100 ತಾಲೂಕುಗಳಲ್ಲಿ ‘ಬರ ನಿಯಂತ್ರಣ ಜಲಾನಯನ ಅಭಿವೃದ್ಧಿ’ ಯೋಜನೆ: ರಾಜ್ಯಪಾಲ ವಜುಭಾಯಿ

Update: 2020-02-17 12:28 GMT

ಬೆಂಗಳೂರು, ಫೆ.17: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಸಂಯೋಜನೆಗೊಳಿಸಿ 100 ಬರಪೀಡಿತ ತಾಲೂಕುಗಳಲ್ಲಿ ‘ಬರ ನಿಯಂತ್ರಣ ಜಲಾನಯನ ಅಭಿವೃದ್ಧಿ’ ಎಂಬ ಹೊಸ ಯೋಜನೆ ಜಾರಿಗೆ ತರಲು ನನ್ನ ಸರಕಾರ ಉದ್ದೇಶಿಸಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿನ ವಿಧಾನಸಭೆಯ ಸಭಾಂಗಣದಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಪ್ರಧಾನಮಂತ್ರಿ ಕೃಷಿ ಸಿಂಚಾಯಿ- ಯೋಜನೆ ಅಡಿಯಲ್ಲಿ 136 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 47 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜಲಾನಯನ ಅಭಿವೃದ್ಧಿಯನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.

41 ತಾಲೂಕುಗಳಲ್ಲಿ ಅಂತರ್ಜಲ ನಿರ್ವಹಣಾ ಕಾರ್ಯವನ್ನು ಕೈಗೊಳ್ಳಲು ಅಟಲ್ ಭೂಜಲ ಯೋಜನೆಯಡಿ ಕೇಂದ್ರ ಸರಕಾರದಿಂದ ನೀಡುವ ಅನುದಾನಕ್ಕೆ ಪೂರಕವಾಗಿ ಹೆಚ್ಚುವರಿ ಅನುದಾನ ನೀಡುವ ಮೂಲಕ ರಾಜ್ಯವನ್ನು ಬರ ನಿರೋಧಕವಾಗಿಸಲು ಸರಕಾರ ಉದ್ದೇಶಿಸಿದೆ ಎಂದು ರಾಜ್ಯಪಾಲ ತಿಳಿಸಿದರು.

ಕೇಂದ್ರ ಸರಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಅರ್ಹ ಕೃಷಿ ಆಧಾರಿತ ಕುಟುಂಬಳಿಗೆ ಕೇಂದ್ರ ಸರಕಾರವು ನೀಡುತ್ತಿರುವ 6 ಸಾವಿರ ರೂ.ಗಳ ವಾರ್ಷಿಕ ಹಣಕಾಸಿನ ನೆರವಿನ ಜೊತೆಗೆ ರಾಜ್ಯ ಸರಕಾರವು ಪ್ರತಿ ವರ್ಷ 4 ಸಾವಿರ ರೂ.ಗಳ ಹೆಚ್ಚುವರಿ ನೆರವನ್ನು ನೀಡುತ್ತಿದೆ. ಈಗಾಗಲೇ 41 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ 825 ಕೋಟಿ ರೂ.ಗಳನ್ನು ವರ್ಗಾಯಿಸಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರವು ಚಿಕ್ಕಮಗಳೂರು, ಯಾದಗಿರಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಯ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ರಾಜ್ಯ ಸರಕಾರವು ಚಿಕ್ಕಬಳ್ಳಾಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುಮೋದನೆ ನೀಡಿದೆ. ಅಲ್ಲದೇ, ಕೊಡಗು ಮತ್ತು ಕಾರವಾರ ವೈದ್ಯಕೀಯ ಕಾಲೇಜುಗಳ ಆವರಣದಲ್ಲಿ 450 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ರಾಜ್ಯಪಾಲ ತಿಳಿಸಿದರು.

