ಎನ್‌ಆರ್‌ಸಿ, ಸಿಎಎ ಬಗ್ಗೆ ಜನರಿಗೆ ಸ್ಪಷ್ಟವಾದ ಮಾಹಿತಿ ನೀಡುವ ಧೈರ್ಯ ಪ್ರಧಾನಿಗಿಲ್ಲ: ಅಸದುದ್ದೀನ್ ಉವೈಸಿ

Update: 2020-02-20 18:51 GMT

ಬೆಂಗಳೂರು, ಫೆ.20: ಎನ್‌ಪಿಆರ್, ಎನ್‌ಆರ್‌ಸಿ, ಸಿಎಎ ಬಗ್ಗೆ ಈ ದೇಶದ ಜನರಿಗೆ ಸ್ಪಷ್ಟವಾದ ಮಾಹಿತಿ ನೀಡುವ ಧೈರ್ಯ ಪ್ರಧಾನಿ ನರೇಂದ್ರ ಮೋದಿಗೆ ಇಲ್ಲ ಎಂದು ಎಐಎಂಐಎಂ ಅಧ್ಯಕ್ಷ, ಸಂಸದ ಅಸದುದ್ದೀನ್ ಉವೈಸಿ ಹೇಳಿದರು.

ಗುರುವಾರ ನಗರದ ಸ್ವಾತಂತ್ರ ಉದ್ಯಾನವನ ಮೈದಾನದಲ್ಲಿ ಹಿಂದೂ, ಮುಸ್ಲಿಂ ಸಿಖ್, ಈಸಾಯಿ ಫೆಡರೇಶನ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ, ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಪ್ರಕ್ರಿಯೆ ವಿರೋಧಿಸಿ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಎಪ್ರಿಲ್ ಮಾಸದಿಂದ ಎನ್‌ಪಿಆರ್ ಪ್ರಕ್ರಿಯೆ ಆರಂಭವಾಗಲಿದೆ. ಆದರೆ, ಇದರಲ್ಲಿನ ಸತ್ಯಾಂಶವನ್ನು ಕೇಂದ್ರ ಸರಕಾರ ಜನರಿಗೆ ತಿಳಿಸುತ್ತಿಲ್ಲ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ತಾವು ಅಧಿಕಾರದಲ್ಲಿರುವವರೆಗೂ ಇಂತಹ ಕಾನೂನು ಜಾರಿಯಾಗಲ್ಲ ಎಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

ಸಿಎಎ, ಎನ್‌ಆರ್‌ಸಿ ರಾಕ್ಷಸೀ ಉದ್ದೇಶ ಹೊಂದಿದ್ದು, ಸಂವಿಧಾನ ವಿರೋಧಿಯಾಗಿದೆ. ಇದನ್ನು ವಿರೋಧಿಸಿ ಪ್ರತಿಯೊಬ್ಬರು ಬೀದಿಗಿಳಿದು ಹೋರಾಟ ರೂಪಿಸಬೇಕು. ಜೈಲಿಗೆ ಹೋದರೂ ಪರವಾಗಿಲ್ಲ ಎಂದ ಅವರು, ಈ ಕಾನೂನಿನಿಂದ ಮುಸ್ಲಿಮರಷ್ಟೇ ಅಲ್ಲದೇ ಆದಿವಾಸಿಗಳು, ದಲಿತರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಸಾಕಷ್ಟು ಮಂದಿಗೆ ಪೌರತ್ವ ಸಿಗುವುದಿಲ್ಲ. ಪ್ರಣಾಳಿಕೆಯಲ್ಲಿ ಹೇಳಿದಂತೆ ಎನ್‌ಆರ್‌ಸಿ ಜಾರಿ ಮಾಡುತ್ತಿರುವುದಾಗಿ ಪ್ರಧಾನಿ ಮೋದಿ, ಅಮಿತ್ ಶಾ ಹೇಳುತ್ತಾರೆ. ಪ್ರಣಾಳಿಕೆಯಲ್ಲಿರುವ ಬೇರೆ ವಿಚಾರಗಳನ್ನು ಏಕೆ ಜಾರಿಗೆ ತಂದಿಲ್ಲ ಎಂದು ಅವರು ಪ್ರಶ್ನಿಸಿದರು.

