​ಸಿಎಎ ವಿರುದ್ಧದ ಹೋರಾಟ: ಉತ್ತರ ಪ್ರದೇಶದಲ್ಲಿ ಮೃತಪಟ್ಟವರೆಷ್ಟು ಗೊತ್ತೇ ?

Update: 2020-02-18 03:54 GMT
ಫೈಲ್ ಚಿತ್ರ

ಲಕ್ನೋ : ಸಿಎಎ ವಿರುದ್ಧದ ಹೋರಾಟದ ವೇಳೆ ಉತ್ತರ ಪ್ರದೇಶದಲ್ಲಿ 22 ಮಂದಿ ಮೃತಪಟ್ಟಿದ್ದು, 83 ಮಂದಿ ಗಾಯಗೊಂಡಿದ್ದಾರೆ. 833 ಮಂದಿಯನ್ನು ಬಂಧಿಸಲಾಗಿದ್ದು, 322 ಮಂದಿ ಇನ್ನೂ ಜೈಲಿನಲ್ಲಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ರಾಜ್ಯ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

"ಬಂಧಿತರ ಪೈಕಿ 561 ಮಂದಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದು, 322 ಮಂದಿ ಇನ್ನೂ ಜೈಲಿನಲ್ಲಿದ್ದಾರೆ ಎಂದು ರಾಜ್ಯ ಸರ್ಕಾರದ ವಕೀಲ ಮನೀಶ್ ಗೋಯೆಲ್ ಹೇಳಿದ್ದಾರೆ. ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಲಾಗಿದ್ದು, ಪ್ರತಿಭಟನೆ ವೇಳೆ ಒಟ್ಟು 45 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಮತ್ತು ನ್ಯಾಯಮೂರ್ತಿ ಸಿದ್ಧಾರ್ಥ ವರ್ಮಾ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠದ ಮುಂದೆ ಗೋಯೆಲ್ ಈ ವಿವರ ನೀಡಿದರು. ಪೊಲೀಸರ ವಿರುದ್ಧ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಈ ಪೀಠ ನಡೆಸುತ್ತಿದೆ.

ಸಿಎಎ ವಿರೋಧಿ ಪ್ರತಿಭಟನೆ ವೇಳೆ ಪೊಲೀಸರಿಂದ ನಡೆದಿದೆ ಎನ್ನಲಾದ ದೌರ್ಜನ್ಯದ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಜ. 29ರಂದು ಸೂಚಿಸಿತ್ತು. ಗಾಯಾಳುಗಳ ವೈದ್ಯಕೀಯ ವರದಿ ಮತ್ತು ಅವರಿಗೆ ಒದಗಿಸಿದ ವೈದ್ಯಕೀಯ ನೆರವಿನ ಬಗ್ಗೆಯೂ ವಿವರ ಸಲ್ಲಿಸುವಂತೆ ಆದೇಶಿಸಿತ್ತು. ಪೊಲೀಸ್ ದೌರ್ಜನ್ಯ ಬಗೆಗೆ ಮಾಧ್ಯಮ ವರದಿಗಳನ್ನು ಸರ್ಕಾರ ದೃಢೀಕರಿಸಿದೆಯೇ ಎಂದು ಪೀಠ ಪ್ರಶ್ನಿಸಿತ್ತು.

ಪೊಲೀಸ್ ಬಲಪ್ರಯೋಗದಿಂದಾಗಿ ಹಲವು ಮಂದಿ ಗಾಯಗೊಂಡು, ಮತ್ತೆ ಕೆಲವರು ಜೀವ ಕಳೆದುಕೊಂಡಿದ್ದಾರೆ ಎಂದು ಆಪಾದಿಸಿ ಹಲವು ಅರ್ಜಿಗಳನ್ನು ವಿವಿಧ ಸಂಘಟನೆಗಳು ಹೈಕೋರ್ಟ್‌ನಲ್ಲಿ ಸಲ್ಲಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News