ಕಲಬುರಗಿಯ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ 300 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಮತ್ತು ತುಮಕೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕೇಂದ್ರವನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ಕ್ಯಾನ್ಸರ್ ತಪಾಸಣೆ ಸೌಲಭ್ಯಗಳಿಲ್ಲದ ರಾಜ್ಯದ 10 ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಚಾರಿ ಮ್ಯಾಮೋಗ್ರಫಿ ಮತ್ತು ಸರ್ವಿಕಲ್ ಕ್ಯಾನ್ಸರ್ ಡಯಾಗ್ನಸ್ಟಿಕ್ ಯುನಿಟ್ ಸ್ಥಾಪನೆಗೆ ಸರಕಾರ ಮಂಜೂರಾತಿ ನೀಡಿದೆ ಎಂದು ಅವರು ಹೇಳಿದರು.

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ 2019ರ ಜು.26ರಿಂದ ಈವರೆಗೆ 3.30 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳಿಗೆ ಚಿಕಿತ್ಸೆಗೆ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.

ಕಳೆದ ಎರಡು ವರ್ಷಗಳಿಂದ ಬಾಕಿ ಉಳಿದಿದ್ದ ಭಾಗ್ಯಲಕ್ಷ್ಮಿ ಬಾಂಡುಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲು ಕ್ರಮವಹಿಸಲಾಗಿದೆ. ಸ್ವ-ಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲವನ್ನು ನೀಡುವ ಹಾಗೂ ಹೆಚ್ಚುವರಿ 10 ಸಾವಿರ ಸ್ವ-ಸಹಾಯ ಗುಂಪುಗಳನ್ನು ಹೊಸದಾಗಿ ರಚಿಸುವ ಮೂಲಕ ಮಹಿಳೆಯರ ಸ್ವಾವಲಂಬನೆಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದು ರಾಜ್ಯಪಾಲ ತಿಳಿಸಿದರು.

2019ರ ಡಿಸೆಂಬರ್‌ವರೆಗೆ 1.15 ಲಕ್ಷಕ್ಕೂ ಹೆಚ್ಚು ಮನೆಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದ್ದು, 3461 ನಿವೇಶನಗಳನ್ನು ವಿತರಿಸಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ(ನಗರ) ಅಡಿಯಲ್ಲಿ 4459 ಕೋಟಿ ರೂ. ವೆಚ್ಚದಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ 83 ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.

ಪ್ರಮುಖಾಂಶಗಳು: ನೆರೆ ಹಾವಳಿಯಿಂದ ಹಾನಿಗೊಳಗಾದ 1.24 ಲಕ್ಷಕ್ಕೂ ಹೆಚ್ಚಿನ ಮನೆಗಳಿಗೆ 827 ಕೋಟಿ ರೂ.ಬಿಡುಗಡೆ. 9 ಲಕ್ಷ ಹಾಲು ಉತ್ಪಾದಕ ರೈತರಿಗೆ 691 ಕೋಟಿ ರೂ.ಪ್ರೋತ್ಸಾಹ ಧನ ಬಿಡುಗಡೆ. 15 ಜಿಲ್ಲೆಗಳಿಗೆ ಸುಸಜ್ಜಿತ ಪಶುವೈದ್ಯ ಸಂಚಾರಿ ವಾಹನಗಳನ್ನು ಒದಗಿಸಲಾಗಿದೆ.

ವಿಜಯನಗರ ಹಾಗೂ ಮಲಪ್ರಭಾ ಕಾಲುವೆಗಳ ಆಧುನೀಕರಣಕ್ಕೆ 1450 ಕೋಟಿ ರೂ., 975 ಕೋಟಿ ರೂ.ವೆಚ್ಚದಲ್ಲಿ ಹೇಮಾವತಿ ನಾಲೆ ಆಧುನೀಕರಣ ಹಾಗೂ ಅಗಲೀಕರಣ(0-70 ಕಿ.ಮೀ, 70-166 ಕಿ.ಮೀ), 4050 ಕೋಟಿ ರೂ.ಅಂದಾಜು ವೆಚ್ಚದಲ್ಲಿ 21 ನೀರಾವರಿ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ. ಆಶಾ ಕಾರ್ಯಕರ್ತೆಯರ ಮಾಸಿನ ಗೌರವ ಧನ 4 ಸಾವಿರ ರೂ.ಗಳಿಗೆ ಹೆಚ್ಚಳ.

