನು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News