ಭಾರತದ ಕೃಷಿಕರ ವರಮಾನಕ್ಕೆ ಕೈ ಹಾಕಬೇಡಿ: ಕರ್ನಾಟಕ ಕಿಸಾನ್ ಕಾಂಗ್ರೆಸ್ ನಿಂದ ಪ್ರಧಾನಿಗೆ ಬಹಿರಂಗ ಪತ್ರ

Update: 2020-02-20 05:37 GMT

ಬೆಂಗಳೂರು, ಫೆ.20: ಭಾರತಕ್ಕೆ ಭೇಟಿ ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಭಾರತ ಪಶುಡೈರಿ ಹಾಗು ಕೋಳಿ ಸಾಕಣೆ ಮಾರುಕಟ್ಟೆ ಉದ್ಯಮದ ಒಪ್ಪಂದವನ್ನು ಮಾಡಿಕೊಳ್ಳುವುದಕ್ಕೆ ಕರ್ನಾಟಕ ಕಿಸಾನ್ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಈ ವಿಚಾರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರ ಬರೆದಿರುವ ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ, ಭಾರತದ ರೈತರ ಕೊರಳಿಗೆ ನೇಣು ಕುಣಿಕೆ ಹಾಕಲು ಹೊರಟಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಈ ಜನವಿರೋಧಿ ನೀತಿಯ ಒಪ್ಪಂದವನ್ನು ಕಿಸಾನ್ ಕಾಂಗ್ರೆಸ್ ನ ವಿರೋಧವಿದೆ. ರೈತರ ಮರಣಶಾಸನ ಒಪ್ಪಂದಕ್ಕೆ ಸಹಿ ಹಾಕದಂತೆ  ರೈತರ ಪರವಾಗಿ ಮನವಿ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕರ್ನಾಟಕ ಕಿಸಾನ್ ಕಾಂಗ್ರೆಸ್ ಪ್ರಧಾನಿಗೆ ಬರೆದಿರುವ ಬಹಿರಂಗ ಪತ್ರ ಹೀಗಿದೆ…

 ಮಾನ್ಯ ಪ್ರಧಾನಿಮಂತ್ರಿಯವರೇ,

ಭಾರತದ ಮಾರುಕಟ್ಟೆಗೆ ಅಮೆರಿಕದ ಪಶು ಡೈರಿ ಹಾಗು ಕೋಳಿ ಸಾಕಣೆ ಮಾರುಕಟ್ಟೆ ಉದ್ಯಮ ಕಾಲಿಡುವುದು ಬೇಡ. ಕರ್ನಾಟಕ ಕಿಸಾನ್ ಕಾಂಗ್ರೆಸ್ ತಮ್ಮಲ್ಲಿ ರೈತರ ಪರವಾಗಿ ಕೇಳಿಕೊಳ್ಳುವುದೇನೆಂದರೆ ಭಾರತದಲ್ಲಿ ಅಮೆರಿಕದ ಪಶುಡೈರಿ ಹಾಗು ಕೋಳಿ ಸಾಕಣೆ ಮಾರುಕಟ್ಟೆ ಉದ್ಯಮದ ಪ್ರವೇಶದ ನಿಮ್ಮ (ಪ್ರಧಾನಿ ನರೇಂದ್ರ ಮೋದಿಯವರ) ನಿರ್ಧಾರವನ್ನು ವಿರೋಧಿಸುತ್ತೇವೆ. ಫೆಬ್ರವರಿ 24 ಹಾಗು 25ರಂದು ಭಾರತಕ್ಕೆ ಭೇಟಿ ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ತಾವು ಸಹಿ ಹಾಕಲು ಉದ್ದೇಶಿಸಿರುವ ಪಶುಡೈರಿ ಹಾಗು ಕೋಳಿ ಸಾಕಣೆ ಮಾರುಕಟ್ಟೆ ಉದ್ಯಮದ ಒಪ್ಪಂದವನ್ನು ಕರ್ನಾಟಕ ಕಿಸಾನ್ ಕಾಂಗ್ರೆಸ್ ಸಂಪೂರ್ಣವಾಗಿ ವಿರೋಧ ಮಾಡುತ್ತದೆ.

