ಪತಿ ನಿಧನದ ಬಳಿಕ 19 ವರ್ಷಗಳಲ್ಲಿ 17 ಕೋಟಿ ರೂ. ದಾನ ಮಾಡಿದ ಮಹಿಳೆ !

Update: 2020-02-19 04:01 GMT
ಕೃಪೆ : The new indian express 

ಕಾಸರಗೋಡು : ವಾರಾಂತ್ಯದ ಒಂದು ದಿನ ಬೆಂಗಳೂರಿನಿಂದ 12 ಗಂಟೆ ರೈಲು ಪ್ರಯಾಣ ಮಾಡಿ ಕಾಸರಗೋಡು ತಲುಪಿದ ಈ ಮಹಿಳೆ ಮರುದಿನ ಬೆಳಿಗ್ಗೆ 10ಕ್ಕೆ ನೇರವಾಗಿ ಹೋಗಿದ್ದು ಮಧೂರು ಗ್ರಾಮ ಪಂಚಾಯತ್ ನಲ್ಲಿರುವ ಅನ್ವಯಿಕ ಚರ್ಮರೋಗ ಸಂಸ್ಥೆಗೆ. ಇವರು ನೀಡಿದ ದೇಣಿಗೆ ಹೇಗೆ ವಿನಿಯೋಗವಾಗಿದೆ ಎಂಬ ಪವರ್ ಪಾಯಿಂಟ್ ಪ್ರಸ್ತುತಿಯೊಂದಿಗೆ ಏಳು ಮಂದಿ ತಜ್ಞ ವೈದ್ಯರ ತಂಡ ಇವರಿಗಾಗಿ ಕಾಯುತ್ತಿತ್ತು.

ಸುಧಾ ಜನಾರ್ದನ್ 2019-20ರಲ್ಲಿ ಈ ಸಂಸ್ಥೆಗೆ 16 ಲಕ್ಷ ದೇಣಿಗೆ ನೀಡಿದ್ದರು. "ಇವರು ಹತ್ತು ವರ್ಷಗಳಿಂದ ನಮ್ಮ ಸಂಸ್ಥೆಗೆ ಸುಮಾರು 80 ಲಕ್ಷ ದೇಣಿಗೆ ನೀಡಿದ್ದಾರೆ" ಎಂದು 1999ರಲ್ಲಿ ಈ ಕೇಂದ್ರವನ್ನು ಆರಂಭಿಸಿದ ವೈದ್ಯ ಸರವು ಆರ್.ನರಹರಿ ವಿವರಿಸಿದರು. 2018-19ರಲ್ಲಿ ಸುಧಾ ನೀಡಿದ 15 ಲಕ್ಷ ದೇಣಿಗೆಯಿಂದಾಗಿ 236 ರೋಗಿಗಳಿಗೆ ಎಐಡಿ ಕೇಂದ್ರದಲ್ಲಿ ಉಚಿತ ಚಿಕಿತ್ಸೆ ನೀಡಲಾಗಿದೆ. ಕಳೆದ ವರ್ಷ 16 ಲಕ್ಷ ವೆಚ್ಚದಲ್ಲಿ 193 ರೋಗಿಗಳು ಉಚಿತ ಚಿಕಿತ್ಸ ಪಡೆದಿದ್ದಾರೆ. ಈ ವರ್ಷ ಫಲಾನುಭವಿಗಳ ಸಂಖ್ಯೆ ಇಳಿಕೆಯಾದದ್ದು ಹೇಗೆ ಎಂದು ತಿಳಿಯಬೇಕಿತ್ತು. ಬಹುಶಃ ಹಣದುಬ್ಬರ ಹಾಗೂ ಚಿಕಿತ್ಸಾ ವಿಧಾನದಲ್ಲಿನ ಬದಲಾವಣೆ ಕಾರಣ ಇರಬಹುದು ಎಂಬ ಅಭಿಪ್ರಾಯಕ್ಕೆ ಪ್ರಾಯೋಜಕತ್ವ ವಿಶ್ಲೇಷಣೆಯನ್ನು ವೀಕ್ಷಿಸಿದರು. ಪ್ರಸ್ತುತಿ ವೀಕ್ಷಿಸಿದ ಬಳಿಕ ತಮ್ಮ ಪತಿ, ಲೆಕ್ಕಪರಿಶೋಧಕ ದಿ. ಜನಾರ್ದನ್ ನೆನಪಿನಲ್ಲಿ 20 ಲಕ್ಷ ರೂ.ಗಳ ದತ್ತಿ ನಿಧಿಯನ್ನು ಮುಂದಿನ ವರ್ಷಕ್ಕಾಗಿ ಘೋಷಿಸಿದರು.

