ಕರ್ನಾಟಕ ಪೋಲಿಸ್ ರಾಜ್ಯವಾಗುತ್ತಿದೆ: ಕ್ಯಾಂಪಸ್ ಫ್ರಂಟ್ ಆರೋಪ

Update: 2020-02-20 19:25 GMT

ಮೈಸೂರು, ಫೆ.20: ಕರ್ನಾಟಕದಲ್ಲಿ ಸಿಎಎ ವಿರುದ್ಧದ ಹೋರಾಟವು ಆರಂಭಗೊಂಡ ನಂತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವು ನಿರಂತರವಾಗಿ ನಡೆಯುತ್ತಿದೆ. ಸರಕಾರವೇ ಪೊಲೀಸ್ ಇಲಾಖೆಯ ಮೂಲಕ ಹೋರಾಟವನ್ನು ತಡೆಯುತ್ತಿರುವುದು ಕಾಣುತ್ತಿದೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಹೆಚ್ಚು ಹಿಂಸಾತ್ಮಕ ಮಾದರಿಯಲ್ಲಿ ಪೊಲೀಸರ ಹಸ್ತಕ್ಷೇಪ ಕಾಣುತ್ತಿದೆ. ಅದಕ್ಕೆ ಕರ್ನಾಟಕವು ಕೂಡ ಹೊರತಾಗಿಲ್ಲ ಎಂಬುದು ಆತಂಕಕಾರಿ ಎಂದು ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ತಿಳಿಸಿದರು.

ಆರಂಭಿಕ ಹಂತದಲ್ಲೇ ಬೆಂಗಳೂರಿನ ಕಮಿಷನರ್ ಬೇಕಾಬಿಟ್ಟಿ 144 ಸೆಕ್ಷನ್‌ಗಳನ್ನು ಹೇರಿ ಆರಂಭದಿಂದಲೇ ಹೋರಾಟವನ್ನು ಹೊಸಕಿ ಹಾಕುವ ಪ್ರಯತ್ನವನ್ನು ಮಾಡಿದ್ದಾರೆ. ಹೋರಾಟಗಾರರು ಉತ್ತರ ಭಾರತಕ್ಕೆ ತೊಲಗಿ ಎಂಬ ಹೇಳಿಕೆಯನ್ನು ನೀಡಿ ಜನಸಾಮಾನ್ಯರಲ್ಲಿ ಭೀತಿಯನ್ನು ಉಂಟು ಮಾಡಿದ್ದಾರೆ. ಪದೇ ಪದೇ ಕಾನೂನು ದುರ್ಬಳಕೆಯ ಮೂಲಕ ಹೋರಾಟದ ದಿಕ್ಕನ್ನು ತಪ್ಪಿಸುವ ಪ್ರಯತ್ನವನ್ನು ಕಂಡಿದ್ದೇವೆ ಎಂದರು.

ಇನ್ನು ಮಂಗಳೂರಿನಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮೂಲಕ ಆರಂಭಗೊಂಡ ಪೊಲೀಸರ ದೌರ್ಜನ್ಯವು ಪದೇ ಪದೇ ಪ್ರತಿಭಟನೆಯ ಅನುಮತಿ ನಿರಾಕರಣೆಯ ಮೂಲಕ ಮುಂದುವರೆಸಿದ್ದಾರೆ. ಮಾಹಿತಿ ಇಲ್ಲದೇ ನಗರದಲ್ಲಿ ಅಲ್ಪಸಂಖ್ಯೆಯಲ್ಲಿ ಸೇರಿದ್ದ ಜನಸಾಮಾನ್ಯರಿಗೆ ಲಾಠಿಯ ಮೂಲಕ ಬೆದರಿಸಿದ್ದು ಮಾತ್ರವಲ್ಲದೇ ಘಟನೆಯನ್ನು ಸಂಪೂರ್ಣವಾಗಿ ಬದಲಾಯಿಸಿ ಇಬ್ಬರು ಅಮಾಯಕರನ್ನು ಗೋಲಿಬಾರ್ ಮೂಲಕ ಕೊಂದಿರುವುದನ್ನು ನೋಡಿದ್ದೇವೆ. ಈ ಘಟನೆಯಲ್ಲಿ ಕಮಿಷನರ್ ಅವರ ಕೋಮುವಾದಿ ಮನಸ್ಥಿತಿಯು ಸ್ಪಷ್ಟವಾಗಿ ಎದ್ದು ಕಂಡಿದೆ.
ಮೈಸೂರಿನಲ್ಲಿ ಫ್ರೀ ಕಾಶ್ಮೀರ್ ಪೋಸ್ಟರ್ ಪ್ರದರ್ಶಿಸಿದ ಕಾರಣಕ್ಕೋಸ್ಕರ ವಿದ್ಯಾರ್ಥಿನಿಯನ್ನು 10 ಗಂಟೆಗಳ ಕಾಲ ವಿಚಾರಣೆಯ ನೆಪದಲ್ಲಿ ಮಾನಸಿಕ ದೌರ್ಜನ್ಯ ನಡೆಸಿದ್ದಾರೆ, ರಾಯಚೂರಿನಲ್ಲಿ ಸಿಎಎ ವಿರುದ್ಧ ಭಿತ್ತಿಪತ್ರ ಹಂಚಿದ ಕಾರಣ ಸಾಮಾಜಿಕ ಹೋರಾಟಗಾರರನ್ನು ದೌರ್ಜನ್ಯ ನಡೆಸಿದ್ದಾರೆ, ಚಿತ್ರದುರ್ಗದಲ್ಲಿ ಗೋಡೆಬರಹ ಹಚ್ಚಿದ ಕಾರಣ ಹೋರಾಟಗಾರರನ್ನು ಬೆದರಿಸಿದ್ದಾರೆ ಎಂದರು.

