ರಸ್ತೆಗೆ ಭೂಮಿ ನೀಡಿದ್ದ ರೈತರಿಗೆ ಪರಿಹಾರ ವಿಳಂಬ ಆರೋಪ: ಅಹೋರಾತ್ರಿ ಧರಣಿ ಆರಂಭ

Update: 2020-02-17 18:50 GMT

ಬೆಂಗಳೂರು, ಫೆ.17: ಪೆರಿಫೆರಲ್ ರಿಂಗ್ ರಸ್ತೆಗೆ ಭೂಮಿ ನೀಡಿದ್ದ ರೈತರಿಗೆ ಪರಿಹಾರ ಹಣ ನೀಡುವಲ್ಲಿ ಹಾಗೂ ಕಾಮಗಾರಿ ಆರಂಭಿಸುವಲ್ಲಿ ಸರಕಾರ ವಿಳಂಬ ನೀತಿ ತೋರಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೇಂದ್ರ ಕಚೇರಿ ಮುಂದೆ ಸೋಮವಾರ ಅಹೋರಾತ್ರಿ ಧರಣಿ ಆರಂಭಿಸಿದೆ. 

ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿ, ತುಮಕೂರು ರಸ್ತೆಯಿಂದ ಹೊಸೂರು ರಸ್ತೆ ಸಂಪರ್ಕ ಕಲ್ಪಿಸಲು ಬಿಡಿಎ ಭೂ ಸ್ವಾಧೀನ ಪ್ರಕ್ರಿಯೆ ಡಿನೋಟಿಫಿಕೇಷನ್ ಹೊರಡಿಸಿ 16 ವರ್ಷವಾಗಿದೆ. ಆದರೆ, ಈವರೆಗೂ ಭೂ ಮಾಲಕರಿಗೆ ಸೂಕ್ತ ಪರಿಹಾರ ನೀಡಿಲ್ಲ. ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಿಲ್ಲ. ಆದ್ದರಿಂದ ಯೋಜನೆ ರದ್ದು ಮಾಡಿ, ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಟ್ಟು, ಎನ್‌ಒಸಿ ನೀಡಬೇಕೆಂದು ಒತ್ತಾಯಿಸಿದರು.

ರಾಜ್ಯ ಸರಕಾರದ ಈ ನಿರ್ಲಕ್ಷದಿಂದಾಗಿ ಸಾವಿರಾರು ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈಗಾಗಲೇ ಹಲವು ಹೋರಾಟ ಮಾಡಿದರೂ ಸರಕಾರ ಸ್ಪಂದಿಸಿಲ್ಲ ಆದ್ದರಿಂದ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದ್ದು, ಮಂಗಳವಾರದ ವೇಳೆಗೆ ಸರಕಾರ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದರೆ ರಸ್ತೆಗೆಂದು ಪಹಣಿ ಮಾಡಿ ಜಮೀನಿನಲ್ಲಿ ನೆಟ್ಟ ಕಲ್ಲಗಳನ್ನು ತಂದು ಬಿಡಿಎ ಕಚೇರಿ ಮುಂದೆ ಹಾಕುತ್ತೇವೆ. ಜಮೀನು ದಾಖಲಾತಿ ತಿದ್ದುಪಡಿ ಮಾಡಿದ್ದಾರೆ ಎಂದು ಕೋರ್ಟ್ ಮೆಟ್ಟಿಲೇರುವ ಜತೆಗೆ ನಗರಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಧರಣಿ ವೇಳೆ ಸರಕಾರ ರೈತರನ್ನು ಬಂಧಿಸಲು ಮುಂದಾದರೆ ನಾಡಿನಾದ್ಯಂತ ಹೋರಾಟಕ್ಕೆ ಕರೆ ನೀಡಿ, ದೆಹಲಿ ಚಲೋ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು. ರಸ್ತೆ ಅಭಿವೃದ್ಧಿಗೆ ಭೂಮಿ ನೀಡಿದ ಸುಮಾರು 67 ಗ್ರಾಮದ ರೈತರ ಮುಖಂಡರು ಧರಣಿಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News