ನಕಲಿಯಿಂದ ಮಹಾ ನಕಲಿಗೆ ಭಡ್ತಿ: ದಿಲ್ಲಿ ಚುನಾವಣೆ ಪ್ರಚಾರಕ್ಕೆ ಬಿಜೆಪಿ ಬಳಸಿತ್ತು ಡೀಪ್‌ಫೇಕ್ ವಿಡಿಯೋ !

Update: 2020-02-20 07:31 GMT

ಹೊಸದಿಲ್ಲಿ, ಫೆ.20: ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಲ್ಲಿನ ಬಿಜೆಪಿ ಘಟಕದ ನಾಯಕ ಮನೋಜ್ ತಿವಾರಿ ಅವರ ಎರಡು ಡೀಪ್‌ಫೇಕ್ ವೀಡಿಯೋಗಳನ್ನು ಪಕ್ಷವು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಬಳಸಿ ಸೃಷ್ಟಿಸಿ ವಾಟ್ಸ್ಯಾಪ್‌ನಲ್ಲಿ ಶೇರ್ ಮಾಡಿತ್ತೆಂಬ ಅಂಶ ಬಹಿರಂಗಗೊಂಡಿದೆ. ತಿವಾರಿ ಅವರು ಎರಡು ವಿಭಿನ್ನ ಮತದಾರರ ಗುಂಪುಗಳಿಗೆ ಮನವಿ ಮಾಡುವ ವೇಳೆ ಎರಡು ಭಾಷೆಗಳಲ್ಲಿ ಮಾತನಾಡುತ್ತಿರುವಂತೆ ತೋರಿಸುವ ತಿರುಚಿದ ವೀಡಿಯೋವನ್ನು ಪಕ್ಷ ಸೃಷ್ಟಿಸಿತ್ತು.

ತಿರುಚಲ್ಪಟ್ಟ ವೀಡಿಯೋಗಳು ನೈಜ ವೀಡಿಯೋಗಳಂತೆ ಕಾಣಲು ಡೀಪ್‌ಫೇಕ್‌ಗಳು ಕೃತಕ ಬುದ್ಧಿಮತ್ತೆ ಬಳಸುತ್ತವೆ ಹಾಗೂ ಅದನ್ನು ಸೃಷ್ಟಿಸಿದವರಿಗೆ ಬೇಕಾದ ರೀತಿಯಲ್ಲಿ ಮಾತುಗಳನ್ನು ಸೇರಿಸಲಾಗುತ್ತದೆ.

'ವೈಸ್ ನ್ಯೂಸ್' ವೆಬ್ ಸೈಟ್ ತಿವಾರಿ ಅವರ 44 ಸೆಕೆಂಡ್‌ಗಳ ವೀಡಿಯೋವೊಂದನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಬಿಜೆಪಿ ಡೀಪ್‌ಫೇಕ್ ವೀಡಿಯೋ ಸೃಷ್ಟಿಸಿದೆಯೆಂಬುದು ಬಹಿರಂಗಗೊಂಡಿದೆ.

ಒಂದು ವೀಡಿಯೋದಲ್ಲಿ ತಿವಾರಿ ಹರ್ಯಾಣ್ವಿ ಭಾಷೆಯಲ್ಲಿ ಮಾತನಾಡಿ ದಿಲ್ಲಿ ಸಿಎಂ ಕೇಜ್ರಿವಾಲ್ ನೀಡಿರುವ ಆಶ್ವಾಸನೆಗಳನ್ನು ಟೀಕಿಸುತ್ತಿದ್ದರೆ, ಮೂಲ ವೀಡಿಯೋದಲ್ಲಿ ಅವರು ಅದೇ ಮಾತುಗಳನ್ನು ಹಿಂದಿಯಲ್ಲಿ ಆಡಿದ್ದಾರೆ. ಎಲ್ಲವೂ ಮೂಲ ವೀಡಿಯೋದಲ್ಲಿದ್ದಂತೆಯೇ ಇದ್ದರೂ ಮುಖದಲ್ಲಿನ ಭಾವನೆಗಳ ಅಭಿವ್ಯಕ್ತಿ ಹಾಗೂ ಅವರು ಆಡುತ್ತಿರುವ ಭಾಷೆಯಂತೆಯೇ ಅವರ ತುಟಿಗಳ ಚಲನೆ ಡೀಪ್‌ಫೇಕ್ ವೀಡಿಯೋದಲ್ಲಿ ಕಾಣಿಸುತ್ತದೆ.

ಈ ವೀಡಿಯೋಗಳನ್ನು ಸುಮಾರು 5,800 ವಾಟ್ಸ್ಯಾಪ್ ಗ್ರೂಪ್‌ಗಳಲ್ಲಿ ಶೇರ್ ಮಾಡಲಾಗಿತ್ತು ಎಂದು ಬಿಜೆಪಿ ಹೇಳುತ್ತಿದೆ. ಇಂತಹ ವೀಡಿಯೋ ಸೃಷ್ಟಿಸಲು ಯಾರಿಗೂ ಗುತ್ತಿಗೆ ನೀಡಿಲ್ಲ ಹಾಗೂ ಯಾವ ಕಂಪೆನಿ ಇದನ್ನು ಸೃಷ್ಟಿಸಿದೆ ಎಂದು ತಿಳಿದಿಲ್ಲ ಎಂದು ದಿಲ್ಲಿ ಬಿಜೆಪಿ ಘಟಕದ ಮಾಧ್ಯಮ ಉಸ್ತುವಾರಿ ನೀಲಕಾಂತ್ ಬಕ್ಷಿ ಹೇಳುತ್ತಾರೆ. ಆದರೆ ಮೂಲಗಳ ಪ್ರಕಾರ ಚಂಡೀಗಢ ಮೂಲದ ಐಡಿಯಾರ್ ಫ್ಯಾಕ್ಟರಿ ಈ ಡೀಪ್‌ಫೇಕ್ ವೀಡಿಯೋ ಸೃಷ್ಟಿಸಿದೆ. ಆದರೆ ಸಂಸ್ಥೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News