ಪೌರತ್ವದ ಆಧಾರ ಕೇಳಿದ ಆಧಾರ್!

Update: 2020-02-21 06:11 GMT

ಸಿಎಎ-ಎನ್‌ಆರ್‌ಸಿಯ ಪರಿಣಾಮ ಎಷ್ಟು ಕ್ರೂರವಾಗಿರುತ್ತದೆ ಎನ್ನುವುದರ ಸಣ್ಣ ಝಲಕ್ ಹೈದರಾಬಾದ್‌ನಲ್ಲಿ ನಡೆದಿದೆ. ಆಧಾರ್ ಕಾರ್ಡ್ ಭಾರತೀಯರ ದೈನಂದಿನ ಬದುಕಿಗೆ ಅನಿವಾರ್ಯ ಎಂದು ಸರಕಾರ ಘೋಷಣೆ ಮಾಡಿದ ಬಳಿಕ ಜನಸಾಮಾನ್ಯರು ಕಚೇರಿಯಿಂದ ಕಚೇರಿಗೆ ಅಲೆದಾಡಿ ಆ ಕಾರ್ಡ್‌ನ್ನು ತನ್ನದಾಗಿಸಿಕೊಂಡು ನೆಮ್ಮದಿಯ ಉಸಿರು ಬಿಡಬೇಕು ಎನ್ನುವಷ್ಟರಲ್ಲಿ, ಹೈದರಾಬಾದ್‌ನಲ್ಲಿ ವಿಲಕ್ಷಣ ಪ್ರಕರಣವೊಂದು ವರದಿಯಾಗಿದೆ. ‘ತಾವು ಅಕ್ರಮ ವಲಸಿಗರಲ್ಲ ಹಾಗೂ ಕಾನೂನುಬದ್ಧವಾದ ದಾಖಲೆಗಳ ಮೂಲಕ ಆಧಾರ್ ಸಂಖ್ಯೆಯನ್ನು ಪಡೆದಿದ್ದೇವೆ’ ಎಂಬುದನ್ನು ಸಾಬೀತು ಪಡಿಸುವಂತೆ ಸೂಚಿಸಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು (ಯುಐಡಿಎಐ) ಹೈದರಾಬಾದ್ ನಗರದ 120ಕ್ಕೂ ಅಧಿಕ ಮಂದಿಗೆ ನೋಟಿಸ್ ಜಾರಿಗೊಳಿಸಿದೆ. ಇದೇ ಸಂದರ್ಭದಲ್ಲಿ ಈ ನೋಟಿಸ್‌ಗೂ ಪೌರತ್ವ ಕಾಯ್ದೆಗೂ ಯಾವುದೇ ಸಂಬಂಧವಿಲ್ಲ ಎಂದೂ ಯುಐಎಡಿಐ ಸ್ಪಷ್ಟಪಡಿಸಿದೆ.

ಪೌರತ್ವವನ್ನು ಸಾಬೀತು ಪಡಿಸಿ ಎಂದು ಕೇಳಿರುವವರಲ್ಲಿ ಒಬ್ಬರು ಹೈದರಾಬಾದ್‌ನ ಹಳೆನಗರ ಪ್ರದೇಶದ ನಿವಾಸಿ ಮುಹಮ್ಮದ್ ಸತ್ತಾರ್. ಸುಳ್ಳು ದಾಖಲೆಗಳನ್ನು ನೀಡಿ ಮುಹಮ್ಮದ್ ಸತ್ತಾರ್ ಆಧಾರ್ ಪಡೆದು ಕೊಂಡಿದ್ದಾರೆ ಹಾಗೂ ಅವರು ಭಾರತೀಯನಲ್ಲವೆಂಬ ಆರೋಪಿಸಿ ದೂರೊಂದು ಬಂದಿರುವ ಹಿನ್ನೆಲೆಯಲ್ಲಿ ಅವರಿಗೆ ಈ ಯುಐಡಿಎಐ ನೋಟಿಸ್ ಜಾರಿಗೊಳಿಸಿದೆ ಎಂದು ತಿಳಿದುಬಂದಿದೆ. ಇದರ ಜೊತೆ ಜೊತೆಗೇ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹೈದರಾಬಾದ್‌ನ 127 ಮಂದಿ ಸ್ಥಳೀಯರು ಆಧಾರ್ ಸಂಖ್ಯೆಗಳನ್ನು ಪಡೆದುಕೊಂಡಿರುವುದಾಗಿ ತಮಗೆ ವರದಿಗಳು ಬಂದಿವೆ, ಅವರು ಅಕ್ರಮ ವಲಸಿಗರೇ ಎಂಬುದನ್ನು ಕಂಡುಹಿಡಿಯಲು ಕಾನೂನು ಜಾರಿ ನಿರ್ದೇಶನಾಲಯವು ಪ್ರಾಥಮಿಕ ತನಿಖೆಗೆ ಆದೇಶಿಸಿದೆ ಎಂದು ಯುಐಡಿಎಐ ಸೋಮವಾರ ರಾತ್ರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.ವ್ಯಕ್ತಿಯ ಪೌರತ್ವವನ್ನು ದೃಢಪಡಿಸುವ ಹೊಣೆಗಾರಿಕೆ ತನ್ನದಲ್ಲವೆಂದು ಯುಐಡಿಎಐ ಹೇಳಿಕೊಂಡಿದೆಯಾದರೂ, ಅಕ್ರಮವಲಸಿಗರು ಆಧಾರ್ ಸಂಖ್ಯೆಯನ್ನು ಪಡೆಯಲಾಗದು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ ಎಂದು ಅದು ಈ ನೋಟಿಸ್‌ನಲ್ಲಿ ತಿಳಿಸಿದೆ. ಇದೀಗ ಯುಐಡಿಎಐಗೆ ಬೇಕಾಗಿರುವುದು ಏನು? ಆಧಾರ್‌ಗಾಗಿ ಅವರು ಒದಗಿಸಿದ ದಾಖಲೆಯ ಅಸಲಿಯತ್ತೇ ಅಥವಾ ಅವರು ಪೌರರು ಹೌದೋ ಅಲ್ಲವೋ ಎನ್ನುವುದರ ದಾಖಲೆಯೆ?