ಗಂಗಾವತಿಯಲ್ಲಿ ಕವಿತೆ ಬರೆದ ಕಾರಣಕ್ಕೆ ಕವಿ ಮತ್ತು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿರುವವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ. ಮಹಿಳೆಯರ ಪ್ರತಿಭಟನೆಗೆ ಅನುಮತಿಗೋಸ್ಕರ ಠಾಣೆಗೆ ಹೋದ ಯುವಕರನ್ನು ಗಂಗಾವತಿ ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇನ್ನು ರಾಜ್ಯಾದ್ಯಂತ ಸುದ್ದಿಯಾದ ಬೀದರಿನ ಶಾಹಿನ್ ಸಂಸ್ಥೆಯ ಮಕ್ಕಳು ನಾಟಕ ಪ್ರದರ್ಶಿಸಿದ ವಿರುದ್ಧ ಮಕ್ಕಳನ್ನು ವಿಚಾರಣೆಯ ಹೆಸರಿನಲ್ಲಿ ಹಿಂಸಿಸಿ ಇಬ್ಬರು ಮಹಿಳೆಯರ ಮೇಲೆ ದೇಶದ್ರೋಹ ಪ್ರಕರಣದಡಿ ಬಂಧಿಸಿರುವ ಘಟನೆಯು ಕೂಡ ಪೊಲೀಸರಿಂದ ನಡೆದಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಸರಕಾರಕ್ಕಿಂತಲೂ ಪೊಲೀಸರ ರಾಜ್ಯಭಾರ ನಡೆಯುತ್ತಿರುವುದು ಈ ಎಲ್ಲಾ ಘಟನೆಗಳಲ್ಲಿ ಕಾಣುತ್ತಿದೆ. ಇದು ಪೊಲೀಸ್ ರಾಜ್ಯದ ಪರಿಕಲ್ಪನೆಯು ಫ್ಯಾಶಿಸ್ಟರ ಆಶಯದಂತೆ ಸರಕಾರದ ಮೌನದೊಂದಿಗೆ ನಡೆಯುತ್ತಿರುವುದು ಗೋಚರಿಸುತ್ತಿದೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯು ನಡೆಯುತ್ತಿರುವ ಸಂದರ್ಭದಲ್ಲಿ ಸರಕಾರ ಮತ್ತು ಮಾನವ ಹಕ್ಕುಗಳ ಆಯೋಗವು ಅದನ್ನು ಗಂಭೀರವಾಗಿ ಪರಿಗಣಿಸಿ ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಪೊಲೀಸ್ ರಾಜ್ಯ ಪರಿಕಲ್ಪನೆಯನ್ನು ತಡೆಯಬೇಕು. ಈ ಎಲ್ಲಾ ಘಟನೆಯಲ್ಲಿ ಭಾಗಿಯಾಗುತ್ತಿರುವ ಪೊಲೀಸರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು ಮತ್ತು ಪ್ರಜ್ಞಾವಂತ ನಾಗರಿಕರು ಪೊಲೀಸರ ದೌರ್ಜನ್ಯವನ್ನು ನೋಡಿ ಮೌನ ವಹಿಸದೇ ಈ ಹೋರಾಟವನ್ನು ಇನ್ನಷ್ಟು ಹೆಚ್ಚಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿಯು ಆಗ್ರಹಿಸುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಅಶ್ರಫ್ ದಾಣಗೆರೆ, ಸಮಿತಿ ಸದಸ್ಯರಾದ ಮುಹಮ್ಮದ್ ರಿಯಾಝ್ ಮತ್ತು ನದೀಮ್ ಮೈಸೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News