ಕುವೆಂಪು ವೈಚಾರಿಕತೆಯನ್ನು ಜಿಎಸ್ಸೆಸ್ ಕಾವ್ಯ ಮರುಸ್ಥಾಪಿಸಿದೆ: ಎಚ್.ಎಸ್.ವೆಂಕಟೇಶಮೂರ್ತಿ

Update: 2020-02-21 13:06 GMT

ಬೆಂಗಳೂರು, ಫೆ.21: ಹಿರಿಯ ಸಾಹಿತಿ ಜಿ.ಎಸ್.ಶಿವರುದ್ರಪ್ಪ ಅವರ ಕವನಗಳಲ್ಲಿ ಸೌಂದರ್ಯದ ಜೊತೆಗೆ ನಿಷ್ಠುರತೆ ಮತ್ತು ವೈಚಾರಿಕತೆಯನ್ನು ಕಾಣಬಹುದು. ದೀನದಲಿತ, ಬಡವರ, ಶೋಷಿತರ ಬಗ್ಗೆ ಕಾಳಜಿ ಹೊಂದಿದ್ದರು. ಮನುಷ್ಯ ಸಂಬಂಧಗಳಿಗೆ ಹೆಚ್ಚಿನ ಮನ್ನಣೆ ನೀಡಿದ್ದ ವ್ಯಕ್ತಿಯಾಗಿದ್ದಾರೆ ಎಂದು ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ ಹೇಳಿದ್ದಾರೆ.

ಡಾ.ಜಿಎಸ್ಸೆಸ್ ವಿಶ್ವಸ್ತ ಮಂಡಳಿ ವತಿಯಿಂದ ಆಯೋಜಿಸಿದ್ದ ಡಾ.ಜಿಎಸ್ಸೆಸ್ ಪ್ರಶಸ್ತಿ ಪ್ರದಾನ, ಜಿಎಸ್ಸೆಸ್ ನೆನಪಿನ ಶೂದ್ರ ಪತ್ರಿಕೆಯ ಕವಿಗೋಷ್ಠಿ, ಸಮಗ್ರ ಕಾವ್ಯ ಸಂಪುಟ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಿ.ಎಸ್.ಶಿವರುದ್ರಪ್ಪ ಅವರ ಕಾವ್ಯಗಳು ಕುವೆಂಪು ಅವರ ವೈಚಾರಿಕತೆಯನ್ನು ಮರುಸ್ಥಾಪಿಸಿವೆ. ಅವರ ಕವನಗಳಲ್ಲಿ ಸೌಂದರ್ಯದ ಜೊತೆಗೆ ನಿಷ್ಠುರತೆ ಮತ್ತು ವೈಚಾರಿಕತೆಯನ್ನು ಕಾಣಬಹುದು ಎಂದ ಅವರು, ಜಿಎಸ್ಸೆಸ್ ಕವಿತೆಗಳಲ್ಲಿ ಬದುಕಿನ ಕಠೋರ ವಾಸ್ತವಾಂಶ ಕಾಣಬಹುದಾಗಿದೆ ಎಂದರು.

ಕಾವ್ಯರಚನೆಯಲ್ಲಿ ತೊಡಗಿದ್ದ ಜಿಎಸ್ಸೆಸ್ ಕಾವ್ಯವನ್ನು ಮನೋಧರ್ಮವೆಂಬಂತೆ ಉಳಿಸಿಕೊಂಡು ಬಂದವರು. ಇವರಿಗೆ ಕಾವ್ಯವೆನ್ನುವುದು ಸತತ ಶ್ರಮದಿಂದ ಪ್ರಜ್ಞಾಪೂರ್ವಕ ರೂಢಿಸಿಕೊಂಡ ಕೃಷಿಯಲ್ಲ ಅಥವಾ ಕೇವಲ ಪ್ರಯತ್ನಗಳಿಂದಲೇ ಸಾಧಿಸಬೇಕಾದ ಗುರಿಯೂ ಅಲ್ಲ. ಅವರಿಗೆ ಕಾವ್ಯವೆನ್ನುವುದು ಒಂದು ಮನೋಧರ್ಮ, ಜೀವನಶೈಲಿ. ಹಾಗಾಗಿ ಇವರು ಕಾವ್ಯಸಿದ್ದಾಂತ, ಪಂಥಗಳ ಗೋಜು ಹಚ್ಚಿಕೊಳ್ಳದೆ ಬರೆದರು ಎಂದು ಅವರು ಹೇಳಿದರು.