ಭಾರತದಲ್ಲಿ ಪ್ರತಿ ವರ್ಷಕ್ಕೆ ಹಾಲಿನ ಉತ್ಪನ್ನಗಳು, ಪೌಟ್ರಿ ಹಾಗು ಇತರ ಪದಾರ್ಥಗಳನ್ನು ಹೊರಗಡೆಯಿಂದ ಆಮದು ಮಾಡಿಕೊಳ್ಳಲು ಉದ್ದೇಶದಿಂದ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಒಪ್ಪಂದಕ್ಕೆ ತಮ್ಮ ನೇತೃತ್ವದ ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಇದರ ಮೌಲ್ಯ ನಲವತ್ತೆರಡು ಸಾವಿರ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಭಾರತದ ಸುಮಾರು ಹತ್ತು ಕೋಟಿ ರೈತರು ಈ ವಲಯದ ಮೇಲೆ ಅವಲಂಬಿತರಾಗಿದ್ದಾರೆ. ಅವರೆಲ್ಲರೂ ಸಹ ಮಹಿಳೆಯರು, ಬಡ ಹಾಗು ಮಧ್ಯಮ ವರ್ಗದ ರೈತರು. ಡೇರಿ ಉತ್ಪನ್ನ ಹಾಗು ಪಶು ಸಾಕಣೆ  ಕೋಳಿ ಸಾಕಣೆ ಮೇಲೆ ಜೀವನ ನಿರ್ವಹಣೆ ಮಾಡುತ್ತಿರುವ ಇಷ್ಟು ಕೃಷಿಕರ ಮೇಲೆ ಕೇಂದ್ರ ಸರ್ಕಾರ ಸಹಿ ಹಾಕಲು ಉದ್ದೇಶಿಸಿರುವ ಒಪ್ಪಂದ ಘೋರ ಪರಿಣಾಮ ಬೀರಿ ಅವರ ಬದುಕು ಕಷ್ಟಕರವಾಗಲಿದೆ.

ಹಣ್ಣುಗಳಾದ ಸೇಬು, ಬ್ಲೂಬೆರ್ರಿ, ಚೆರ್ರಿ, ಬೆಳೆಗಳಾದ ಸೋಯಾಬೀನ್, ಗೋಧಿ, ಜೋಳ, ಭತ್ತದ ಮೇಲಿನ ಬೇರೆ ದೇಶದಿಂದ ಆಮದು ಮಾಡಿಕೊಳ್ಳುವಾಗ ಆ ದೇಶ ಕಟ್ಟುವ ತೆರಿಗೆಯನ್ನು ಶೇಕಡ ನೂರರಿಂದ ಶೇಕಡ ಹತ್ತಕ್ಕೆ ಇಳಿಸುವ ನಿಮ್ಮ ನೇತೃತ್ವದ ಕೇಂದ್ರ ಸರ್ಕಾರದ ಈ ಒಪ್ಪಂದ ನಮ್ಮ ದೇಶದ ರೈತರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಪ್ರಾದೇಶಿಕ ಸಹಭಾಗಿತ್ವ ಒಪ್ಪಂದಕ್ಕಿಂತ ಘೋರವಾದ ಒಪ್ಪಂದವನ್ನು ತಮ್ಮ (ನರೇಂದ್ರ ಮೋದಿ) ನೇತೃತ್ವದ ಸರ್ಕಾರ ಮಾಡಲು ಹೊರಟಿದೆ.

ಭಾರತದಲ್ಲಿ ಡೈರಿ ಕೋಳಿ ಸಾಕಣೆ ಉತ್ಪನ್ನದ ಮೇಲೆ ಹತ್ತು ಕೋಟಿ ರೈತರು ಅವಲಂಬಿತವಾಗಿದ್ದಾರೆ. ಇದರಿಂದ ಸಹಕಾರ ಕ್ಷೇತ್ರದ ಆಧಾರದಲ್ಲಿ 71 ಶೇ.  ಹಾಲಿನ ಹಣ ರೈತರಿಗೆ ವಾಪಸ್ ಹೋಗುತ್ತದೆ. ಈಗ ಭಾರತ ಈ ಒಪ್ಪಂದ ಮಾಡಿಕೊಂಡರೆ ಅಮೆರಿಕದಿಂದ ಈಗ ಆಮದಿಗೆ ಇರುವ 64 ಶೇ. ತೆರಿಗೆಯನ್ನು ಕೇಂದ್ರ ಸರ್ಕಾರ ಕೈ ಬಿಟ್ಟರೆ ಅಮೆರಿಕ ನೇರವಾಗಿ ನಮ್ಮ ದೇಶದ ಡೈರಿ ಕೋಳಿ ಸಾಕಣೆ ಮಾರುಕಟ್ಟೆಯನ್ನು ವಶಮಾಡಿಕೊಳ್ಳುತ್ತದೆ.