ಯುಐಡಿಎಐ ನೋಟಿಸ್ ನೀಡಿರುವುದು ಎರಡು ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೊದಲನೆಯದಾಗಿ, ರಾಜ್ಯ ಪೊಲೀಸರ ಮೂಲಕ ಸಲ್ಲಿಕೆಯಾಗಿರುವ ದೂರುಗಳು, ಆಧಾರ್ ಸಂಸ್ಥೆಯ ಪರಿಶೀಲನಾ ಪ್ರಕ್ರಿಯೆಯ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದೆ. 2018ರ ಜೂನ್‌ನಲ್ಲಿ ಸುದ್ದಿ ಜಾಲತಾಣ ‘ದಿ ವೈರ್’ ಪ್ರಕಟಿಸಿದ ವರದಿಯು, ಆ ಸಮಯದಲ್ಲಿ ನೋಂದಣಿಯಾದ ಒಟ್ಟು ಆಧಾರ್‌ಗಳ ಪೈಕಿ ಶೇ. 38ರಷ್ಟವುಗಳಲ್ಲಿ ಗುರುತಿನ ದಾಖಲೆಗಳು (ಗುರುತು, ವಿಳಾಸದ ಪುರಾವೆಗಳು) ಇದ್ದಿಲ್ಲವೆಂಬುದನ್ನು ಬಹಿರಂಗಪಡಿಸಿತ್ತು. ಆಧಾರ್‌ನೊಳಗೆ ನಡೆದಿರುವ ಅಕ್ರಮಗಳ ಬಗ್ಗೆ ಈ ಹಿಂದೆಯೇ ಮಾಧ್ಯಮಗಳು ಮಾತನಾಡಿಕೊಂಡಿದ್ದವು. ಅಂದರೆ ಅಕ್ರಮ ನಡೆಯುವುದರ ಹಿಂದೆ ಆಧಾರ್ ಸಂಸ್ಥೆಯ ವೈಫಲ್ಯವಿದೆ. ಇದೀಗ ತನ್ನದೇ ವೈಫಲ್ಯವನ್ನು ಬಳಸಿಕೊಂಡು ಅಮಾಯಕರನ್ನು ಪ್ರಶ್ನಿಸುವುದಕ್ಕೆ, ಅವರ ಅಸ್ಮಿತೆಯನ್ನು ಸಂಶಯಿಸುವುದಕ್ಕೆ ಯುಐಡಿಎಐ ಹೊರಟಿದೆ.