49 ತಾಲೂಕು ಆಸ್ಪತ್ರೆಗಳಲ್ಲಿ 49 ಪೌಷ್ಠಿಕತೆ ಪುನರ್ ವಸತಿ ಕೇಂದ್ರಗಳ ಸ್ಥಾಪನೆ. ಎಸ್ಸಿಎಸ್ಪಿ/ಟಿಎಸ್ಪಿಗಾಗಿ 30,445 ಕೋಟಿ ರೂ.ಹಂಚಿಕೆ. ಶಾಲೆಯ ಮಕ್ಕಳು ನಿರ್ಜಲೀಕರಣಗೊಳ್ಳುವುದನ್ನು ತಪ್ಪಿಸಲು ಈ ಶೈಕ್ಷಣಿಕ ವರ್ಷದಿಂದ ‘ವಾಟರ್ ಬೆಲ್’ ಎಂಬ ಹೊಸ ಪರಿಕಲ್ಪನೆ ಪರಿಚಯ. 411 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪದವಿ ಶಿಕ್ಷಣವನ್ನು ಪಡೆಯುತ್ತಿರುವ 1.70 ಲಕ್ಷ ವಿದ್ಯಾರ್ಥಿನಿಯರಿಗೆ ಪೂರ್ಣ ಶುಲ್ಕ ವಿನಾಯಿತಿ.

ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಅನುಮೋದನೆ. ಬಂಡವಾಳ ಆಕರ್ಷಣೆ, ವಿನೂತನ ತಂತ್ರಜ್ಞಾನಗಳ ಪರಿಚಯ ಹಾಗೂ ಹೆಚ್ಚುವರಿ ಉದ್ಯೋಗ ಸೃಜನೆಗಾಗಿ ನೂತನ ಕೈಗಾರಿಕಾ ನೀತಿ ಘೋಷಿಸಲು ಕ್ರಮ. ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ ಸಹಯೋಗದಲ್ಲಿ ಬಯೋಫಾರ್ಮಾ ಕ್ಷೇತ್ರಗಳಲ್ಲಿ ನವೋದ್ಯಮಗಳನ್ನು ಪೋಷಿಸಲು ಮತ್ತು ಬೆಂಬಲಿಸಲು ಬಯೋ ಇನ್ಕುಬೇಟರ್ ಸ್ಥಾಪನೆ.

ಹಾಸನ, ವಿಜಯಪುರ ಮತ್ತು ಕಾರವಾರ ವಿಮಾನ ನಿಲ್ದಾಣಗಳ ಅಭಿವೃದ್ಧಿಗಾಗಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಕ್ರಮ. ಕೊಪ್ಪಳ, ಬೀದರ್ ಮತ್ತು ಗದಗದಲ್ಲಿ ತಲಾ 2500 ಮೆಗಾವ್ಯಾಟ್ ಸಾಮರ್ಥ್ಯದ ಅಲ್ಟ್ರಾ ಮೆಗಾ ನವೀಕರಿಸಬಹುದಾದ ಇಂಧನ ಪವರ್ ಪಾರ್ಕ್‌ಗಳನ್ನು ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ.

8344 ಕೋಟಿ ರೂ.ವೆಚ್ಚದಲ್ಲಿ ಮುಖ್ಯಮಂತ್ರಿಗಳ ನವನಗರೋತ್ಥಾನ ಯೋಜನೆಗೆ ಅನುಮೋದನೆ ನೀಡಲಾಗಿದ್ದು, 2500 ಕೋಟಿ ರೂ.ಗಳ ಕಾಮಗಾರಿಗಳ ಪ್ರಗತಿಯಲ್ಲಿವೆ. ಜೈಕಾ ಆರ್ಥಿಕ ನೆರವಿನೊಂದಿಗೆ ಕಾವೇರಿ ನೀರು ಸರಬರಾಜು ಯೋಜನೆ, ಹಂತ-5ರ ಶೀಘ್ರ ಅನುಷ್ಠಾನಕ್ಕಾಗಿ ಕ್ರಮ ಕೈಗೊಂಡಿದೆ. ಈ ಯೋಜನೆ ಕಾರ್ಯಗತಗೊಂಡ ನಂತರ ಬೆಂಗಳೂರು ನಗರಕ್ಕೆ ಸರಬರಾಜು ಮಾಡಲು ಹೆಚ್ಚುವರಿ 775 ಎಂಎಲ್‌ಡಿ ನೀರು ಲಭ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News