ಈ ಕುಖ್ಯಾತ ವ್ಯಕ್ತಿಯ 112 ವಿಲಾಸಿ ವಸ್ತುಗಳು ಹರಾಜಿಗಿವೆ !

Update: 2020-02-20 05:04 GMT

ಹೊಸದಿಲ್ಲಿ, ಫೆ.20: ವಜ್ರದ ವ್ಯಾಪಾರಿ ನೀರವ್ ಮೋದಿಯಿಂದ ವಶಪಡಿಸಿಕೊಂಡ 112 ವಿಲಾಸಿ ವಸ್ತುಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್ ವಿಧಾನದ ಮೂಲಕ ಹರಾಜು ಮಾಡಲು ಕಾನೂನು ಜಾರಿ ನಿರ್ದೇಶನಾಲಯ ನಿರ್ಧರಿಸಿದೆ. ಇದಕ್ಕಾಗಿ ಆಂತರಿಕ ಹರಾಜುಗೃಹ ವ್ಯವಸ್ಥೆ ಮಾಡಿದೆ.

ರೋಲ್ಸ್ ರಾಯ್ಸ್ ಗೋಸ್ಟ್ ಕಾರು, ವಿಲಾಸಿ ಚಿಲ್ಲರೆ ಮಾರಾಟ ಸಂಸ್ಥೆ ಹೆರ್ಮಿಸ್‌ನ ವಿಲಾಸಿ ಬ್ಯಾಗ್‌ಗಳು, ಎಂ.ಎಫ್.ಹುಸೇನ್, ಅಮೃತಾ ಶೇರ್‌ಗಿಲ್, ವಿ.ಎಸ್.ಗಾಯಿತೊಂಡೆ ಮತ್ತು ಇತರ ಆಧುನಿಕ ಕಲಾವಿದರ ಕಲಾಚಿತ್ರಗಳು ಹರಾಜಿಗಿವೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿನ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮೋದಿ (48) ಬ್ರಿಟನ್‌ನಿಂದ ಭಾರತಕ್ಕೆ ಗಡೀಪಾರಾಗುವ ಭೀತಿ ಎದುರಿಸುತ್ತಿದ್ದು, ಸದ್ಯಕ್ಕೆ ನೈರುತ್ಯ ಲಂಡನ್‌ನ ವಂಡ್ಸ್‌ವರ್ತ್ ಕಾರಾಗೃಹದಲ್ಲಿದ್ದಾರೆ.

ಸ್ಯಾಫ್ರಾನಾರ್ಟ್ ಹರಾಜುಗೃಹದಲ್ಲಿ ಫೆಬ್ರವರಿ 27ರಂದು ಹರಾಜು ನಡೆಯಲಿದೆ. ಆನ್‌ಲೈನ್ ಹರಾಜು ಮಾರ್ಚ್ 3 ಹಾಗೂ 4ರಂದು ನಡೆಯಲಿದೆ. ಒಂದು ವರ್ಷ ಮೊದಲು ಆದಾಯ ತೆರಿಗೆ ಇಲಾಖೆಯ ಪರವಾಗಿ ಸ್ಯಾಫ್ರಾನಾರ್ಟ್, ಮೋದಿಯಿಂದ ವಶಪಡಿಸಿಕೊಂಡ 68 ಕಲಾಚಿತ್ರಗಳನ್ನು ಹರಾಜು ಮಾಡಿ 55.84 ಕೋಟಿ ಪೌಂಡ್ ಆದಾಯ ಗಳಿಸಿತ್ತು.

ಮೋದಿಯಿಂದ ವಶಪಡಿಸಿಕೊಂಡ 112 ವಸ್ತುಗಳ ಹರಾಜು ಇದೀಗ ನಡೆಯಲಿದೆ. ಆಧುನಿಕ ಖ್ಯಾತ ಕಲಾವಿದರ ಪ್ರಮುಖ ಕಲಾಚಿತ್ರಗಳು, ಚಾನೆಲ್, ಹೆರ್ಮಿಸ್, ಲೂಯಿ ವಿಟಾನ್ ಹಾಗೂ ಸೆಲೈನ್‌ನಂಥ ಕಂಪನಿಗಳ ವಿಲಾಸಿ ಹ್ಯಾಂಡ್‌ಬ್ಯಾಗ್‌ಗಳು, ಕಾರ್ಟಿಯರ್ ಅಸಿಮೆಟ್ರಿಕ್ ’ಕ್ರಾಷ್’ ವಾಚು ಮತ್ತು ಪೋರ್ಶ್ ಪನಮೆರಾ ಕಾರು ಸೇರಿದೆ.

ರಾಜಾ ರವಿವರ್ಮಾ ರಚಿಸಿದ ಮಹಿಳೆಯೊಬ್ಬರ ಭಾವಚಿತ್ರ ‘ಆಯಿಲ್ ಆನ್ ಕ್ಯಾನ್ವಾಸ್’ 2ರಿಂದ 3 ಕೋಟಿ ಪೌಂಡ್ ಗಳಿಸುವ ನಿರೀಕ್ಷೆ ಇದೆ. ಶೇರ್‌ಗಿಲ್ ಅವರ ‘ಬಾಯ್ಸ್ ವಿದ್ ಲೆಮನ್ಸ್’ ಚಿತ್ರ 12ರಿಂದ 18 ಕೋಟಿ ಪೌಂಡ್‌ಗೆ ಬಿಕರಿಯಾಗುವ ನಿರೀಕ್ಷೆ ಇದೆ ಎಂದು ಸ್ಯಾಫ್ರಾನಾರ್ಟ್ ಪ್ರಕಟನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News