ಭಾರತದಲ್ಲಿ ಕುಕ್ಕುಟೋದ್ಯಮ/ಪೌಟ್ರಿ ಉದ್ಯಮ 4.8 ಕೋಟಿ ಜನಕ್ಕೆ ಜೀವನಾಧಾರವಾಗಿದೆ. ಎಂಬತ್ತು ಸಾವಿರ ಕೋಟಿ ವಾರ್ಷಿಕ ವಹಿವಾಟು ಈ ಕ್ಷೇತ್ರದಲ್ಲಿ ನಡೆಯುತ್ತದೆ. ಇದೀಗ ಅಮೆರಿಕಾದಿಂದ ಪೌಟ್ರಿ ನಮ್ಮ ಭಾರತದ ಮಾರುಕಟ್ಟೆ ಪ್ರವೇಶ ಆದಲ್ಲಿ ಇಷ್ಟು ಕೋಟಿ ಕೋಟಿ ಜನರ ಬದುಕು ಬರಡಾಗುತ್ತದೆ.

ಅಮೆರಿಕಾ ದೇಶದ ಲಾಭಕ್ಕೆ ನಮ್ಮ ದೇಶದ ಹೈನುಗಾರಿಕೆಯ ಮೇಲೆ ಅವಲಂಬಿತರಾಗಿರುವ ಜನರ ಬದುಕನ್ನು ತಾವು (ನರೇಂದ್ರ ಮೋದಿ) ತಮ್ಮ ನೇತೃತ್ವದ ಕೇಂದ್ರ ಸರ್ಕಾರ ಒಪ್ಪಂದಕ್ಕೆ ಹೊರಟರೆ ಶೇ.85ರಷ್ಟು ಜನರ ಬದುಕು ದುಸ್ತರವಾಗುತ್ತದೆ.

ಅಮೆರಿಕದ ಅಧ್ಯಕ್ಷೀಯ ಚುನಾವಣಾ ವರ್ಷವಾದ ಈ ವರ್ಷದಲ್ಲಿ  ಡೊನಾಲ್ಡ್ ಟ್ರಂಪ್ ಹೆಚ್ಚು ವಸ್ತುಗಳನ್ನು ಬೇರೆ ದೇಶಗಳಿಗೆ ರಫ್ತ್ತು ಮಾಡಿ ಜನಮನ್ನಣೆ ಗಳಿಸಲು ಹೂಡಿರುವ ತಂತ್ರಕ್ಕೆ ತಾವು( ನರೇಂದ್ರ ಮೋದಿ) ಭಾರತದ ರೈತರ ಕೊರಳಿಗೆ ನೇಣು ಕುಣಿಕೆ ಹಾಕಲು ಹೊರಟಿರುವುದನ್ನು ಒಪ್ಪಲು ಸಾಧ್ಯವಿಲ್ಲ. ನಮ್ಮ ದೇಶಕ್ಕೆ ಮಾರಕವಾಗುವ ಇಂತಹ ಒಪ್ಪಂದವನ್ನು ವಿರೋಧಿಸುವ ಮೂಲಕ ರೈತರ ಹಿತ ಕಾಪಾಡಲು ಕರ್ನಾಟಕ ಕಿಸಾನ್ ಕಾಂಗ್ರೆಸ್ ಪಣ ತೊಡುತ್ತಿದೆ. ಕೇಂದ್ರ ಸರ್ಕಾರದ ಈ ಜನವಿರೋಧಿ ನೀತಿಯ ಒಪ್ಪಂದವನ್ನು ವಿರೋಧಿಸಲು ಕಟಿಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಈ ರೈತರ ಮರಣಶಾಸನ ಒಪ್ಪಂದಕ್ಕೆ ಸಹಿ ಹಾಕದಂತೆ  ರೈತರ ಪರವಾಗಿ ಮನವಿಮಾಡಿಕೊಳ್ಳುತ್ತೇನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News