ನಾನು ಈ ದೇಶದಲ್ಲೇ ಉಳಿಯುತ್ತೇನೆ. ಆದರೆ, ದಾಖಲೆ ಪತ್ರಗಳನ್ನು ತೋರಿಸಲಾರೆ. ದಾಖಲೆ ಕೇಳಿದರೆ ನನ್ನ ಎದೆಯನ್ನು ತೋರಿಸಿ ಗುಂಡಿಕ್ಕುವಂತೆ ಹೇಳುತ್ತೇನೆ. ಯಾಕೆಂದರೆ, ನನ್ನ ಹೃದಯದಲ್ಲಿ ಭಾರತದ ಮೇಲಿನ ಪ್ರೀತಿ ಅಡಕವಾಗಿದೆ ಎಂದು ಉವೈಸಿ ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಉಲ್ಲೇಖಿಸಿರುವ 6 ಸಮುದಾಯಗಳಿಗೆ ಪೌರತ್ವ ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ನಿರ್ದಿಷ್ಟವಾಗಿ ಒಂದು ಸಮುದಾಯವನ್ನು ಕೈಬಿಟ್ಟಿರುವುದನ್ನು ವಿರೋಧಿಸುತ್ತೇವೆ. ಅಕ್ರಮವಾಗಿ ದೇಶದೊಳಗೆ ನುಸುಳಿ ವಾಸಿಸುತ್ತಿದ್ದರೆ ಅವರನ್ನು ಹೊರಹಾಕಿ. ಆದರೆ ಈ ದೇಶದಲ್ಲಿ ಬದುಕು ಕಟ್ಟಿಕೊಂಡು ನ್ಯಾಯ ಬದ್ಧವಾಗಿ ವಾಸಿಸುತ್ತಿರುವವರ ಹಕ್ಕನ್ನು ಕಸಿದುಕೊಳ್ಳುವುದಕ್ಕೆ ನಮ್ಮ ವಿರೋಧವಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಿಟಿ ಮಾರುಕಟ್ಟೆಯ ಮಸೀದಿಯ ಖತೀಬ್ ಮೌಲಾನ ಮಖ್ಸೂದ್ ಇಮ್ರಾನ್ ರಶಾದಿ, ಹೋರಾಟಗಾರರಾದ ಭವ್ಯ ನರಸಿಂಹಮೂರ್ತಿ, ಗುರುಶಾಂತ ಪಟ್ಟೇದಾರ್, ಜೆಡಿಎಸ್ ಮುಖಂಡರಾದ ಇಮ್ರಾನ್ ಪಾಷಾ, ಶಫೀವುಲ್ಲಾ, ಎಐಎಂಐಎಂ ಪಕ್ಷದ ರಾಜ್ಯ ಮುಖಂಡ ಇಬ್ರಾಹಂ, ಶರ್ಫುದ್ದೀನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

‘ಪಾಕಿಸ್ತಾನದಲ್ಲಿ ಭಾರತ್ ಮಾತಾ ಕಿ ಜೈ ಎಂದಿದ್ದೆ’
2013ನೇ ಸಾಲಿನಲ್ಲಿ ಬಿಜೆಪಿ ಸಂಸದರು ಸೇರಿದಂತೆ ಪ್ರಮುಖರ ನಿಯೋಗ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದೆವು. ಅಲ್ಲಿನ ಮಾಧ್ಯಮಗಳು ಭಾರತದ ವಿರುದ್ಧ ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದವು. ಆಗ, ನಾನು ನೇರವಾಗಿ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಹೋಗಿ, ಅಲ್ಲಿನ ಮೌಲ್ವಿಯೊಂದಿಗೆ ಭಾರತದಲ್ಲಿ ಏಕತೆ, ಸೌಹಾರ್ದತೆ ಮತ್ತು ಸಂವಿಧಾನದ ಆಶಯಗಳ ಬಗ್ಗೆ ಹೇಳಿದ್ದೆ. ಅಷ್ಟೇ ಅಲ್ಲದೆ, ಅವರ ಮುಂದೆಯೇ 'ಭಾರತ್ ಮಾತಾ ಕೀ ಜೈ' ಎಂದಿದ್ದೆ. ಈ ಧೈರ್ಯ ಬಿಜೆಪಿ ನಾಯಕರಿಗೆ ಇದೆಯೇ?

-ಅಸದುದ್ದೀನ್ ಉವೈಸಿ ಎಐಎಂಐಎಂ ಅಧ್ಯಕ್ಷ

‘ಜೈಲುಗಳೇ ಇಲ್ಲ’
ಹೋರಾಟಗಾರರನ್ನು ಬಂಧಿಸುವ ಕಾರ್ಯ ನಡೆಯುತ್ತಿದೆ. ಆದರೆ, ನಾವು ಒಗ್ಗೂಡಿ ಬೀದಿಗಿಳಿದರೆ, ನಮ್ಮನ್ನು ಬಂಧಿಸಿ ಇಡಲು ಜೈಲುಗಳೇ ಇಲ್ಲ. ದೇಶದಲ್ಲಿರುವ ಜೈಲುಗಳಲ್ಲಿ ಬರೀ 3 ಲಕ್ಷ ಮಂದಿಯನ್ನಿಡಲು ಮಾತ್ರ ಸಾಧ್ಯ. ಬೆಂಗಳೂರಿನ ಜನರು ಪ್ರತಿಭಟಿಸಿದರೆ, ಅವರನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಡಬೇಕು. ಆಗ ಇಲ್ಲಿ ಐಪಿಎಲ್ ಪಂದ್ಯಗಳೇ ನಡೆಯುವುದಿಲ್ಲ ಎಂದು ವ್ಯಂಗ್ಯವಾಡಿದರು.

ಸಂವಿಧಾನ ವಿರೋಧಿ ಹೇಳಿಕೆ ನೀಡುವ ಹಾಗೂ ಸಂವಿಧಾನ ನಾಶ ಮಾಡಲು ಮುಂದಾಗುವವರ ನಾಲಿಗೆ ಕತ್ತರಿಸಿದರೆ 1 ಕೋಟಿ ರೂ.ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದೇನೆ.
-ಗುರುಶಾಂತ ಪಟ್ಟೇದಾರ್, ದಲಿತ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News