ಮದನಂತೇಶ್ವರ ದೇವಾಲಯದಿಂದಾಗಿ ಖ್ಯಾತಿ ಪಡೆದಿರುವ ಈ ಪುಟ್ಟ ಗ್ರಾಮ ಇದೀಗ ವಿಶ್ವ ವೈದ್ಯಕೀಯ ಭೂಪಟದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಆಯುರ್ವೇದ, ಯೋಗ ಮತ್ತು ಅಲೋಪಥಿ ವೈದ್ಯ ಪದ್ಧತಿಯನ್ನು ಬಳಸಿಕೊಂಡು ಇಲ್ಲಿ ಆನೆಕಾಲು ರೋಗ (ಫಿಲಾರಿಯಾಸಿಸ್)ಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ರೋಗವನ್ನು ನಿರ್ಲಕ್ಷಿತ ಬಡವರ ರೋಗ ಎಂದು ಪರಿಗಣಿಸಿದೆ.

ಎರಡೂವರೆ ದಶಕಗಳಿಂದ ಈ ಸಮಸ್ಯೆಯಿಂದ ಬಳಲುತ್ತಿದ್ದ ಕುಟುಂಬದ ಸದಸ್ಯರೊಬ್ಬರು ಇಲ್ಲಿ ಚಿಕಿತ್ಸೆ ಪಡೆದು ಇದೀಗ ಸಹಜ ಜೀವನ ನಡೆಸುತ್ತಿರುವುದನ್ನು ಅವರು ಉಲ್ಲೇಖಿಸಿದರು. ಹಣ ನೀಡುವುದು ಸುಲಭ; ಆದರೆ ಅದರಲ್ಲಿ ವೈದ್ಯರು ಏನು ಮಾಡುತ್ತಾರೆ ಎನ್ನುವುದು ನಿಜಕ್ಕೂ ನಂಬಲಸಾಧ್ಯ ಕಥಾನಕ ಎಂದು ಅವರು ಬಣ್ಣಿಸುತ್ತಾರೆ. ಇವರ ಪ್ರಾಯೋಜಕತ್ವಲ್ಲಿ ನೂರಾರು ಮಂದಿ ಸೋರಿಯಾಸಿಸ್, ತೊನ್ನು, ಹುಣ್ಣು, ಗುಣವಾಗದ ಕಜ್ಜಿ (ಲಿಚೆನ್ ಪ್ಲಾನುಸ್), ನರವಲಿಯಂಥ ಚರ್ಮರೋಗಗಳಿಗೆ ಚಿಕಿತ್ಸೆ ಪಡೆದಿದ್ದಾರೆ.

ವೃತ್ತಿಯಲ್ಲಿ ಲೆಕ್ಕಪರಿಶೋಧಕರಾಗಿದ್ದ ಇವರ ಪತಿ ಜನಾರ್ದನ್ 2001ರ ಎ. 16ರಂದು 53ನೇ ವಯಸ್ಸಿನಲ್ಲಿ ಮೃತಪಟ್ಟರು. ಇದಾದ ಬಳಿಕ 19 ವರ್ಷಗಳಲ್ಲಿ ಸುಧಾ 17 ಕೋಟಿ ರೂ. ಸೇವಾ ಕಾರ್ಯಗಳಿಗೆ ದೇಣಿಗೆಯಾಗಿ ನೀಡಿದ್ದಾರೆ.

ದೊಡ್ಡದಾದ ಸ್ವಂತ ಮನೆ ಬಿಟ್ಟು ಪುಟ್ಟ ಬಾಡಿಗೆ ಮನೆಯಲ್ಲಿ ಇದೀಗ ಜೀವನ ಸಾಗಿಸುತ್ತಿರುವ ಸುಧಾ, "ಪತಿ ಸಾಯುವ ಮುನ್ನ ಏನು ಹೇಳಿದ್ದರೋ ಅದನ್ನು ನಾನು ಮಾಡುತ್ತಾ ಬಂದಿದ್ದೇನೆ. ನನಗೂ ವಯಸ್ಸಾಗುತ್ತಿದೆ. ಅಷ್ಟು ದೊಡ್ಡ ಮನೆ ಬೇಡ ಎಂಬ ಕಾರಣಕ್ಕೆ ಪುಟ್ಟ ಬಾಡಿಗೆ ಮನೆಗೆ ಬಂದಿದ್ದೇನೆ" ಎಂದು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News