ಆಂಧ್ರ ಮಾದರಿ ಅಧ್ಯಯನ ನಡೆಸಿ, ನಿರ್ಧಾರ: ಲಕ್ಷ್ಮಣ ಸವದಿ

Update: 2020-02-20 19:22 GMT

ಬೆಂಗಳೂರು, ಫೆ.20: ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸುವ ಬೇಡಿಕೆ ಸಂಬಂಧ ಆಂಧ್ರಪ್ರದೇಶ ಮಾದರಿಯನ್ನು ಅಧ್ಯಯನ ನಡೆಸಿ, ಸೂಕ್ತ ನಿರ್ಧಾರ ಪ್ರಕಟಿಸುವುದಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

ಗುರುವಾರ ನಗರದ ಸ್ವಾತಂತ್ರ್ಯ ಉದ್ಯಾನವನ ಮೈದಾನದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಮೂಲಭೂತ ಹಕ್ಕುಗಳ ವಿಚಾರ ವೇದಿಕೆ ನೇತತ್ವದಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ ಧರಣಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಸಾರಿಗೆ ನೌಕರರ ಬೇಡಿಕೆ ಈಡೇರಿಸುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಹಲವು ಬಾರಿ ಚರ್ಚೆ ನಡೆಸಿದ್ದು, ಅವರು ಸಹ ಸ್ಪಂದಿಸಿ, ಈಗಾಗಲೇ ಹಿರಿಯ ಅಧಿಕಾರಿಗಳ ಸಮಿತಿ ರಚಿಸಿದ್ದಾರೆ. ಇನ್ನು ಆಂಧ್ರಪ್ರದೇಶದಂತೆ ಇಲ್ಲಿನ ನೌಕರರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕೆನ್ನುವ ಬೇಡಿಕೆ ಕುರಿತು ಅಲ್ಲಿಗೆ ಹೋಗಿ ಅಧ್ಯಯನ ನಡೆಸಲಾಗುವುದು ಎಂದರು.

ಸಾರಿಗೆ ನೌಕರರ ಜೀವನ ಭದ್ರತೆಗೆ ಅಗತ್ಯತೆಗಳನ್ನು ಪೂರೈಸಲು ಸರಕಾರವು ಬದ್ಧವಾಗಿದೆ ಎಂದ ಅವರು, ಶೀಘ್ರದಲ್ಲಿಯೇ ಆಂಧ್ರಕ್ಕೆ ಹೋಗಬೇಕೆಂದು ಭಾವಿಸಿದ್ದೇನೆ. ಆಂಧ್ರದಲ್ಲಿ ಜಾರಿಯಾದಾಗ ತೆಲಂಗಾಣದಲ್ಲೂ ಇದರ ಕೂಗು ಕೇಳಿಬಂದಿತು. ಆಗ ಅಲ್ಲಿ ಆರ್ಥಿಕ ಹೊರೆ ಸಮಸ್ಯೆ ಸೃಷ್ಟಿ ಆಗಿತ್ತು. ಇದನ್ನೆಲ್ಲಾ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸವದಿ ನುಡಿದರು.

ನಾನು ಕೆಳಹಂತದಿಂದ ಮೇಲೆ ಬಂದವನು. ಲಿಫ್ಟ್‌ನಲ್ಲಿ ಇಲ್ಲಿವರೆಗೆ ಬಂದಿಲ್ಲ. ತಳಮಟ್ಟದಲ್ಲಿ ಕಾರ್ಯ ನಿರ್ವಹಿಸುವ ನೌಕರರ ಕಷ್ಟುಗಳನ್ನು ಬಲ್ಲೆ. ಅಲ್ಲದೆ, ನಾಲ್ಕು ನಿಗಮ ಹಾನಿ ಅನುಭವಿಸುತ್ತಿದೆ. ಬಿಎಂಟಿಸಿ ಪ್ರತಿನಿತ್ಯ 1.14 ಕೋಟಿ ಹಾನಿಯಾಗುತ್ತಿದೆ. ಆದರೆ, ಸಂಚಾರ ವ್ಯತ್ಯಯ ಆಗದಂತೆ ಧರಣಿ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.

‘ಸಮವಸ್ತ್ರ ಹಣ ಖಾತೆಗೆ’
ಕಳೆದ ಮೂರು ವರ್ಷದಿಂದ ಸಮವಸ್ತ್ರ ವಿತರಣೆ ಮಾಡಿಲ್ಲ. ಆದರೆ, ಒಂದು ವರ್ಷದ ಸಮವಸ್ತ್ರ ವಿತರಣೆ ಮಾಡಿ, ಉಳಿದ ಎರಡು ವರ್ಷದ್ದು ನೌಕರರ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದರು.

‘ಸಹಕಾರ ಸಾರಿಗೆ ಬಂದ್ ಇಲ್ಲ’
ಸಹಕಾರ ತತ್ವದಡಿ ಸ್ಥಾಪಿತವಾಗಿ ಜನಪ್ರಿಯವಾಗಿರುವ ಕಾಫಿನಾಡಿನ ಸಹಕಾರ ಸಾರಿಗೆ ಸಂಸ್ಥೆ ಬಂದ್ ಮಾಡುವುದಿಲ್ಲ. ಈಗಾಗಲೇ ಅನುದಾನ ನೀಡಲು ಸೂಚಿಸಿದ್ದು, ಅಧಿಕಾರಿಗಳಿಗೆ ತಕ್ಷಣಕ್ಕೆ ಸ್ಪಂದಿಸಲು ನಿರ್ದೇಶನ ನೀಡಲಾಗಿದೆ. ಹಾಗಾಗಿ, ಕಾರ್ಮಿಕರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ.
-ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News