ಈಗಾಗಲೇ ಚರ್ಚೆಯಲ್ಲಿರುವ ಪೌರತ್ವ ತಿದ್ದುಪಡಿ ಕಾಯ್ದೆಯೊಳಗೆ ಯುಐಡಿಎಐ ಈ ಮೂಲಕ ಮೂಗು ತೂರಿಸಿದೆ. ಅಂದರೆ, ಆಧಾರ್‌ಗೆ ಒದಗಿಸಿರುವುದು ನಕಲಿ ದಾಖಲೆಗಳು ಎಂದು ಅದು ಆತಂಕ ಪಡುತ್ತಿದೆ ಎಂದಾದರೆ ಆ ದಾಖಲೆಗಳ ವಿಶ್ವಾಸಾರ್ಹತೆಯನ್ನಷ್ಟೇ ಪ್ರಶ್ನಿಸಬೇಕಾಗಿತ್ತು. ಅಂದರೆ ನಿಮ್ಮ ದಾಖಲೆಗಳು ಅಸಲಿಯೆನ್ನುವುದನ್ನು ಸಾಬೀತು ಪಡಿಸಿ ಎಂದು ನೋಟಿಸ್ ನೀಡಬಹುದು. ಆದರೆ ಯುಐಡಿಎಐ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ನೀವು ನಿಮ್ಮ ಪೌರತ್ವವನ್ನು ಸಾಬೀತು ಪಡಿಸಿ ಎಂದು ಕೇಳುತ್ತಿದೆ. ಪೌರತ್ವ ಸಾಬೀತಿಗೂ ಯುಐಡಿಎಐಗೂ ಇರುವ ಸಂಬಂಧವೇನು ಎನ್ನುವುದನ್ನು ಅದು ಈವರೆಗೆ ಸ್ಪಷ್ಟಪಡಿಸಿಲ್ಲ. ಎನ್‌ಆರ್‌ಸಿಗೆ ಆಧಾರ್ ಕಾರ್ಡ್ ದಾಖಲೆ ಸಾಕಾಗುವುದಿಲ್ಲ ಎನ್ನುವುದನ್ನು ಈಗಾಗಲೇ ನ್ಯಾಯಾಲಯ ಹೇಳಿದೆ. ಅಂದರೆ, ಯುಐಡಿಎಐ ತನ್ನ ಮಿತಿಯಾಚೆಗೆ ಜನರಲ್ಲಿ ಆತಂಕ, ಅಭದ್ರತೆಯನ್ನು ಉಂಟು ಮಾಡಲು ಯತ್ನಿಸುತ್ತಿದೆ. ಯಾರೋ ದೂರು ನೀಡಿದ ಆರೋಪದಲ್ಲಿ ಯುಐಡಿಎಐ 120ಕ್ಕೂ ಅಧಿಕ ನಿವಾಸಿಗಳಿಗೆ ಪೌರತ್ವ ಸಾಬೀತು ಪಡಿಸಿ ಎಂದು ನೋಟಿಸ್ ಕಳುಹಿಸಬಹುದಾದಲ್ಲಿ, ನಾಳೆ ಈ ಮಾದರಿಯನ್ನು ಇತರ ರಾಜ್ಯದ ಅಧಿಕಾರಿಗಳೂ ಅನುಸರಿಸಿ ಜನರಿಗೆ ಕಿರುಕುಳವನ್ನು ನೀಡಬಹುದಲ್ಲವೇ?

 ಈ ವ್ಯಕ್ತಿಗಳು ಅಕ್ರಮ ವಲಸಿಗರೆಂದು ಶಂಕೆಯಿದ್ದರೂ ಆಧಾರ್‌ನ್ನು ರದ್ದು ಪಡಿಸುವ ಅಧಿಕಾರ ಈ ಸಂಸ್ಥೆಗಿಲ್ಲ. ಒಂದು ವೇಳೆ ಹೈದರಾಬಾದ್‌ನ 127 ನಿವಾಸಿಗಳು ಅಕ್ರಮವಾಗಿ ದೇಶವನ್ನು ಪ್ರವೇಶಿಸಿದ್ದೇ ಹೌದಾದಲ್ಲಿ, ಅದಕ್ಕೆ ಸಂಬಂಧಪಟ್ಟ ಇಲಾಖೆಗಳು ಪ್ರಸಕ್ತ ವಲಸೆ ಕಾನೂನಿನಡಿಯಲ್ಲಿ ಕ್ರಮವನ್ನು ಜರುಗಿಸಬಹುದಾಗಿದೆ. ನಿಸ್ಸಂದೇಹವಾಗಿ ಈ ವಿಷಯವು ಇತ್ಯರ್ಥಗೊಂಡ ಬಳಿಕ ಯುಐಡಿಎಐ ಇವರೆಲ್ಲರ ಆಧಾರ್ ಸಂಖ್ಯೆಗಳನ್ನು ರದ್ದುಪಡಿಸಬಹುದಾಗಿದೆ. ಆಧಾರ್ ನಿಯಮಗಳ ಪ್ರಕಾರ, ಒಂದು ವೇಳೆ ಯಾರಾದರೂ ಆಧಾರ್ ಅನ್ನು ವಂಚನೆಯಿಂದ ಪಡೆದುಕೊಂಡಿದ್ದರೆ, ಅಂತಹವರ ಆಧಾರ್ ಅನ್ನು ಅಸಿಂಧುಗೊಳಿಸಬೇಕಾಗುತ್ತದೆ ಹಾಗೂ ಅವರಿಂದ ಅಸಲಿ ದಾಖಲೆಗಳ ಪುರಾವೆಗಳನ್ನು ನೀಡಬೇಕೆಂದು ಕೇಳಬಹುದೇ ಹೊರತು ಅವರ ಪೌರತ್ವದ ಪುರಾವೆಗಳನ್ನು ಕೇಳಲು ಸಾಧ್ಯವಿಲ್ಲ. ಹೀಗಿರುವಾಗ, ತನ್ನ ಮಿತಿಯನ್ನು ಮೀರಿ ಪೌರತ್ವ ಸಾಬೀತುಗೊಳಿಸಿ ಎನ್ನುವ ಯುಐಡಿಎಐ, ಪೌರತ್ವ ತಿದ್ದುಪಡಿ ಕಾಯ್ದೆಯ ಚರ್ಚೆಗೆ ಇನ್ನೊಂದು ರೂಪ ಕೊಡಲು ಸಂಚು ನಡೆಸುತ್ತಿದೆಯೇ ಎಂದು ಪ್ರಶ್ನಿಸಬೇಕಾಗುತ್ತದೆ.