ನವೋದಯ ಸಾಹಿತ್ಯ ಕಾಲದ ಮೊದಲ ನಾಸ್ತಿಕ ಕವಿಯಾಗಿದ್ದ ಜಿಎಸ್ಸೆಸ್, ಯಾವುದೇ ಪರಿಸ್ಥಿತಿಯಲ್ಲೂ ದೇವರ ಮೊರೆ ಹೋದವರಲ್ಲ. ಮಾನವ ಸಂಬಂಧಗಳ ಬಗ್ಗೆ ನಂಬಿಕೆ ಇಟ್ಟಿದ್ದರು. ಅವರ ಕಾವ್ಯಗಳೂ ಮಾನವೀಯ ಸಂಬಂಧಗಳನ್ನು ಧ್ಯಾನಿಸುತ್ತವೆ. ಅವರ ಕತೆಗಳಿಗೆ ವ್ಯಾಖ್ಯಾನದ ಅಗತ್ಯವಿಲ್ಲ. ಅವುಗಳನ್ನು ಓದುತ್ತಾ ಹೋದಂತೆ ಅರ್ಥ ಹೆಚ್ಚಿಸಿಕೊಳ್ಳುವುದು ಅವರ ಕವಿತೆಗಳ ವಿಶೇಷ ಎಂದು ನುಡಿದರು.

ವಿಮರ್ಶಕ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ಮಾತನಾಡಿ, ಡಾ.ಜಿ.ಎಸ್. ಶಿವರುದ್ರಪ್ಪ ಕನ್ನಡ ಅಧ್ಯಯನಕ್ಕೆ ಹೊಸ ರೂಪ ಕೊಟ್ಟರು. ಆದರೆ, ಪ್ರಸ್ತುತದಲ್ಲಿ ರಾಜ್ಯದ ಯಾವ ವಿಶ್ವ ವಿದ್ಯಾಲಯಗಳು ಅಥವಾ ಕನ್ನಡ ಪ್ರಾಧ್ಯಾಪಕರು ಕನ್ನಡಕ್ಕಾಗಿ ಶ್ರಮಿಸಿದ್ದಾರೆಯೇ ಎಂದು ಹುಡುಕಿದರೆ ಒಬ್ಬರೂ ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಎಸ್‌ಎಸ್ ಅವರ ಕತೆಗಳು ಬದುಕಿನ ಎಲ್ಲ ಸಂಗತಿಗಳನ್ನು ಪ್ರಸ್ತುತಪಡಿಸುತ್ತವೆ. ಕಾವ್ಯ ಎಂದರೆ ಒಂದು ಸಿದ್ಧಾಂತವನ್ನು ಉಗ್ರವಾಗಿ ಖಂಡಿಸುವುದು ಅಥವಾ ಒಂದು ವಿಚಾರವನ್ನು ಮೃದುವಾಗಿ ಬಿಂಬಿಸುವುದೂ ಅಲ್ಲ. ಸಾಮಾಜಿಕ, ತಾತ್ವಿಕತೆ ಕುರಿತ ಕಾವ್ಯಗಳಿಗೂ ಸಾಹಿತ್ಯದಲ್ಲಿ ಅವಕಾಶವಿದೆ. ಜಿಎಸ್ಸೆಸ್‌ರ ಕತೆಗಳು ಇವತ್ತಿಗೂ ಪ್ರಸ್ತುತವೆನಿಸುವಂತಿವೆ. ಕುವೆಂಪು ಅವರ ಉತ್ತರಾಧಿಕಾರಿ ಜಿಎಸ್‌ಎಸ್ ಆಗಿದ್ದಾರೆ ಎಂದರು.

ಕವಿ ಸಿದ್ಧಲಿಂಗಯ್ಯ ಅವರು ಮಾತನಾಡಿ, ಜಿಎಸ್‌ಎಸ್ ನಮ್ಮಂತವರನ್ನು ಪ್ರೋತ್ಸಾಹಿಸುವ ಮೂಲಕ ಕನ್ನಡ ಅಧ್ಯಯನ ವಿಭಾಗವನ್ನು ಕಟ್ಟಿದರು. ನಾಡಿನಲ್ಲಿ ವೈಚಾರಿಕತೆಯ ಬೀಜ ಬಿತ್ತಿದರು. ವೈಯಕ್ತಿಕವಾಗಿ ಹೇಳುವುದಾದರೆ ಅವರು ನನ್ನ ಅನ್ನದಾತರು. ಕೆಲಸ ಕೊಡಿಸಿದರು ಎಂದು ನೆನಪಿಸಿಕೊಂಡರು.

ಇದೇ ವೇಳೆ ಸಮಾರಂಭದಲ್ಲಿ ಜಿಎಸ್ಸೆಸ್‌ಗೆ ಕಾವ್ಯ ನಮನ ಸಲ್ಲಿಸಲಾಯಿತು. ಅಲ್ಲದೆ, ಡಾ.ಜಿಎಸ್ಸೆಸ್ ಅವರ ಸಮಗ್ರ ಕಾವ್ಯ ಸಂಪುಟ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಲೇಖಕ ಡಾ.ಕರೀಗೌಡ ಬೀಚನಹಳ್ಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಚಿಂತಕ ಮೂಡ್ನಾಕೂಡು ಚಿನ್ನಸ್ವಾಮಿ, ವಿಮರ್ಶಕ ಎಸ್.ಆರ್.ವಿಜಯಶಂಕರ್ ಸೇರಿದಂತೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News