ಈ ದೇಶಾದ್ಯಂತ ಇನ್ನೂ ಎನ್‌ಆರ್‌ಸಿ ಜಾರಿಗೆ ಬಂದಿಲ್ಲ ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ. ಒಂದು ವೇಳೆ ಎನ್‌ಆರ್‌ಸಿ ಜಾರಿಗೆ ಬಂದರೆ ಅದನ್ನು ಮುಂದಿಟ್ಟುಕೊಂಡು ಈ ದೇಶದ ಅಧಿಕಾರ ವ್ಯವಸ್ಥೆ ಜನಸಾಮಾನ್ಯರಿಗೆ ಯಾವೆಲ್ಲ ರೀತಿಯಲ್ಲಿ ಕಿರುಕುಳವನ್ನು ನೀಡಬಹುದು ಎನ್ನುವುದಕ್ಕೆ ಹೈದರಾಬಾದ್‌ನ ಪ್ರಕರಣ ಉದಾಹರಣೆಯಾಗಿದೆ. ನಾಳೆ ಎನ್‌ಆರ್‌ಸಿಯ ಮೂಲಕ ಪೌರತ್ವ ಸಾಬೀತಾದರೂ, ಯಾರಾದರೂ ನಮ್ಮ ವಿರುದ್ಧ ದೂರು ನೀಡಿದರೆ, ಈ ದೇಶದ ಪ್ರಜೆ ತನ್ನೆಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ದಾಖಲೆ ಹಿಡಿದುಕೊಂಡು ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾಗುತ್ತದೆ.

ಅಷ್ಟೇ ಅಲ್ಲ, ಆಧಾರ್ ಕಾರ್ಡ್‌ನ್ನು ನಂಬಿಕೊಂಡು, ಈ ದೇಶದ ಪೌರತ್ವವನ್ನು ಸುಲಭವಾಗಿ ಸಾಬೀತು ಮಾಡಬಹುದು ಎಂದು ಹುಸಿಯೇ ನಂಬಿಕೊಂಡವರಿಗೂ ಇದೊಂದು ಎಚ್ಚರಿಕೆಯಾಗಿದೆ. ಯಾಕೆಂದರೆ ನಿಮ್ಮ ಆಧಾರ್ ಕಾರ್ಡ್‌ನ ಮಿತಿಯೆಷ್ಟು ಎನ್ನುವುದನ್ನು ಯುಐಡಿಎಐ ಸ್ವತಃ ಹೇಳಿದೆ. ಒಟ್ಟಿನಲ್ಲಿ, ಇನ್ನು ಮುಂದೆ, ಈ ದೇಶದ ಜನರಿಗೆ ಕಂಡ ಕಂಡ ಇಲಾಖೆಗಳಿಂದೆಲ್ಲ ‘ಪೌರತ್ವ ಸಾಬೀತು ಪಡಿಸಿ’ ಎಂದು ನೋಟಿಸ್ ಬಂದರೆ ಅಚ್ಚರಿಯೇನೂಇಲ್ಲ. ನೋಟಿಸ್ ಕಳುಹಿಸಿದವರು ಕಳೆದುಕೊಳ್ಳುವುದೇನೂ ಇಲ್ಲ. ಆದರೆ ನೋಟಿಸ್ ಪಡೆದವರು ಅನುಭವಿಸುವ ಮಾನಸಿಕ ಹಿಂಸೆಗೆ ಪರಿಹಾರವನ್ನು ನೀಡುವವರು ಯಾರು?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News